Home Advertisement
Home ನಮ್ಮ ಜಿಲ್ಲೆ ಜಾರಕಿಹೊಳಿ ಕುಟುಂಬದ ವಿರುದ್ಧ ಷಡ್ಯಂತ್ರ: ಲಖನ್ ತಿರುಗೇಟು

ಜಾರಕಿಹೊಳಿ ಕುಟುಂಬದ ವಿರುದ್ಧ ಷಡ್ಯಂತ್ರ: ಲಖನ್ ತಿರುಗೇಟು

0
131
ಲಖನ್

ಗೋಕಾಕ : ಕಳೆದ ೩೦ ವರ್ಷಗಳಿಂದಲೂ ಜಾರಕಿಹೊಳಿ ಕುಟುಂಬದ ವಿರುದ್ಧ ಷಡ್ಯಂತ್ರ ಮಾಡುತ್ತಾ ಬಂದಿದ್ದಾರೆ. ಇದಕ್ಕೆಲ್ಲಾ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ವಿಧಾನಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೇಳಿದ್ದಾರೆ.
ಗೋಕಾಕದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮ ಕುಟುಂಬ ಎಲ್ಲಾ ಸಮಾಜದವರೊಂದಿಗೆ ಸಾಮರಸ್ಯದಿಂದ ಇದ್ದೇವೆ. ಇದು ಕೆಲವರಿಗೆ ಸಹಿಸುವುದಕ್ಕೆ ಆಗುವುದಿಲ್ಲ. ಹಾಗಾಗಿ ಇಂತಹ ಷಡ್ಯಂತ್ರ ನಡೆಸುತ್ತಿದ್ದಾರೆ. ಆದರೆ ನಮ್ಮ ಜತೆಗೆ ಜನರಿದ್ದಾರೆ. ನಮ್ಮನ್ನು ಗೆಲ್ಲಿಸುವುದು-ಸೋಲಿಸುವ ನಿರ್ಧಾರವನ್ನು ನಮ್ಮ ಜನರೇ ಮಾಡುತ್ತಾರೆ ಎಂದರು.
ಜಾರಕಿಹೊಳಿ ಕುಟುಂಬದಲ್ಲಿ ಕೆಲವರು ಕಾಂಗ್ರೆಸ್‌ನಲ್ಲಿದ್ದರೆ, ಕೆಲವರು ಬಿಜೆಪಿಯಲ್ಲಿದ್ದಾರೆ. ಅವರವರ ಶಕ್ತಿ ಸಾಮರ್ಥ್ಯ ಅವರವರಲ್ಲಿದೆ. ಅದನ್ನು ಹೇಗೆ ಉಪಯೋಗಿಸಬೇಕು ಎಂಬುದು ಅವರಿಗೆ ತಿಳಿದಿದೆ. ನಮ್ಮನ್ನು ಸೋಲಿಸಬೇಕೆಂದು ಕಾಣದ ಕೈಗಳು ಲೆಕ್ಕಾಚಾರ ಹಾಕುತ್ತಿರುವುದು ನಮಗೂ ಗೊತ್ತು. ಆದರೆ ಅವರ ಲೆಕ್ಕಾಚಾರ ಬುಡಮೇಲು ಮಾಡುವ ಶಕ್ತಿ ನಮ್ಮ ಜನರಲ್ಲಿದೆ. ಹಾಳೆ ಪೆನ್ ಅವರ ಕೈಯಲ್ಲಿದೆ. ಅವರೇ ಹಣೆಬರಹ ಬರೀತಾರೆ ಎಂದು ತಿರುಗೇಟು ನೀಡಿದರು.
ಇಂತಹ ಷಡ್ಯಂತ್ರ ಮಾಡುವವರಿಗೆ ಚುನಾವಣೆಯ ತನಕವೂ ಸಮಯವಿದೆ. ಮಾಡಲಿ ಬಿಡಿ, ನಾವಂತೂ ಇಂತಹ ವಿಷಯ ಮಾತನಾಡಿ ಅವರಿಗೆ ಬಿಟ್ಟಿ ಪ್ರಚಾರ ನೀಡುವುದಿಲ್ಲ. ಈ ಬಗ್ಗೆ ಜಾಸ್ತಿ ಮಾತನಾಡುವುದು ಇಲ್ಲ. ಜಾರಕಿಹೊಳಿ ಕುಟುಂಬ ಕಳೆದ ೩೦ ವರ್ಷಗಳಿಂದಲೂ ಇಂತಹ ಪಿತೂರಿ, ಷಡ್ಯಂತ್ರ ನೋಡಿಕೊಂಡೇ ಈ ಹಂತಕ್ಕೆ ಬೆಳೆದು ಬಂದಿದೆ ಎಂದು ಲಖನ್ ಜಾರಕಿಹೊಳಿ ಹೇಳಿದರು.