ಬೆಂಗಳೂರು: 13 ದಿನಗಳ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ ಅಂತ್ಯಗೊಂಡಿದೆ. ಕಾರ್ಯಕರ್ತೆಯರ ಮಾಸಿಕ ಗೌರವಧನವನ್ನು ₹2,000 ಹೆಚ್ಚಿಸುವ ಕುರಿತು ರಾಜ್ಯ ಸರ್ಕಾರ ಅಧಿಕೃತ ಲಿಖಿತ ಟಿಪ್ಪಣಿ ಹೊರಡಿಸಿದ್ದು, ಜನವರಿ 1, 2027ರಿಂದ ಹೆಚ್ಚುವರಿ ಗೌರವಧನ ಜಾರಿಗೆ ಬರಲಿದೆ. ಈ ಮೂಲಕ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿದ್ದ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ತೆರೆ ಬಿದ್ದಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿದ್ದ ಮೌಖಿಕ ಭರವಸೆಗೆ ಒಪ್ಪದ ಆಶಾ ಕಾರ್ಯಕರ್ತೆಯರು, ಹೆಚ್ಚುವರಿ ಗೌರವಧನದ ಕುರಿತು ಲಿಖಿತ ಆದೇಶ ನೀಡುವಂತೆ ಪಟ್ಟು ಹಿಡಿದಿದ್ದರು. ಸರ್ಕಾರದ ಅಧಿಕೃತ ಲಿಖಿತ ಭರವಸೆಯ ಬಳಿಕ ಹೋರಾಟ ಅಂತ್ಯಗೊಳಿಸಲು ನಿರ್ಧರಿಸಿದ್ದಾರೆ.
ನವೆಂಬರ್ 28ರಂದು ನಡೆದ ಮಾತುಕತೆಯ ಸಂದರ್ಭದಲ್ಲಿ ರಾಜ್ಯದ ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳೊಂದಿಗೆ ಸಚಿವರು ಸಭೆ ನಡೆಸಿ, ಅವರ ಮನವಿಗಳಿಗೆ ಸ್ಪಂದಿಸಿದ್ದರು. ಈ ಸಭೆಯಲ್ಲಿ ಮಾಸಿಕ ಗೌರವಧನವನ್ನು ₹2,000 ಹೆಚ್ಚಿಸುವ ನಿರ್ಧಾರವನ್ನು ತಿಳಿಸಲಾಗಿತ್ತು.

ಇದೀಗ ಮಾಸಿಕ ಗೌರವಧನ ಹೆಚ್ಚಳದ ಕುರಿತು ವೈದ್ಯಕೀಯ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿ ಹಾಗೂ ಸರ್ಕಾರದ ಪರವಾಗಿ ಅಧಿಕೃತ ಟಿಪ್ಪಣಿ ಹೊರಡಿಸಲಾಗಿದೆ. ಜನವರಿ 1, 2027ರಿಂದ ಜಾರಿಗೆ ಬರುವಂತೆ ಮಾಸಿಕ ಗೌರವಧನದಲ್ಲಿ ₹2,000 ಹೆಚ್ಚಳ ಮಾಡುವುದಾಗಿ ಲಿಖಿತವಾಗಿ ತಿಳಿಸಲಾಗಿದೆ.
ಈ ನಿರ್ಧಾರದಿಂದ 13 ದಿನಗಳಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಆಶಾ ಕಾರ್ಯಕರ್ತೆಯರು ಹೋರಾಟ ಹಿಂಪಡೆದಿದ್ದಾರೆ.






















