ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ‘ಅಣ್ಣ ಫ್ರಂ ಮೆಕ್ಸಿಕೋ’ ಸಿನಿಮಾ ಇದೇ ಡಿಸೆಂಬರ್ 24ರಂದು ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರತಂಡ ಪ್ರಚಾರದ ಭರಾಟೆಯನ್ನು ಜೋರಾಗಿಸಿದೆ. ಈಗಾಗಲೇ ಈ ಚಿತ್ರದ ‘ಪುಟ್ಟಮಲ್ಲಿ’ ಮತ್ತು ‘ಮಾಸಿಗೂ ಅಣ್ಣನೇ ನಿಮ್ ಬಾಸಿಗೂ ಅಣ್ಣನೆ’ ಹಾಡುಗಳು ಸಿನಿಪ್ರಿಯರ ಮನಗೆದ್ದು ಹಿಟ್ ಆಗಿವೆ. ಇದೀಗ ಆ ಸಾಲಿಗೆ ಚಿತ್ರದ ಮೂರನೇ ಹಾಡು ‘ಹೋಗೋಣ ಬಾರಾ ಮೆಕ್ಸಿಕೋ’ ಲಿರಿಕಲ್ ವಿಡಿಯೋ ಸಾಂಗ್ ನವೆಂಬರ್ 15ರಂದು ‘ಆನಂದ್ ಆಡಿಯೋ’ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.
ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರ ಮಜವಾದ ಸಾಹಿತ್ಯಕ್ಕೆ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅಷ್ಟೇ ಲವಲವಿಕೆಯ ಸಂಗೀತ ಸಂಯೋಜಿಸಿದ್ದಾರೆ. ಉತ್ತರ ಕರ್ನಾಟಕದ ಸೊಗಡಿನ ಗಾಯಕ ಮಾಳು ನಿಪನಾಳ್ ಜೊತೆಗೆ ಮಾಧುರಿ ಶೇಷಾದ್ರಿ ಮತ್ತು ಅಭಿಷೇಕ್ ನಗರ್ಕರ್ ಈ ಹಾಡಿಗೆ ಧ್ವನಿಯಾಗಿ ಹಾಡಿನ ಎನರ್ಜಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಹಾಡಿನಲ್ಲಿ ಡಾಲಿ ಧನಂಜಯ್ ಮತ್ತು ನಾಯಕಿ ರೀಷ್ಮಾ ನಾಣಯ್ಯ ಅವರ ಜೋಡಿ, ಕೆಮಿಸ್ಟ್ರಿ ಹಾಗೂ ಭರ್ಜರಿ ಡ್ಯಾನ್ಸ್ ಸ್ಟೆಪ್ಸ್ ಅಭಿಮಾನಿಗಳಿಗೆ ಹಬ್ಬದೂಟ ನೀಡುವಂತಿದೆ.
‘ಬಡವ ರಾಸ್ಕಲ್’ ಖ್ಯಾತಿಯ ಶಂಕರ್ ಗುರು ನಿರ್ದೇಶನದ ಈ ಚಿತ್ರದಲ್ಲಿ ಉಮಾಶ್ರೀ, ರಂಗಾಯಣ ರಘು, ನಾಗಭೂಷಣ, ಸಾಧು ಕೋಕಿಲ, ಪೂರ್ಣಚಂದ್ರ ಮೈಸೂರು, ಹುಲಿ ಕಾರ್ತಿಕ್ ಸೇರಿದಂತೆ ದೊಡ್ಡ ತಾರಾಗಣವಿದ್ದು, ಲೂಸ್ ಮಾದ ಯೋಗಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಚನ್ನರಾಜ್ ಬಿ ಹಟ್ಟಿಹೊಳಿ, ಮೃಣಾಲ್, ಸತ್ಯ ರಾಯಲ ಹಾಗೂ ಜಾನ್ವಿ ರಾಯಲ ನಿರ್ಮಾಣದ ಈ ಸಿನಿಮಾ ಡಿಸೆಂಬರ್ 24ರಂದು ಬೆಳ್ಳಿತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ.






















