25 ಲಕ್ಷ ರೂ. ಪೀಕಿದ ಯುವತಿ, 15 ಲಕ್ಷ ಲಂಚ ಕೇಳಿದ ಸಿಪಿಐ

ಗದಗ: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಯುವತಿ ಪ್ರೀತಿ, ಪ್ರೇಮದ ಹೆಸರಿನಲ್ಲಿ ಗಜೇಂದ್ರಗಡದ ವ್ಯಕ್ತಿಯಿಂದ 25 ಲಕ್ಷ ರೂ. ಯಾಮಾರಿಸಿದ ಘಟನೆ ನಡೆದಿದೆ.
ಗಜೇಂದ್ರಗಡದ ರಾಘವೇಂದ್ರ ರಾಠೋಡಗೆ ಇನ್‌ಸ್ಟಾಗ್ರಾಂನಲ್ಲಿ ಯುವತಿಯೊಬ್ಬಳು ಪರಿಚಯವಾಗಿದ್ದಾಳೆ. ಪರಿಚಯ ಪ್ರೀತಿಗೆ ತಿರುಗಿದೆ. ಯುವತಿ ತನ್ನ ಮನೆಯಲ್ಲಿ ಕಷ್ಟವಿದೆ. ಸ್ವಲ್ಪ ಹಣ ಸಾಲವಾಗಿ ನೀಡುವಂತೆ ಕೇಳಿದ್ದಾಳೆ. ಯುವತಿಗೆ ರಾಘವೇಂದ್ರ ರಾಠೋಡ ಹಂತ ಹಂತವಾಗಿ 25 ಲಕ್ಷ ರೂ. ನೀಡಿದ್ದಾರೆ. ಕೆಲ ತಿಂಗಳು ನಂತರ ರಾಘವೇಂದ್ರ ರಾಠೋಡ ಹಣ ವಾಪಸ್ ಕೇಳಿದಾಗ ಯುವತಿ ಹಣ ವಾಪಸ್ಸು ನೀಡದೆ ತಿರಸ್ಕರಿಸಿದ್ದಾಳೆ.
ಯುವತಿಯ ವಿರುದ್ಧ ದೂರು ನೀಡಲು ತೆರಳಿದ ರಾಘವೇಂದ್ರ ರಾಠೋಡನನ್ನು ರೋಣ ಸಿಪಿಐ ಸಿದ್ದಪ್ಪ ಬೀಳಗಿ ಬೆದರಿಸಿ 15 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು. ಅದರಂತೆ ಮೂರು ಲಕ್ಷ ರೂಪಾಯಿ ನೀಡಿದ್ದು, ಉಳಿದ ಹಣ ನೀಡುವಂತೆ ಪೀಡಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ರಾಘವೇಂದ್ರ ರಾಠೋಡ ದೂರಿದ್ದಾರೆ.
ಯುವತಿಯು ಸಿಪಿಐ ಬೀಳಗಿ ಸಂಬಂಧಿಕರಂತೆ. ಯುವತಿಯಿಂದ ಹಣ ಕೊಡಿಸುವಂತೆ ಕೋರಿ ದೂರು ನೀಡಲು ಹೋದಾಗ ಸಿಪಿಐ ಬೆದರಿಸಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ದೃಶ್ಯ ಠಾಣೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯ ನೀಡುವಂತೆ ಕೇಳಿದ್ದೇನೆಂದು ರಾಘವೇಂದ್ರ ರಾಠೋಡ ತಿಳಿಸಿದ್ದಾರೆ. ಮಾಹಿತಿ ಹಕ್ಕಿನಡಿ ಸಿಸಿ ಟಿವಿ ದೃಶ್ಯಾವಳಿ ನೀಡಿ ಎಂದು ಕೇಳಿದ್ದರಿಂದ ಸಿಪಿಐ ಅವರು ರೇಪ್ ಕೇಸ್ ಹಾಕಿಸುವುದಾಗಿ ಬೆದರಿಸಿದರೆಂದು ರಾಘವೇಂದ್ರ ಆರೋಪಿಸಿದ್ದಾರೆ.