SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಭದ್ರಾ ನಾಲೆಗಳಿಗೆ ನೀರು ಬಿಡುಗಡೆ ಆದೇಶಕ್ಕೆ ರೈತರ ಆಕ್ರೋಶ; ಸಚಿವರ ಮನೆ ಮುತ್ತಿಗೆಗೆ ಯತ್ನ

ಭದ್ರಾ ನಾಲೆಗಳಿಗೆ ನೀರು ಬಿಡುಗಡೆ ಆದೇಶಕ್ಕೆ ರೈತರ ಆಕ್ರೋಶ; ಸಚಿವರ ಮನೆ ಮುತ್ತಿಗೆಗೆ ಯತ್ನ

0
69
ಭದ್ರಾ ನೀರು ಹಂಚಿಕೆ ವಿವಾದ: ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾದ ರೈತರು ವಶಕ್ಕೆ

ಭದ್ರಾ ನಾಲೆಗಳಿಗೆ ನೀರು ಹರಿಸಿದ ಸರ್ಕಾರದ ಕ್ರಮ ಖಂಡಿಸಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮನೆಗೆ ಮುತ್ತಿಗೆ ಯತ್ನ: ನೂರಾರು ರೈತರ ಬಂಧನ

ದಾವಣಗೆರೆ: ಭದ್ರಾ ಜಲಾಶಯದ ವ್ಯಾಪ್ತಿಯ ಬಲ ಮತ್ತು ಎಡದಂಡೆ ನಾಲೆಗಳಿಗೆ 10 ದಿನಗಳ ಕಾಲ ನೀರು ಬಿಡುಗಡೆ ಮಾಡುವ ಸರ್ಕಾರದ ಆದೇಶವನ್ನು ಖಂಡಿಸಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದ ನೂರಾರು ರೈತರನ್ನು ಪೊಲೀಸರು ಮಂಗಳವಾರ ವಶಕ್ಕೆ ಪಡೆದರು.

ಐಸಿಸಿ ಸಭೆ ನಡೆಸಿ ಯಾವುದೇ ನಿರ್ಣಯ ಕೈಗೊಳ್ಳದೆ, ಬಲ ಮತ್ತು ಎಡದಂಡೆ ನಾಲೆಗಳಿಗೆ ನೀರು ಹರಿಸಲು ಸರ್ಕಾರ ಆದೇಶ ಹೊರಡಿಸಿರುವ ಕ್ರಮ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಭಾರತೀಯ ರೈತ ಒಕ್ಕೂಟದ ನೇತೃತ್ವದಲ್ಲಿ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕಲು ರೈತರು ನಿರ್ಧರಿಸಿದ್ದರು.

ಅದರಂತೆ ಮಂಗಳವಾರ ಬೆಳಗ್ಗೆ 11 ಗಂಟೆಗೆ ಶಾಮನೂರು ಗ್ರಾಮದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಸಚಿವರ ನಿವಾಸಕ್ಕೆ ತೆರಳಲು ರೈತರು ಸಿದ್ಧತೆ ನಡೆಸಿದ್ದರು. ಆದರೆ, ರೈತರು ಜಮಾಯಿಸುವ ಮೊದಲೇ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಶಾಮನೂರಿನಲ್ಲಿ ಒಟ್ಟುಗೂಡುತ್ತಿದ್ದ ನೂರಾರು ರೈತರನ್ನು ಪೊಲೀಸರು ತಕ್ಷಣ ವಶಕ್ಕೆ ಪಡೆದು, ಒಂದು ಬಸ್ ಹಾಗೂ ಕೆಎಸ್‌ಆರ್‌ಪಿ ವಾಹನದಲ್ಲಿ ನಗರದ ಡಿಆರ್ ಪೊಲೀಸ್ ಕವಾಯತು ಮೈದಾನಕ್ಕೆ ಕರೆದೊಯ್ದರು.

ಇದೇ ವೇಳೆ ಬೆಳವನೂರು ನಾಗೇಶ್ವರ ರಾವ್ ನೇತೃತ್ವದಲ್ಲಿ ಕೆಲವು ರೈತ ಮುಖಂಡರು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ನಿವಾಸದ ಬಳಿ ಆಗಮಿಸಿ, ಸಚಿವರನ್ನು ಭೇಟಿಯಾಗಲು ಒಳಪ್ರವೇಶಿಸಲು ಯತ್ನಿಸಿದರು. ಆದರೆ, ಪೊಲೀಸರು ಅವರನ್ನು ತಡೆದರು. ಈ ಸಂದರ್ಭದಲ್ಲಿ ರೈತ ಮುಖಂಡರು ಮತ್ತು ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆಯಿತು.

ಸಚಿವರ ನಿವಾಸದ ಎದುರು ಜಮಾಯಿಸಿದ ರೈತ ಮುಖಂಡರು ಸರ್ಕಾರದ ಕ್ರಮ ಹಾಗೂ ಪೊಲೀಸರ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸಚಿವರ ವಿರುದ್ಧ ಧಿಕ್ಕಾರ ಕೂಗಿದರು. ಸಚಿವರನ್ನು ಭೇಟಿಯಾಗಿ ತಮ್ಮ ಅಹವಾಲು ಸಲ್ಲಿಸಲು ಬಂದಿದ್ದ ಮುಖಂಡರಿಗೂ ಪೊಲೀಸರು ಅವಕಾಶ ನೀಡದೆ ವಾಪಸ್ ಕಳುಹಿಸಿದರು.

ಸಚಿವರ ನಿವಾಸಕ್ಕೆ ರೈತರ ಮುತ್ತಿಗೆ ಹಿನ್ನೆಲೆಯಲ್ಲಿ ಸಚಿವರ ನಿವಾಸದ ಸುತ್ತಮುತ್ತ ಬ್ಯಾರಿಕೇಡ್ ಹಾಕಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.