ಬೆಳಗಾವಿ: ಬಸವಣ್ಣನವರ ಕುರಿತ ಬರಹಗಳಿಂದ ವಿವಾದಕ್ಕೆ ಕಾರಣವಾಗಿರುವ ‘ಬಸವ ಮಂಟಪ’ ಕೃತಿ ಪ್ರಕರಣಕ್ಕೆ ಇದೀಗ ಮತ್ತೊಂದು ತಿರುವು ಸಿಕ್ಕಿದೆ. ಕೃತಿಯ ಲೇಖಕ ರವಿ ಹಂಜ್ ಅವರನ್ನು ಹತ್ಯೆ ಮಾಡುವವರಿಗೆ ₹5 ಲಕ್ಷ ಬಹುಮಾನ ನೀಡುವುದಾಗಿ ಅಥಣಿಯ ಲಿಂಗಾಯತ ಮುಖಂಡ ಪ್ರಕಾಶ ಮಹಾಜನ ಘೋಷಿಸಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
ನವೆಂಬರ್ 21ರಂದು ಅಥಣಿಯ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಕಾಶ ಮಹಾಜನ ಈ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಈ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ವಿವಾದ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.
ವಿಶ್ವೇಶ್ವರ ಭಟ್ಗೆ ನೀಡಿದ್ದ ಪ್ರಶಸ್ತಿ ವಾಪಸ್
ಇದೇ ಸಂದರ್ಭದಲ್ಲಿ ಪತ್ರಕರ್ತ ಹಾಗೂ ಪ್ರಕಾಶಕ ವಿಶ್ವೇಶ್ವರ ಭಟ್ ಅವರಿಗೆ ಮೋಟಗಿಮಠದಿಂದ ನೀಡಲಾಗಿದ್ದ ‘ಬಸವಭೂಷಣ’ ಪ್ರಶಸ್ತಿಯನ್ನು ವಾಪಸ್ ಪಡೆಯುವುದಾಗಿ ಪ್ರಭುಚನ್ನಬಸವ ಸ್ವಾಮೀಜಿ ಘೋಷಿಸಿದ್ದಾರೆ. ಬಸವ ಮಂಟಪ ಕೃತಿಯಲ್ಲಿನ ಆಕ್ಷೇಪಾರ್ಹ ಬರಹಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಠದ ಮುಖ್ಯಸ್ಥರು ತಿಳಿಸಿದ್ದಾರೆ.
ಈಗಾಗಲೇ ಎಫ್ಐಆರ್ ದಾಖಲು
ಬಸವಣ್ಣನವರ ಕುರಿತು ಆಕ್ಷೇಪಾರ್ಹ ಬರಹಗಳಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಲೇಖಕ ರವಿ ಹಂಜ್ ಮತ್ತು ಪ್ರಕಾಶಕ ವಿಶ್ವೇಶ್ವರ ಭಟ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸಚಿವ ಸಂಪುಟವು ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದೆ.
ವಿದೇಶಕ್ಕೆ ಪಯಣ ಬಳಸುವ ಮೊದಲು ಅವರು ಕೊಚ್ಚಿಯಿಂದ ದುಬೈಗೆ ತೆರಳಲು ವಿಮಾನ ಏರಲು ಸಿದ್ಧರಾಗಿದ್ದರು. ಈ ವೇಳೆ ಕರ್ನಾಟಕ ಪೊಲೀಸರು ಹೊರಡಿಸಿದ್ದ ಲುಕ್ಔಟ್ ನೋಟಿಸ್ ಆಧರಿಸಿ ಸಿಐಎಸ್ಎಫ್ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಬಳಿಕ ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಿ ಕರ್ನಾಟಕ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 24ರಂದು ವಿಚಾರಣೆಗೆ ಹಾಜರಾಗುವಂತೆ ರವಿ ಹಂಜ್ ಅವರಿಗೆ ನೋಟಿಸ್ ನೀಡಲಾಗಿದೆ.
ಈ ವಿವಾದದ ಇತ್ಯರ್ಥಪಡಿಸಲು ವಿಶೇಷ ತನಿಖಾ ತಂಡ (SIT) ರಚಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಸೇರಿದಂತೆ ವಿವಿಧ ಸಂಘಟನೆಗಳು ಆಗ್ರಹಿಸಿವೆ. ಲೇಖಕ ಮತ್ತು ಪ್ರಕಾಶಕರ ಪಾತ್ರ ಸೇರಿದಂತೆ ಪುಸ್ತಕದ ಪ್ರಕಟಣೆ ಹಾಗೂ ವಿವಾದಕ್ಕೆ ಸಂಬಂಧಿಸಿದ ಎಲ್ಲ ಅಂಶಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂಬುದು ಸಂಘಟನೆಗಳ ಒತ್ತಾಯವಾಗಿದೆ.
ಒಟ್ಟಿನಲ್ಲಿ, ‘ಬಸವ ಮಂಟಪ’ ಕೃತಿ ವಿವಾದ ಈಗ ಕಾನೂನು ಕ್ರಮ, ಪ್ರಶಸ್ತಿ ವಾಪಸ್ ಮತ್ತು ಬಹುಮಾನ ಘೋಷಣೆಯಂತಹ ಬೆಳವಣಿಗೆಗಳಿಂದ ಹೊಸ ತಿರುವು ಪಡೆದುಕೊಂಡಿದೆ.





















