SK Home Ad
Home ಸುದ್ದಿ ರಾಜ್ಯ ಅರಮನೆ ಮೈದಾನದಲ್ಲಿ ಅದ್ದೂರಿ ಉತ್ತರ ಕರ್ನಾಟಕ ಉತ್ಸವ

ಅರಮನೆ ಮೈದಾನದಲ್ಲಿ ಅದ್ದೂರಿ ಉತ್ತರ ಕರ್ನಾಟಕ ಉತ್ಸವ

0
31

​ಬೆಂಗಳೂರು: ಸಮ್ರಗ ಕರ್ನಾಟಕದ ಅಭಿವೃದ್ಧಿಯೊಂದಿಗೆ ಮಾತ್ರ ಉತ್ತರ ಕರ್ನಾಟಕ ಅಭಿವೃದ್ಧಿ ಸಾಧ್ಯ. ಮುಂದಿನ ದಶಕ ಮತ್ತು ಶತಕ ಉತ್ತರ ಕರ್ನಾಟಕದ್ದೇ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಿರುವ ಉತ್ತರ ಕರ್ನಾಟಕ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ​ನಮ್ಮ ಊರು ಮತ್ತು ಬೇರು ಎರಡೂ ಬಹಳ ಮುಖ್ಯ. ಉತ್ತರ ಕರ್ನಾಟಕದ ಮಣ್ಣು, ನೀರು ಹಾಗೂ ಕೃಷಿ ಕಲೆ ಫಲವತ್ತಾಗಿದ್ದು, ಸಕ್ಕರೆ ಉದ್ಯಮ ಸೇರಿದಂತೆ ಹಲವು ಕ್ಷೇತ್ರಗಳು ಇಲ್ಲಿಂದ ಪ್ರೇರಣೆ ಪಡೆದು ಬೆಳೆದಿವೆ ಎಂದು ಹೇಳಿದರು.

​ಯುವಜನತೆ ಮತ್ತು ಐಟಿ-ಬಿಟಿ: ಬೆಂಗಳೂರಿನ ಐಟಿ-ಬಿಟಿ ಕ್ಷೇತ್ರದಲ್ಲಿ ಶೇ. 30ರಿಂದ 35ರಷ್ಟು ಉತ್ತರ ಕರ್ನಾಟಕದ ಯುವಕರಿದ್ದಾರೆ. ಅವರಿಗೆ ಮತ್ತಷ್ಟು ಅವಕಾಶಗಳು ಸಿಗಬೇಕು ಹಾಗೂ ಯುವಕರನ್ನು ದುಶ್ಚಟಗಳಿಂದ ರಕ್ಷಿಸಿ ಮುನ್ನಡೆಸಬೇಕು ಎಂದರು.

​ಶಿಕ್ಷಣ ಸಂಸ್ಥೆಗಳ ಕೊಡುಗೆ: ಹಿಂದಿನ ಕಾಲದಲ್ಲಿ ಮಠಮಾನ್ಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಕಟ್ಟಿದ ಅಡಿಪಾಯದಿಂದಾಗಿ ಇಂದು ನಮ್ಮ ಜನರು ವಿವಿಧ ರಂಗಗಳಲ್ಲಿ ಮುಂದೆ ಬರಲು ಸಾಧ್ಯವಾಗಿದೆ. ಬದಲಾಗುತ್ತಿರುವ ತಾಂತ್ರಿಕ ಯುಗಕ್ಕೆ ತಕ್ಕಂತೆ ಮಕ್ಕಳಿಗೆ ಶಿಕ್ಷಣ ಮತ್ತು ಅವಕಾಶಗಳು ದೊರೆಯಬೇಕು ಎಂದು ಹೇಳಿದರು.

​ನೀರಾವರಿ ಮತ್ತು ಕೈಗಾರಿಕೆ: ಯುಕೆಪಿ ಹಂತ-3 ಸೇರಿದಂತೆ ಬಾಕಿ ಇರುವ ನೀರಾವರಿ ಯೋಜನೆಗಳು ಪೂರ್ಣಗೊಂಡರೆ ಸುಮಾರು 13 ಲಕ್ಷ ಎಕರೆ ಪ್ರದೇಶಕ್ಕೆ ನೀರು ಒದಗಿಸಲು ಸಾಧ್ಯವಾಗುತ್ತದೆ. ಜೊತೆಗೆ ಉತ್ತರ ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲೂ ಕೈಗಾರಿಕೆಗಳು, ಸಾಫ್ಟ್‌ವೇರ್ ಉದ್ಯಮಗಳು ಮತ್ತು ಸುಸಜ್ಜಿತ ಆಸ್ಪತ್ರೆಗಳು ಸ್ಥಾಪನೆಯಾಗಬೇಕು ಎಂದರು.

​ಮುಂದಿನ ದಶಕ ಉತ್ತರ ಕರ್ನಾಟಕದ್ದು: ಮುಂದಿನ ಶತಕ ಮತ್ತು ದಶಕ ಉತ್ತರ ಕರ್ನಾಟಕದ ಅಭಿವೃದ್ಧಿಯ ದಶಕವಾಗಲಿದೆ. ಉತ್ತರ ಕರ್ನಾಟಕದ ವಿಷಯ ಬಂದಾಗ ಎಲ್ಲರೂ ಪಕ್ಷಾತೀತವಾಗಿ ಒಂದೇ ಧ್ವನಿಯಲ್ಲಿ ಮಾತನಾಡಿ, ಸರ್ಕಾರಗಳ ಮೇಲೆ ಒತ್ತಡ ತಂದು ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಲಕ್ಷ್ಮಣ ಸವದಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಸೋಮಶೇಖರ, ಮಹಾಸಂಸ್ಥೆಯ ಅಧ್ಯಕ್ಷ ಶಿವಕುಮಾರ ಮೇಟಿ, ಪ್ರಧಾನ ಕಾರ್ಯದರ್ಶಿ ಶಂಕರ ಪಾಗೋಜಿ, ಉತ್ತರ ಕರ್ನಾಟಕದ ಭಾಗದ ಸಾಧಕರಾದ ಎಸ್. ಎನ್. ಕಾತರಕಿ, ಬಸವರಾಜ ದಿಂಡೂರ, ಪಾಲಾಕ್ಷ ಬಾಣದ, ಬಸವರಾಜ ಬೀಳೂರು, ಎಂ.ವಿ. ನೆಗಳೂರ, ಕಲ್ಲಪ್ಪ‌ ನವಣಿ ಅವರನ್ನು ಸನ್ಮಾನಿಸಲಾಯಿತು.

ನಂತರ ಉತ್ತರ ಕರ್ನಾಟಕ ಭಾಗದ ಡೊಳ್ಳುಕುಣಿತ, ಮುಳ್ಳು ಹೆಜ್ಜೆಮೇಳ, ಕರಡಿ ಮಜಲು, ಗೊಂದಲಿಗರ ಪದ, ಮಲ್ಲಕಂಬ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.