ನವದೆಹಲಿ: ಮದುರೈನ ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿನ ಕಲ್ಲಿನ ಸ್ತಂಭದಲ್ಲಿ ಕಾರ್ತಿಕ ದೀಪ ಬೆಳಗಿಸುವಂತೆ ನೀಡಿದ್ದ ಆದೇಶವನ್ನು ಪಾಲಿಸದ ತಮಿಳುನಾಡು ಸರ್ಕಾರವನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ನವೆಂಬರ್ 24ರಂದು ದೀಪ ಬೆಳಗಿಸುವಂತೆ ನವೆಂಬರ್ 20ರಂದು ನೀಡಿದ್ದ ಆದೇಶವನ್ನು ಉದ್ದೇಶಪೂರ್ವಕವಾಗಿಯೇ ಪಾಲಿಸಿಲ್ಲ ಎಂಬುದನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ವಿಪುಲ್ ಪಾಂಚೋಲಿ ಅವರನ್ನೊಳಗೊಂಡ ನ್ಯಾಯಪೀಠ, ನವೆಂಬರ್ 28ರಂದು (ನಾಳೆಯೇ) ಕಲ್ಲಿನ ಸ್ತಂಭದಲ್ಲಿ ಕಾರ್ತಿಕ ದೀಪ ಬೆಳಗಿಸುವಂತೆ ಹೊಸ ಆದೇಶ ಹೊರಡಿಸಿದೆ.
ಈ ಹಿಂದೆ ನೀಡಿದ್ದ ಆದೇಶದಲ್ಲಿ ಸೀಮಿತ ಸಂಖ್ಯೆಯ ಭಕ್ತರ ತಂಡಕ್ಕೆ ಮಾತ್ರ ದೀಪ ಬೆಳಗಿಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿತ್ತು. ಆದರೆ, ಇದೀಗ ತನ್ನ ನಿಲುವನ್ನು ಸ್ಪಷ್ಟಪಡಿಸಿರುವ ನ್ಯಾಯಪೀಠ, ವಿವಾದಿತ ಸ್ಥಳದ ಸಮೀಪದಲ್ಲಿರುವ ದರ್ಗಾದಿಂದ ಎಲ್ಲ ದಿಕ್ಕುಗಳಲ್ಲಿಯೂ ಕನಿಷ್ಠ 50 ಮೀಟರ್ ಅಂತರ ಕಾಯ್ದುಕೊಂಡು ಪ್ರತಿಯೊಬ್ಬ ಭಕ್ತರೂ ದೀಪ ಬೆಳಗಿಸಬಹುದು ಎಂದು ತಿಳಿಸಿದೆ.
ನ್ಯಾಯಾಲಯದ ಆದೇಶವನ್ನು ಪಾಲಿಸದ ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ನಾಳೆಯೇ ದೀಪ ಬೆಳಗಿಸುವ ಮೂಲಕ ತನ್ನ ಹಿಂದಿನ ಆದೇಶವನ್ನು ಜಾರಿಗೊಳಿಸುವಂತೆ ಸೂಚಿಸಿದೆ.





















