BBK13: ‘ಬಿಗ್ ಬಾಸ್ ಕನ್ನಡ ಸೀಸನ್-13’ರ ಹತ್ತನೇ ವಾರದ ಕೊನೆಯಲ್ಲಿ ನಡೆದ ವೀಕೆಂಡ್ ಪಂಚಾಯಿತಿ ಸಾಕಷ್ಟು ಕುತೂಹಲ ಮೂಡಿಸಿದೆ. ಕಳೆದ ವಾರದ ‘ಯುವರಾಣಿ-ಮಹಾರಾಣಿ’ ಟಾಸ್ಕ್ನಲ್ಲಿ ಗಾನವಿ, ಸೌಂದರ್ಯ ಮತ್ತು ಆಸಿಯಾ ಅವರಿಗೆ ನೀಡಿದ್ದ ವಿಶೇಷ ಅಧಿಕಾರದ ಬಳಕೆಯನ್ನು ಕಿಚ್ಚ ಸುದೀಪ್ ವಿಶ್ಲೇಷಿಸಿದರು. ಈ ವೇಳೆ ತಮ್ಮ ಚಾಣಾಕ್ಷ ತಂತ್ರದಿಂದ ಗಾನವಿ ಗೌಡ ಅವರನ್ನು ಮಹಾರಾಣಿ ಪಟ್ಟಕ್ಕೇರಿಸಿದ ಗಗನ್ ಚಿನ್ನಪ್ಪ ಅವರ ಆಟವನ್ನು ಮೆಚ್ಚಿ ಸುದೀಪ್ ‘ಕಿಚ್ಚನ ಚಪ್ಪಾಳೆ’ ನೀಡಿ ಗೌರವಿಸಿದರು.
ಆಟದ ಆರಂಭದಲ್ಲೇ ಗಾನವಿ ಗೌಡ ತಮ್ಮ ತಂಡಕ್ಕೆ ಗಗನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದು ತಿರುವು ನೀಡಿತು. ಮೊದಲ ದಿನದಿಂದಲೇ ಕಾರ್ಯತಂತ್ರ ರೂಪಿಸಿದ ಗಗನ್, ಆಸಿಯಾ ಫಿರ್ದೋಸ್ ಹಾಗೂ ಗಾನವಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೈತ್ರಿ ಸಾಧಿಸಿದರು. ಇದರ ಪರಿಣಾಮವಾಗಿ ಸೌಂದರ್ಯ ಶೆಟ್ಟಿ ತಂಡವನ್ನು ಎದುರಿಸುವಲ್ಲಿ ಯಶಸ್ವಿಯಾದರು. ಅಲ್ಲದೆ, ಗಾನವಿ ಕೂಡ ಗಗನ್ ಅವರನ್ನು ನಾಮಿನೇಟ್ ಮಾಡದೆ ಉಳಿಸಿಕೊಂಡಿದ್ದು ಅವರ ಗೆಲುವಿಗೆ ಪೂರಕವಾಯಿತು.
ಅಂತಿಮ ಟಾಸ್ಕ್ನಲ್ಲಿ ಪ್ರಶಾಂತ್ ಬಿಲ್ಲೆಗಳನ್ನು ಬಚ್ಚಿಟ್ಟು ತಂತ್ರ ಹೆಣೆಯಲು ಹೋಗಿ ಸಿಕ್ಕಿಬಿದ್ದರು. ಇದನ್ನು ಗಮನಿಸಿದ ಗಗನ್, ಆಸಿಯಾ ಮತ್ತು ಪ್ರಶಾಂತ್ ತಂಡದ ಫ್ಲ್ಯಾಗ್ ಬಚ್ಚಿಡುವ ಮೂಲಕ ಆಟದ ದಿಕ್ಕನ್ನೇ ಬದಲಿಸಿದರು. ಇದರಿಂದ ಪ್ರಶಾಂತ್ ತಪ್ಪು ಹೆಜ್ಜೆ ಇಟ್ಟರೆ, ಆಸಿಯಾ ಅವರಿಗೆ ಮಹಾರಾಣಿ ಪಟ್ಟ ಕೈತಪ್ಪಿತು.
ಪಂಚಾಯಿತಿ ವೇಳೆ ಯಾರು ಚೆನ್ನಾಗಿ ಆಡಿದರು ಎಂದು ಸುದೀಪ್ ಪ್ರಶ್ನಿಸಿದಾಗ, ಮನೆಯವರೆಲ್ಲರೂ ಗಗನ್ ಹೆಸರನ್ನು ಹೇಳಿದರು. ಮೊದಲ ವಾರದ ರಾವಣನ ಸಂಭಾಷಣೆಯನ್ನು ಗಗನ್ ಅವರಿಂದ ಹೇಳಿಸಿದ ಸುದೀಪ್, ಮೊದಲ ವಾರದ ನಂತರ ಮರೆಯಾಗಿದ್ದ ಗಗನ್ ಈಗ ಮತ್ತೆ ಕಾಣಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು. ಅತ್ಯುತ್ತಮ ಯೋಜನೆ ಹಾಗೂ ತಂತ್ರಗಾರಿಕೆಗಾಗಿ ಕಮ್ಬ್ಯಾಕ್ ಮಾಡಿದ ಗಗನ್ ಅವರಿಗೆ ಕಿಚ್ಚನ ಚಪ್ಪಾಳೆ ನೀಡಿದರು.






















