SK Home Ad
Home ಸುದ್ದಿ ವಿದೇಶ ಒಂದು ಸ್ಕ್ರಿಪ್ಟ್‌ನಿಂದ ನೂರಾರು ವೆಬ್‌ಸೈಟ್‌ಗಳಿಗೆ ಕುತ್ತು: ಬಳಕೆದಾರರಿಗೆ ಭದ್ರತಾ ಎಚ್ಚರಿಕೆ

ಒಂದು ಸ್ಕ್ರಿಪ್ಟ್‌ನಿಂದ ನೂರಾರು ವೆಬ್‌ಸೈಟ್‌ಗಳಿಗೆ ಕುತ್ತು: ಬಳಕೆದಾರರಿಗೆ ಭದ್ರತಾ ಎಚ್ಚರಿಕೆ

0
79
186ಕ್ಕೂ ಹೆಚ್ಚು ವೆಬ್‌ಸೈಟ್‌ಗಳಿಗೆ ಸೈಬರ್‌ ಕಂಟಕ: ಕ್ರಿಪ್ಟೋ, ಬ್ಯಾಂಕ್‌ ಕಾರ್ಡ್‌ ಮಾಹಿತಿ ಕಳವಿಗೆ ಯತ್ನ

186ಕ್ಕೂ ಹೆಚ್ಚು ವೆಬ್‌ಸೈಟ್‌ಗಳಿಗೆ ಸೈಬರ್‌ ದಾಳಿ: CNN, BBC, Zoom ಸೇರಿ ಪ್ರಮುಖ ತಾಣಗಳಲ್ಲಿ ದುರುದ್ದೇಶಪೂರಿತ ಕೋಡ್‌ ಪತ್ತೆ

ನವದೆಹಲಿ: ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿರುವ 186ಕ್ಕೂ ಹೆಚ್ಚು ವೆಬ್‌ಸೈಟ್‌ಗಳು ಸೈಬರ್‌ ದಾಳಿಯೊಂದರ ಪರಿಣಾಮಕ್ಕೆ ಒಳಗಾಗಿವೆ ಎಂಬ ವರದಿ ಹೊರಬಿದ್ದಿದೆ. ‘OPTIMJACK’ ಎಂದು ಗುರುತಿಸಲಾಗಿರುವ ಈ ದಾಳಿಯಲ್ಲಿ, ವೆಬ್‌ಸೈಟ್‌ಗಳಲ್ಲಿ ಬಳಸಲಾಗುವ ಮೂರನೇ ವ್ಯಕ್ತಿಯ JavaScript ಕೋಡ್‌ ಮೂಲಕ ದುರುದ್ದೇಶಪೂರಿತ ಸ್ಕ್ರಿಪ್ಟ್‌ಗಳನ್ನು ಸೇರಿಸಲಾಗಿದೆ ಎಂದು ಸೈಬರ್‌ ಭದ್ರತಾ ಸಂಶೋಧಕರು ತಿಳಿಸಿದ್ದಾರೆ.

CNN, BBC, Zoom, HSBC, Equifax, Salesforce, IKEA ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳ ವೆಬ್‌ಪುಟಗಳು ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳ ವೆಬ್‌ಪುಟಗಳಲ್ಲಿ ದುರುದ್ದೇಶಪೂರಿತ JavaScript ಕೋಡ್‌ ಸೇರಿಸಲಾಗಿದ್ದು, ಬಳಕೆದಾರರ ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ ಮತ್ತು ಪಾವತಿ ಕಾರ್ಡ್‌ಗಳ ಮಾಹಿತಿಯನ್ನು ಕಳವು ಮಾಡಲು ಪ್ರಯತ್ನಿಸಲಾಗಿದೆ ಎಂದು ಸೈಬರ್‌ ಭದ್ರತಾ ಸಂಶೋಧಕರು ತಿಳಿಸಿದ್ದಾರೆ.

ವೆಬ್‌ಸೈಟ್‌ಗಳ ಕಾರ್ಯಕ್ಷಮತೆ ಸುಧಾರಣೆ ಹಾಗೂ ಬಳಕೆದಾರರ ಅನುಭವ ವಿಶ್ಲೇಷಣೆಗೆ ಬಳಸುವ ಮೂರನೇ ವ್ಯಕ್ತಿಯ Optimizely ವೇದಿಕೆಯ JavaScript ಸ್ಕ್ರಿಪ್ಟ್‌ ಮೂಲಕ ಈ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ವೆಬ್‌ಪುಟಗಳಲ್ಲಿ ಲೋಡ್‌ ಆಗುವ ಈ ಸ್ಕ್ರಿಪ್ಟ್‌ಗಳಿಗೆ ಅನಧಿಕೃತ ಕೋಡ್‌ ಸೇರಿಸುವ ಮೂಲಕ ಬಳಕೆದಾರರ ಚಟುವಟಿಕೆಗಳ ಮೇಲೆ ನಿಗಾ ಇಡುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.

ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ ವಿಳಾಸವನ್ನು ಬಳಕೆದಾರರು ಕಾಪಿ ಮಾಡಿದಾಗ ಅದನ್ನು ದಾಳಿಕೋರರ ನಿಯಂತ್ರಣದಲ್ಲಿರುವ ವಿಳಾಸದಿಂದ ಬದಲಿಸುವ ಸಾಮರ್ಥ್ಯವೂ ಈ ಕೋಡ್‌ಗೆ ಇದೆ. ಇದರಿಂದ ಹಣ ವರ್ಗಾವಣೆ ಮಾಡುವವರು ತಿಳಿಯದೆಯೇ ತಪ್ಪು ವಿಳಾಸಕ್ಕೆ ಹಣ ಕಳುಹಿಸುವ ಅಪಾಯ ಎದುರಾಗಿದೆ.

ಇದರ ಜತೆಗೆ, ವೆಬ್‌ಸೈಟ್‌ಗಳಲ್ಲಿ ನಮೂದಿಸುವ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ ವಿವರಗಳನ್ನು ಕಳವು ಮಾಡುವುದಕ್ಕೂ ಈ ಸ್ಕ್ರಿಪ್ಟ್‌ ಪ್ರಯತ್ನಿಸಿದೆ ಎಂದು ವರದಿಯಾಗಿದೆ. ಬಳಕೆದಾರರ ಬ್ರೌಸರ್‌ ಕುಕೀಸ್‌ ಹಾಗೂ ಇತರ ಮಾಹಿತಿಯನ್ನು ಸಂಗ್ರಹಿಸುವ ಮತ್ತು iOS ಸಾಧನಗಳನ್ನೂ ಗುರಿಯಾಗಿಸುವ ಸಾಮರ್ಥ್ಯ ಹೊಂದಿರುವುದಾಗಿ ಭದ್ರತಾ ವಿಶ್ಲೇಷಕರು ಎಚ್ಚರಿಸಿದ್ದಾರೆ.

ಭದ್ರತಾ ಸಂಶೋಧಕ ಸ್ಕಾಟ್‌ ಹೆಲ್ಮೆ ಅವರು 186ಕ್ಕೂ ಹೆಚ್ಚು ವೆಬ್‌ಸೈಟ್‌ಗಳು ಈ ದುರುದ್ದೇಶಪೂರಿತ ಕೋಡ್‌ನಿಂದ ಪ್ರಭಾವಿತವಾಗಿರುವುದನ್ನು ಗುರುತಿಸಿದ್ದಾರೆ ಎನ್ನಲಾಗಿದೆ. ರಾಯಿಟರ್ಸ್‌ ವರದಿಯಲ್ಲಿ 178 ಸಂಸ್ಥೆಗಳ ವೆಬ್‌ಸೈಟ್‌ಗಳಿಗೆ ಇಂತಹ ಸ್ಕ್ರಿಪ್ಟ್‌ ತಲುಪಿರುವುದಾಗಿ ಉಲ್ಲೇಖಿಸಲಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಕೆಲವು ಸಂಸ್ಥೆಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿವೆ. Salesforce ತನ್ನ Optimizely ಸ್ಕ್ರಿಪ್ಟ್‌ಗಳ ಬಳಕೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಿ ಪರಿಶೀಲನೆ ಆರಂಭಿಸಿದೆ. Equifax ಕೂಡ ತನಿಖೆ ನಡೆಸಿ Optimizely ಬಳಕೆಯನ್ನು ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.

ಈ ದಾಳಿಯಿಂದ ಎಷ್ಟು ಬಳಕೆದಾರರು ನೇರವಾಗಿ ಬಾಧಿತರಾಗಿದ್ದಾರೆ, ಎಷ್ಟು ಪ್ರಮಾಣದ ಹಣ ಅಥವಾ ವೈಯಕ್ತಿಕ ಮಾಹಿತಿ ಕಳುವಾಗಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸೋಂಕಿತ ಸ್ಕ್ರಿಪ್ಟ್‌ಗಳನ್ನು ತೆಗೆದುಹಾಕುವ ಕಾರ್ಯ ನಡೆದಿದ್ದರೂ, ಎಲ್ಲ ವೆಬ್‌ಸೈಟ್‌ಗಳಲ್ಲಿಯೂ ಅಪಾಯ ಸಂಪೂರ್ಣವಾಗಿ ನಿವಾರಣೆಯಾಗಿದೆ ಎಂಬ ಅಂತಿಮ ದೃಢೀಕರಣ ದೊರೆತಿಲ್ಲ. ಹೀಗಾಗಿ ಸೈಬರ್‌ ಭದ್ರತಾ ಸಂಸ್ಥೆಗಳ ಪರಿಶೀಲನೆ ಮುಂದುವರಿದಿದೆ.

ಈ ಹಿನ್ನೆಲೆಯಲ್ಲಿ ಕ್ರಿಪ್ಟೋಕರೆನ್ಸಿ ವಹಿವಾಟು ನಡೆಸುವವರು ಹಣ ವರ್ಗಾವಣೆಗೂ ಮುನ್ನ ವ್ಯಾಲೆಟ್‌ ವಿಳಾಸವನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಅಪರಿಚಿತ ಅಥವಾ ಅನುಮಾನಾಸ್ಪದ ವೆಬ್‌ಪುಟಗಳಲ್ಲಿ ಬ್ಯಾಂಕ್‌ ಕಾರ್ಡ್‌ ವಿವರಗಳನ್ನು ನಮೂದಿಸುವುದನ್ನು ತಪ್ಪಿಸಬೇಕು. ಜನಪ್ರಿಯ ವೆಬ್‌ಸೈಟ್‌ಗಳೂ ಮೂರನೇ ವ್ಯಕ್ತಿಯ ಸಾಫ್ಟ್‌ವೇರ್‌ ಮೂಲಕ ಸೈಬರ್‌ ದಾಳಿಗೆ ಒಳಗಾಗಬಹುದು ಎಂಬುದನ್ನು ಈ ಘಟನೆ ಮತ್ತೊಮ್ಮೆ ಎಚ್ಚರಿಸಿದೆ.