ಹಾವೇರಿ: ಕನಕದಾಸರ ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳಲು ಕಾಗಿನೆಲೆಗೆ ತೆರಳುತ್ತಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಮಾರ್ಗಮಧ್ಯೆ ಕುರುಬಗೊಂಡ ಗ್ರಾಮದ ಜಮೀನಿನಲ್ಲಿ ವಾಸ್ತವ್ಯ ಹೂಡಿದ್ದ ಸಂಚಾರಿ ಕುರಿಗಾಹಿಗಳನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿದರು.
ಅರಣ್ಯ ಪ್ರದೇಶದಲ್ಲಿ ಕುರಿಗಳೊಂದಿಗೆ ವಾಸಿಸುತ್ತಿರುವ ಕುರಿಗಾಹಿಗಳ ಬಳಿಗೆ ತೆರಳಿದ ಡಿಕೆಶಿ, ಅವರ ಜೀವನ, ವೃತ್ತಿ ಹಾಗೂ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು.
`ಕುರಿಗಳೊಂದಿಗೆ ಜೀವನೋಪಾಯಕ್ಕಾಗಿ ಒಂದು ಊರಿನಿಂದ ಮತ್ತೊಂದು ಊರಿಗೆ ಸಂಚರಿಸುತ್ತೇವೆ. ಪ್ರತಿ ತಿಂಗಳು ಪಡಿತರ ಪಡೆಯಲು ಮಾತ್ರ ಸ್ವಗ್ರಾಮಕ್ಕೆ ಮರಳಬೇಕಾದ ಅನಿವಾರ್ಯತೆ ಇದೆ. ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ನಾವು ಎಲ್ಲಿದ್ದೇವೆಯೋ ಅಲ್ಲಿಯೇ ಪಡಿತರ ಪಡೆಯಲು ಅವಕಾಶ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.
ಕುರಿಗಾಹಿಗಳ ಅಹವಾಲಿಗೆ ಸ್ಪಂದಿಸಿದ ಡಿ.ಕೆ. ಶಿವಕುಮಾರ, ಇದು ಕೇವಲ ನಿಮ್ಮ ಸಮಸ್ಯೆಯಲ್ಲ, ರಾಜ್ಯದ ವಿವಿಧ ಭಾಗಗಳಲ್ಲಿರುವ ಸಂಚಾರಿ ಕುರಿಗಾಹಿಗಳ ಸಮಸ್ಯೆಯೂ ಆಗಿದೆ. ಈ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ, ಆದಷ್ಟು ಬೇಗ ಸಂಚಾರಿ ಕುರಿಗಾಹಿಗಳು ತಾವು ನೆಲೆಸಿರುವ ಸ್ಥಳದಲ್ಲಿಯೇ ಪಡಿತರ ಪಡೆಯಲು ಅನುಕೂಲವಾಗುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕುರಿಗಾಹಿಗಳು ನೀಡಿದ ಕುರಿಹಾಲನ್ನು ಡಿ.ಕೆ. ಶಿವಕುಮಾರ ಕುಡಿದು ಅವರೊಂದಿಗೆ ಆತ್ಮೀಯವಾಗಿ ಬೆರೆದರು. ಈ ಕುರಿತು ಪ್ರತಿಕ್ರಿಯಿಸಿದ ಕುರಿಗಾಹಿ ರಾಯಪ್ಪ, `ನಮ್ಮ ಕಷ್ಟಗಳನ್ನು ಮುಖ್ಯಮಂತ್ರಿ ಅವರು ಆಲಿಸಿದ್ದು ನಮಗೆ ಬಹಳ ಸಂತೋಷವಾಯಿತು. ಸಂಚಾರಿ ಕುರಿಗಾಹಿಗಳಿಗೆ ಪಡಿತರ ನೀಡುವುದಾಗಿ ಹಾಗೂ ಕಳ್ಳರ ಕಾಟ ತಪ್ಪಿಸಲು ಬಂದೂಕಿನ ಪರವಾನಗಿ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ನಮ್ಮ ಸಮಸ್ಯೆ ಕೇಳಲು ಅರಣ್ಯ ಪ್ರದೇಶಕ್ಕೆ ಬಂದಿದ್ದು ನಮಗೆ ಖುಷಿ ತಂದಿದೆ. ನಮ್ಮ ಕುರಿಹಾಲನ್ನೂ ಕುಡಿದರು’ ಎಂದು ಸಂತಸ ವ್ಯಕ್ತಪಡಿಸಿದರು.





















