SK Home Ad
Home ಸುದ್ದಿ ಇನ್ಮುಂದೆ ಆಹಾರ ಪ್ಯಾಕೆಟ್ ಗಳಲ್ಲಿ ಟೋಟಲ್ ಶುಗರ್ ಮಾಹಿತಿ ಕಡ್ಡಾಯ? ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ

ಇನ್ಮುಂದೆ ಆಹಾರ ಪ್ಯಾಕೆಟ್ ಗಳಲ್ಲಿ ಟೋಟಲ್ ಶುಗರ್ ಮಾಹಿತಿ ಕಡ್ಡಾಯ? ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ

0
9

ನವದೆಹಲಿ: ಮಾರುಕಟ್ಟೆಯಲ್ಲಿ ಸಿಗುವ ಚಿಪ್ಸ್, ಬಿಸ್ಕಟ್, ನಮ್ಕೀನ್, ತಂಪು ಪಾನೀಯ ಸೇರಿದಂತೆ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳನ್ನು ಖರೀದಿಸುವಾಗ ಗ್ರಾಹಕರು ಸಾಮಾನ್ಯವಾಗಿ ಅದರ ಪ್ಯಾಕೆಟ್ ಮೇಲಿರುವ ಪೌಷ್ಟಿಕಾಂಶದ ಮಾಹಿತಿಯನ್ನು ಗಮನಿಸುವುದಿಲ್ಲ. ಒಂದು ವೇಳೆ ಗಮನಿಸಿದರೂ ಕ್ಯಾಲೊರಿ, ಕೊಬ್ಬು ಮತ್ತು ಅಡಿಷನಲ್ ಶುಗರ್ ಪ್ರಮಾಣಕ್ಕೆ ಮಾತ್ರ ಹೆಚ್ಚಿನ ಆದ್ಯತೆ ನೀಡುತ್ತಾರೆ. ಆದರೆ ಆಹಾರದಲ್ಲಿರುವ ಒಟ್ಟು ಸಕ್ಕರೆಯ ಪ್ರಮಾಣ ತಿಳಿದುಕೊಳ್ಳುವುದೂ ಅಷ್ಟೇ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ಯಾಕ್ ಮಾಡಿದ ಆಹಾರ ಉತ್ಪನ್ನಗಳ ಮೇಲಿನ ಸಕ್ಕರೆ ಎಚ್ಚರಿಕೆ ಲೇಬಲ್ಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಆಹಾರ ಉತ್ಪನ್ನಗಳ ಮೇಲಿನ ಎಚ್ಚರಿಕೆ ಲೇಬಲ್ಗಳನ್ನು ರೂಪಿಸುವಾಗ ಕೇವಲ ಸೇರಿಸಿದ ಸಕ್ಕರೆಯನ್ನಷ್ಟೇ ಪರಿಗಣಿಸದೆ, ಒಟ್ಟು ಸಕ್ಕರೆಯ ಪ್ರಮಾಣವನ್ನೂ ಆಧಾರವಾಗಿಟ್ಟುಕೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಹೊಸ ನಿಯಮಗಳನ್ನು ಅಂತಿಮಗೊಳಿಸಲು FSSAIಗೆ ನಾಲ್ಕು ತಿಂಗಳ ಕಾಲಾವಕಾಶ ನೀಡಿದೆ.

ಸುಪ್ರೀಂ ಕೋರ್ಟ್ ಸೂಚನೆಯೇನು?
ಪ್ರಸ್ತುತ ಆಹಾರ ಉತ್ಪನ್ನಗಳ ಮೇಲಿನ ಎಚ್ಚರಿಕೆ ಲೇಬಲ್ಗಳಿಗೆ ಸಂಬಂಧಿಸಿದ ಮಾನದಂಡಗಳಲ್ಲಿ ಸೇರಿಸಿದ ಸಕ್ಕರೆ ಮತ್ತು ಕೊಬ್ಬಿನ ಪ್ರಮಾಣಕ್ಕೆ ಆದ್ಯತೆ ನೀಡಲಾಗುತ್ತಿತ್ತು. ಆದರೆ ಒಟ್ಟು ಸಕ್ಕರೆ ಹಾಗೂ ಸ್ಯಾಚುರೇಟೆಡ್ ಫ್ಯಾಟ್ ಪ್ರಮಾಣವನ್ನೂ ಪರಿಗಣಿಸಿ ಹೊಸ ಮಾನದಂಡಗಳನ್ನು ರೂಪಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಸಕ್ಕರೆ, ಕೊಬ್ಬು ಮತ್ತು ಉಪ್ಪಿನ ಪ್ರಮಾಣಕ್ಕೆ ಸಂಬಂಧಿಸಿದ ಎಚ್ಚರಿಕೆ ಲೇಬಲ್ಗಳ ಮಾನದಂಡಗಳನ್ನು ನಿರ್ಧರಿಸುವ ಜವಾಬ್ದಾರಿಯನ್ನು FSSAIಗೆ ವಹಿಸಲಾಗಿದೆ. ಕೆಲವು ಆಹಾರ ಉತ್ಪನ್ನಗಳ ಪ್ಯಾಕೆಟ್ಗಳ ಮೇಲೆ ‘ನೋ ಆ್ಯಡೆಡ್ ಶುಗರ್’ ಎಂದು ನಮೂದಿಸಿದ್ದರೂ, ಅವುಗಳಲ್ಲಿ ನೈಸರ್ಗಿಕವಾಗಿ ಅಥವಾ ಸಂಸ್ಕರಣೆಯ ಪ್ರಕ್ರಿಯೆಯಿಂದ ಒಟ್ಟು ಸಕ್ಕರೆಯ ಪ್ರಮಾಣ ಹೆಚ್ಚಿರಬಹುದು. ಹೀಗಾಗಿ ಗ್ರಾಹಕರಿಗೆ ಸಂಪೂರ್ಣ ಮಾಹಿತಿ ಸಿಗಬೇಕು ಎಂಬುದು ಈ ಸೂಚನೆಯ ಪ್ರಮುಖ ಉದ್ದೇಶವಾಗಿದೆ.
ಹೊಸ ಮಾನದಂಡಗಳು ಜಾರಿಗೆ ಬಂದ ಬಳಿಕ ಒಟ್ಟು ಸಕ್ಕರೆ ಮತ್ತು ಸ್ಯಾಚುರೇಟೆಡ್ ಫ್ಯಾಟ್ ಪ್ರಮಾಣದ ಆಧಾರದ ಮೇಲೆ ಉತ್ಪನ್ನಗಳ ಮುಂಭಾಗದಲ್ಲಿ ಎಚ್ಚರಿಕೆ ಲೇಬಲ್ ಅಳವಡಿಸುವ ಬಗ್ಗೆ ನಿರ್ಧಾರವಾಗಲಿದೆ.

ಆ್ಯಡೆಡ್ ಶುಗರ್ ಮತ್ತು ಟೋಟಲ್ ಶುಗರ್ ನಡುವಿನ ವ್ಯತ್ಯಾಸವೇನು?
ಆ್ಯಡೆಡ್ ಶುಗರ್ ಎಂದರೆ ಆಹಾರ ಅಥವಾ ಪಾನೀಯ ತಯಾರಿಸುವಾಗ ಪ್ರತ್ಯೇಕವಾಗಿ ಸೇರಿಸುವ ಸಕ್ಕರೆ. ಉದಾಹರಣೆಗೆ, ಚಹಾಕ್ಕೆ ಎರಡು ಚಮಚ ಸಕ್ಕರೆ ಹಾಕಿದರೆ ಅದು ಆ್ಯಡೆಡ್ ಶುಗರ್ ಆಗುತ್ತದೆ.
ಇನ್ನು ಟೋಟಲ್ ಶುಗರ್ ಎಂದರೆ ಆಹಾರದಲ್ಲಿರುವ ನೈಸರ್ಗಿಕ ಸಕ್ಕರೆ ಮತ್ತು ಪ್ರತ್ಯೇಕವಾಗಿ ಸೇರಿಸಿದ ಸಕ್ಕರೆ ಎರಡನ್ನೂ ಒಳಗೊಂಡ ಒಟ್ಟು ಪ್ರಮಾಣ. ಉದಾಹರಣೆಗೆ, ಹಾಲಿನಲ್ಲಿರುವ ನೈಸರ್ಗಿಕ ಲ್ಯಾಕ್ಟೋಸ್ ಮತ್ತು ಚಹಾಕ್ಕೆ ಸೇರಿಸಿದ ಸಕ್ಕರೆ ಎರಡನ್ನೂ ಲೆಕ್ಕ ಹಾಕಿದರೆ ಅದು ಒಟ್ಟು ಸಕ್ಕರೆಯಾಗುತ್ತದೆ.
ಹಳೆಯ ಮಾನದಂಡಗಳೇನು?
2024ರಲ್ಲಿ ಪ್ರಕಟವಾದ ICMR-NIN ಆಹಾರ ಮಾರ್ಗಸೂಚಿಗಳ ಆಧಾರದಲ್ಲಿ FSSAI ಕೆಲವು ಮಾನದಂಡಗಳನ್ನು ರೂಪಿಸಿತ್ತು. ಅದರ ಪ್ರಕಾರ 100 ಗ್ರಾಂ ಘನ ಆಹಾರ ಪದಾರ್ಥದಲ್ಲಿ 3 ಗ್ರಾಂ ಆ್ಯಡೆಡ್ ಶುಗರ್ ಮತ್ತು 4.2 ಗ್ರಾಂ ಆ್ಯಡೆಡ್ ಫ್ಯಾಟ್ ಪ್ರಮಾಣವನ್ನು ಉಲ್ಲೇಖಿಸಲಾಗಿತ್ತು. ಅದೇ ರೀತಿ 100 ಮಿಲಿಲೀಟರ್ ಪಾನೀಯದಲ್ಲಿ 2 ಗ್ರಾಂ ಆ್ಯಡೆಡ್ ಶುಗರ್ ಮತ್ತು 1.5 ಗ್ರಾಂ ಆ್ಯಡೆಡ್ ಫ್ಯಾಟ್ ಮಾನದಂಡ ನಿಗದಿಪಡಿಸಲಾಗಿತ್ತು.

ಆದರೆ ಕೇವಲ ಸೇರಿಸಿದ ಸಕ್ಕರೆಯನ್ನು ಆಧಾರವಾಗಿಟ್ಟುಕೊಂಡರೆ ಆಹಾರದಲ್ಲಿರುವ ನೈಸರ್ಗಿಕ ಸಕ್ಕರೆಯ ಪ್ರಮಾಣ ಗ್ರಾಹಕರ ಗಮನಕ್ಕೆ ಬರುವುದಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿತ್ತು.

ಗ್ರಾಹಕರಿಗೆ ಏನು ಪ್ರಯೋಜನ?
ಅತಿಯಾದ ಸಕ್ಕರೆ ಸೇವನೆಯಿಂದ ಬೊಜ್ಜು, ತೂಕ ಹೆಚ್ಚಳ ಮತ್ತು ಟೈಪ್-2 ಮಧುಮೇಹದ ಅಪಾಯ ಹೆಚ್ಚಾಗಬಹುದು. ದಂತಕ್ಷಯ ಹಾಗೂ ದೀರ್ಘಕಾಲದಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯಕ್ಕೂ ಇದು ಕಾರಣವಾಗಬಹುದು.
ನ್ಯೂಟ್ರಿಷನ್ ಪಾಲಿಸಿ ತಜ್ಞ ಹಾಗೂ ನ್ಯೂಟ್ರಿಷನ್ ಅಡ್ವೊಕಸಿ ಇನ್ ಪಬ್ಲಿಕ್ ಇಂಟರೆಸ್ಟ್ ಸಂಸ್ಥೆಯ ಸಂಚಾಲಕ ಡಾ. ಅರುಣ್ ಗುಪ್ತಾ ಅವರ ಪ್ರಕಾರ, ಒಟ್ಟು ಸಕ್ಕರೆಯ ಪ್ರಮಾಣವನ್ನು ಆಧರಿಸಿ ಎಚ್ಚರಿಕೆ ನೀಡುವುದು ಗ್ರಾಹಕರಿಗೆ ಆಹಾರದಲ್ಲಿರುವ ಸಕ್ಕರೆಯ ಬಗ್ಗೆ ಸ್ಪಷ್ಟ ಮಾಹಿತಿ ಒದಗಿಸಲು ಸಹಕಾರಿಯಾಗಲಿದೆ. ಕೇವಲ ಆ್ಯಡೆಡ್ ಶುಗರ್ ಮಾಹಿತಿ ನೀಡುವುದರಿಂದ ಆಹಾರದ ಸಂಪೂರ್ಣ ಸಕ್ಕರೆ ಪ್ರಮಾಣ ತಿಳಿಯುವುದಿಲ್ಲ.
ಒಟ್ಟಿನಲ್ಲಿ, ಹೊಸ ಮಾನದಂಡಗಳು ಜಾರಿಗೆ ಬಂದರೆ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳನ್ನು ಖರೀದಿಸುವಾಗ ಗ್ರಾಹಕರು ಅದರಲ್ಲಿರುವ ಒಟ್ಟು ಸಕ್ಕರೆಯ ಪ್ರಮಾಣವನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗಬಹುದು.