ಚಿನ್ನದ ಬೆಲೆ ಇಳಿಕೆಗೆ ಜನರೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಂದು ವರ್ಷದ ಹಿಂದೆ ಚಿನ್ನ ಖರೀದಿಸುವುದನ್ನು ಕಡಿಮೆ ಮಾಡುವಂತೆ ತಾವು ಮಾಡಿದ್ದ ಮನವಿಗೆ ದೇಶದ ಜನರು ಸ್ಪಂದಿಸಿದ್ದಾರೆ. ಇದರಿಂದ ಚಿನ್ನದ ಬೆಲೆ ಇಳಿಕೆಯಾಗಿದ್ದು, ಜನರ ಹಣ ಉಳಿತಾಯವಾಗಿದೆ ಎಂದು ಮೋದಿ ಹೇಳಿದ್ದಾರೆ.
ಉತ್ತರ ಪ್ರದೇಶದ ಲಖನೌದಲ್ಲಿ ನಡೆದ 5ನೇ ರಾಷ್ಟ್ರೀಯ ಕೌಶಲ್ಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಮೇ ತಿಂಗಳಲ್ಲಿ ಅನಿವಾರ್ಯವಲ್ಲದಿದ್ದರೆ ಒಂದು ವರ್ಷದವರೆಗೆ ಚಿನ್ನ ಖರೀದಿಸಬೇಡಿ ಎಂದು ದೇಶದ ಜನರಲ್ಲಿ ಮನವಿ ಮಾಡಿದ್ದೆ. ಜನರು ತಮ್ಮ ಮನವಿಗೆ ಸ್ಪಂದಿಸಿ ಚಿನ್ನ ಖರೀದಿಯನ್ನು ಕಡಿಮೆ ಮಾಡಿದ್ದಾರೆ. ಇದರಿಂದ ಬೆಲೆ ಇಳಿಕೆಯಾಗಿದ್ದು, ಹಲವರು ತಮ್ಮ ಹಣ ಉಳಿದಿದೆ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮನವಿಯನ್ನು ಮೋದಿ ಸ್ಮರಿಸಿದರು. ಆಹಾರದ ಕೊರತೆ ಎದುರಾದ ಸಂದರ್ಭದಲ್ಲಿ ವಾರದಲ್ಲಿ ಒಂದು ದಿನ ಒಂದು ಹೊತ್ತಿನ ಊಟ ಬಿಡುವಂತೆ ಶಾಸ್ತ್ರಿ ಅವರು ಜನರಲ್ಲಿ ಮನವಿ ಮಾಡಿದ್ದರು. ಅಂದು ದೇಶದ ಜನರು ಅವರ ಮಾತಿಗೆ ಸ್ಪಂದಿಸಿದ್ದರು. ಇಂದಿಗೂ ದೇಶದಲ್ಲಿ ಅಂತಹ ಸಹಕಾರದ ಮನೋಭಾವ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನು 2023ರಲ್ಲಿ ಸರ್ಕಾರಿ ಸಾರ್ವಜನಿಕ ವಲಯದ ಸಂಸ್ಥೆಗಳ (PSU) ಬಾಂಡ್ಗಳಲ್ಲಿ ಹೂಡಿಕೆ ಮಾಡುವಂತೆ ತಾವು ನೀಡಿದ್ದ ಸಲಹೆಯನ್ನೂ ಮೋದಿ ಉಲ್ಲೇಖಿಸಿದರು. ಆಗ ಟೀಕೆ ಮಾಡಿದ್ದವರು ಈಗ ಅದರ ಪ್ರಯೋಜನವನ್ನು ನೋಡುತ್ತಿದ್ದಾರೆ ಎಂದರು.
ಇದೇ ವೇಳೆ, ಮುಂದಿನ ದಿನಗಳಲ್ಲಿ ಕೇವಲ ಪ್ರಮಾಣಪತ್ರಗಳಿಗಿಂತ ಕೌಶಲ್ಯ ಮತ್ತು ಪ್ರತಿಭೆ ಹೊಂದಿರುವವರಿಗೆ ಹೆಚ್ಚಿನ ಬೇಡಿಕೆ ಇರಲಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.



















