SK Home Ad
Home ಸುದ್ದಿ ರಾಜ್ಯ ಕ್ಷೇತ್ರ ವಿಂಗಡಣೆ: ಕರ್ನಾಟಕ ಶಾಸಕರ ಸಂಖ್ಯೆ 336ಕ್ಕೆ ಏರಿಕೆ, ರಾಜ್ಯ ರಾಜಕೀಯ ಚಿತ್ರಣವೇ ಬದಲು

ಕ್ಷೇತ್ರ ವಿಂಗಡಣೆ: ಕರ್ನಾಟಕ ಶಾಸಕರ ಸಂಖ್ಯೆ 336ಕ್ಕೆ ಏರಿಕೆ, ರಾಜ್ಯ ರಾಜಕೀಯ ಚಿತ್ರಣವೇ ಬದಲು

0
5

ಕೆ.ವಿ. ಪರಮೇಶ್
ಬೆಂಗಳೂರು: ಲೋಕಸಭಾ ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಮಸೂದೆ ಜಾರಿ ಸನ್ನಿಹಿತ ಎನ್ನುವ ಸನ್ನಿವೇಶ ಸೃಷ್ಟಿಯಾಗುತ್ತಿರುವಂತೆಯೇ ರಾಜ್ಯ ವಿಧಾನಸಭೆ ಮತ್ತು ಸಂಸತ್ ಪ್ರಾತಿನಿಧ್ಯದ ಚಿತ್ರಣವೇ ಸಂಪೂರ್ಣ ಬದಲಾಗಲಿದೆ. ಶೇ. 50ರಷ್ಟು ಸ್ಥಾನಗಳ ಏರಿಕೆಯಾದಲ್ಲಿ ಕರ್ನಾಟಕದ ವಿಧಾನಸಭಾ ಸ್ಥಾನಗಳು 224 ರಿಂದ 336ಕ್ಕೆ ಹಾಗೂ ಲೋಕಸಭಾ ಸ್ಥಾನಗಳು 28 ರಿಂದ 42ಕ್ಕೆ ಏರಿಕೆಯಾಗಲಿವೆ.

ರಾಜಧಾನಿ ಬೆಂಗಳೂರಿನಲ್ಲಿ ಈಗಿರುವ 28 ಕ್ಷೇತ್ರಗಳು ಬರೋಬ್ಬರಿ 53ಕ್ಕೆ ಏರಿಕೆಯಾಗಲಿದೆ. ಇದರಿಂದ ಸಹಜವಾಗಿಯೇ ಸರ್ಕಾರ ರಚನೆಯ ಸರಳ ಬಹುಮತ ಸಂಖ್ಯೆ (ಮ್ಯಾಜಿಕ್ ನಂಬರ್) 113 ರಿಂದ 169ಕ್ಕೆ ಜಿಗಿಯಲಿದೆ. ಜೊತೆಗೆ ಮಹಿಳಾ ಮೀಸಲಾತಿಯಡಿ ಕಡ್ಡಾಯವಾಗಿ 112 ಮಂದಿ ಶಾಸಕಿಯರು ವಿಧಾನಸೌಧ ಪ್ರವೇಶಿಸಲಿದ್ದಾರೆ.

ರಾಜಕೀಯ ಆಕಾಂಕ್ಷಿಗಳಿಗೆ ಹೊಸ ಅವಕಾಶ: ಕ್ಷೇತ್ರ ಮರುವಿಂಗಡಣೆ ಮಸೂದೆ ಜಾರಿಯಾದರೆ ಕರ್ನಾಟಕದ ವಿಧಾನಸಭಾ ಸ್ಥಾನಗಳ ಸಂಖ್ಯೆ 224 ರಿಂದ 336ಕ್ಕೆ ಹಾಗೂ ಲೋಕಸಭಾ ಸ್ಥಾನಗಳ ಸಂಖ್ಯೆ ಈಗಿರುವ 28 ರಿಂದ 42ಕ್ಕೆ ಏರಿಕೆಯಾಗಲಿದೆ. ವಿಧಾನಸೌಧಕ್ಕೆ 112 ಶಾಸಕರು ಮತ್ತು ಸಂಸತ್‌ಗೆ ರಾಜ್ಯದಿಂದ ಹೆಚ್ಚುವರಿಯಾಗಿ 14 ಸದಸ್ಯರು ಎಂಟ್ರಿ ಪಡೆಯಲಿದ್ದಾರೆ.

ಎಲ್ಲಾ ರಾಜಕೀಯ ಪಕ್ಷಗಳಿಗೆ ಸರಳ ಬಹುಮತದ ಸವಾಲು: ಸದ್ಯದ ಸನ್ನಿವೇಶದಲ್ಲಿ ಶಾಸನಸಭೆಯಲ್ಲಿ 113 ಶಾಸಕರ ಸರಳ ಬಹುಮತವಿದ್ದತೆ ಸರ್ಕಾರ ರಚಿಸಬಹುದು. ಆದರೆ, ಶಾಸಕರ ಸಂಖ್ಯೆ 336ಕ್ಕೆ ಏರಿಕೆಯಾದರೆ ಅಧಿಕಾರದ ಗದ್ದುಗೆ ಹಿಡಿಯಲು ಯಾವುದೇ ರಾಜಕೀಯ ಪಕ್ಷಕ್ಕೂ ಕನಿಷ್ಠ 169 ಶಾಸಕರ ಬೆಂಬಲ ಅತ್ಯಗತ್ಯವಾಗುತ್ತದೆ. ಹಾಗಾಗಿ ಪಕ್ಷಗಳು ಸರ್ಕಾರ ರಚಿಸಲು ಹೆಚ್ಚುವರಿಯಾಗಿ 56 ಕ್ಷೇತ್ರಗಳನ್ನು ಗೆದ್ದುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಈವರೆಗೆ ಕೇವಲ ಗ್ರಾಮೀಣ ಕರ್ನಾಟಕವನ್ನು ಅತಿಯಾಗಿ ನಂಬಿಕೊಂಡಿದ್ದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಇನ್ನು ಮುಂದೆ ಬೆಂಗಳೂರು ಮಹಾನಗರ ನಗರ ವ್ಯಾಪ್ತಿಯ ಕ್ಷೇತ್ರಗಳತ್ತಲೂ ಗಮನ ಕೇಂದ್ರೀಕರಿಸಬೇಕಾಗಬಹುದು.

ಬೆಂಗಳೂರಲ್ಲೇ 25 ಕ್ಷೇತ್ರ ಸೃಷ್ಟಿ: ಕ್ಷೇತ್ರ ಮರುವಿಂಗಡಣೆಯಲ್ಲಿ ಬಹುದೊಡ್ಡ ಲಾಭ ಸಿಗುವುದು ರಾಜಧಾನಿ ಬೆಂಗಳೂರಿಗೆ. ಶೇ. 50ರಷ್ಟು ಕ್ಷೇತ್ರ ಹೆಚ್ಚಳವಾದರೆ ಈಗಿರುವ 28 ಕ್ಷೇತ್ರಗಳ ಸಂಖ್ಯೆ ಬರೋಬ್ಬರಿ 53ಕ್ಕೆ ಏರಿಕೆಯಾಗಲಿದೆ. ಅಷ್ಟೇ ಅಲ್ಲ ದಶಕಗಳಿಂದ ನಂಬರ್ ಒನ್(ಹಳೆಯ 18 ಪ್ರಸ್ತಾವಿತ 26) ಸ್ಥಾನದಲ್ಲಿದ್ದ ಬೆಳಗಾವಿಯನ್ನೂ ಮೀರಿಸಿ ಬೆಂಗಳೂರು ಮೊದಲ ಸ್ಥಾನ ಆಕ್ರಮಿಸಿಕೊಳ್ಳಲಿದೆ. ಜೊತೆಗೆ ರಾಜಕೀಯ ಪಕ್ಷಗಳ ಪಾಲಿಗೂ ರಾಜಧಾನಿ ಬೆಂಗಳೂರು ನಿರ್ಣಾಯಕವಾಗಲಿದೆ. ರಾಜ್ಯದಲ್ಲಿ ಸೃಷ್ಟಿಯಾಗುವ ಹೆಚ್ಚುವರಿ 112 ಹೊಸ ಕ್ಷೇತ್ರಗಳಲ್ಲಿ ಬೆಂಗಳೂರು ಮಹಾನಗರ ಒಂದರಲ್ಲೇ 25 ಹೊಸ ಕ್ಷೇತ್ರಗಳು ಹೊಸದಾಗಿ ಅಸ್ತಿತ್ವಕ್ಕೆ ಬರಲಿವೆ.

ಕ್ಷೇತ್ರ ಮರುವಿಂಗಡಣೆ ಸೂತ್ರವೇನು?: ಸಂವಿಧಾನದ 82ನೇ ವಿಧಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಗೆ ಹಾಗೂ 170ನೇ ವಿಧಿ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ಗಡಿ ಮರುಹೊಂದಾಣಿಕೆಗೆ ಅವಕಾಶ ನೀಡುತ್ತದೆ. ದೇಶದಲ್ಲಿ ಈ ಹಿಂದೆ 1952, 1963, 1973 ಮತ್ತು 2002ರಲ್ಲಿ ಕ್ಷೇತ್ರ ಮರುವಿಂಗಡಣೆ ಆಯೋಗಗಳನ್ನು ರಚಿಸಲಾಗಿತ್ತು.

ಈಗಿನ ವಿಧಾನಸೌಧ ಸಾಕಾ? ಹೊಸ ವಿಧಾನಸೌಧ ಬೇಕಾ?: ಕ್ಷೇತ್ರ ಮರುವಿಂಗಡಣೆಯನ್ನು ಗಮನದಲ್ಲಿ ಇರಿಸಿಕೊಂಡೇ ಕೇಂದ್ರ ಸರ್ಕಾರ ದೆಹಲಿಯಲ್ಲಿ ಹೊಸ ಸಂಸತ್ ಭವನ ನಿರ್ಮಿಸಿ, ಸಂಸದರ ಆಸನಗಳ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸುವ ಸೌಕರ್ಯವನ್ನು ಕಲ್ಪಿಸಿದೆ. ಕರ್ನಾಟಕದಲ್ಲಿರುವ ವಿಧಾನಸೌಧದಲ್ಲಿ ಪ್ರಸ್ತುತ ಸಭಾಧ್ಯಕ್ಷರೂ ಸೇರಿದಂತೆ 224 ಸದಸ್ಯರಿಗೆ ವಿಧಾನಸಭೆ ಒಳಾಂಗಣ ವಿನ್ಯಾಸವಿದೆ. ಇದೀಗ ಶಾಸಕರ ಸಂಖ್ಯೆ 336ಕ್ಕೆ ಏರಿಕೆಯಾದಲ್ಲಿ 112 ಹೆಚ್ಚುವರಿ ಸದಸ್ಯರು ಆಸೀನರಾಗಲು ವಿಧಾನಸಭೆಯ ಒಳಾಂಗಣದ ವಿನ್ಯಾಸವೂ ಬದಲಾಗಬೇಕಾಗುತ್ತದೆ. ಪ್ರಸ್ತುತ ಸ್ವಲ್ಪಮಟ್ಟಿಗೆ ವಿಶಾಲವಾಗಿಯೇ ಇರುವ ಶಾಸಕರ ವೈಯಕ್ತಿಕ ಆಸನಗಳ ವಿನ್ಯಾಸವನ್ನು ಬದಲಿಸಿ ಸಂಸತ್ ಭವನದ ಮಾದರಿಯಲ್ಲಿ ವೃತ್ತಾಕಾರ ಪಡೆದುಕೊಳ್ಳಬಹುದು. ಇರುವ ಸ್ಥಳದಲ್ಲೇ ಅವಕಾಶ ಮಾಡಿಕೊಡಬೇಕಾಗಿರುವ ಕಾರಣದಿಂದ ಒಳಾಂಗಣ ವಿನ್ಯಾಸ ದಶಕಗಳ ಬಳಿಕ ದೊಡ್ಡಮಟ್ಟದಲ್ಲಿ ನವೀಕರಣಗೊಳ್ಳಬೇಕಾಗುತ್ತದೆ. ಹೊಸ ವಿಧಾನಸೌಧ ನಿರ್ಮಿಸುವ ಸಾಧ್ಯತೆ ಬಹಳ ಕಡಿಮೆ.

ಮೀಸಲು ಕ್ಷೇತ್ರಗಳೂ ಏರಿಕೆ: ರಾಜ್ಯದಲ್ಲಿರುವ ಲೋಕಸಭಾ ಎಸ್ಸಿ/ಎಸ್ಟಿ ಮೀಸಲಾತಿ ಕ್ಷೇತ್ರಗಳೂ ಏರಿಕೆಯಾಗಲಿವೆ. ಜನಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿ ಪರಿಶಿಷ್ಟ ಜಾತಿ ಮೀಸಲು ಲೋಕಸಭಾ ಸೀಟುಗಳ ಸಂಖ್ಯೆ ಈಗಿರುವ 5ರಿಂದ 7ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರಗಳ ಸಂಖ್ಯೆ ಈಗಿನ 2 ರಿಂದ 3ಕ್ಕೆ ಏರಿಕೆಯಾಗಬಹುದು.