SK Home Ad
Home ಸಿನಿ ಮಿಲ್ಸ್ ನಟಿ ಶರ್ಮಿಳಾ ಮಾಂಡ್ರೆ ಸಂಭ್ರಮ: ಮದುವೆಯಾದ ನಾಲ್ಕೇ ತಿಂಗಳಿಗೆ ತಾಯಿಯಾಗುತ್ತಿರುವ ಸಿಹಿ ಸುದ್ದಿ ಕೊಟ್ಟ ನಟಿ!

ನಟಿ ಶರ್ಮಿಳಾ ಮಾಂಡ್ರೆ ಸಂಭ್ರಮ: ಮದುವೆಯಾದ ನಾಲ್ಕೇ ತಿಂಗಳಿಗೆ ತಾಯಿಯಾಗುತ್ತಿರುವ ಸಿಹಿ ಸುದ್ದಿ ಕೊಟ್ಟ ನಟಿ!

0
33

ಬೆಂಗಳೂರು: ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಮನೆಮಾತಾಗಿರುವ ನಟಿ ಶರ್ಮಿಳಾ ಮಾಂಡ್ರೆ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ತಮಿಳು ಸಿನಿಮಾ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ವಿವಾಹವಾದ ಕೇವಲ ನಾಲ್ಕು ತಿಂಗಳ ಅಂತರದಲ್ಲೇ ತಾವು ತಾಯಿಯಾಗುತ್ತಿರುವ ಅಧಿಕೃತ ಮಾಹಿತಿಯನ್ನು ನಟಿ ಬಹಿರಂಗಪಡಿಸಿದ್ದು, ದಂಪತಿ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.

ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಶೇಷ ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ಶರ್ಮಿಳಾ ಈ ಸಂಭ್ರಮದ ವಿಚಾರವನ್ನು ಜಗತ್ತಿಗೆ ತಿಳಿಸಿದ್ದಾರೆ. ಈ ಫೋಟೋದಲ್ಲಿ ಶರ್ಮಿಳಾ ಮತ್ತು ಪತಿ ಸುಧನ್ ಪರಸ್ಪರ ಕೈಹಿಡಿದುಕೊಂಡಿದ್ದು, ತಮ್ಮ ಬೆರಳುಗಳಲ್ಲಿ ಪುಟ್ಟ ಮಗುವಿನ ಬಿಳಿ ಬಣ್ಣದ ಬೂಟುಗಳನ್ನು ಹಿಡಿದು “ಪುಟ್ಟ ಹೆಜ್ಜೆಗಳು” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಚಿತ್ರರಂಗದ ಗಣ್ಯರು, ಆಪ್ತರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಜೂನ್ 25ರಂದು ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ಕಳೆದ ಜುಲೈ 12ರಂದು ರಾಜಸ್ಥಾನದ ಜೈಪುರದ ಸಮೋದ್ ಅರಮನೆಯಲ್ಲಿ ದಕ್ಷಿಣ ಭಾರತದ ಹಾಗೂ ರಾಜಸ್ಥಾನಿ ಪರಂಪರೆಯಂತೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ‘ಸಜನಿ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ‘ಕೃಷ್ಣ’, ‘ನವಗ್ರಹ’, ‘ಗಾಳಿಪಟ-2’, ‘ಪೌಡರ್’ ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿರುವ ಶರ್ಮಿಳಾ ಬದುಕಿನಲ್ಲಿ ಇದೀಗ ಹೊಸ ಅಧ್ಯಾಯ ಆರಂಭವಾಗಿದೆ.

ಒಟ್ಟಾರೆಯಾಗಿ.. ನಟಿ ಸರ್ಮಿಳಾ ತಮ್ಮ ಅಧಿಕೃತ ಖಾತೆಯಲ್ಲಿ ಸ್ವತಃ ತಾಯಿಯಾಗುತ್ತಿರುವ ಸುದ್ದಿಯನ್ನು ಹೇಳಿಕೊಂಡಿದ್ದಾರೆ. ಇದಕ್ಕೆ ನಟಿಯ ಆತ್ಮೀಯರು ಮತ್ತು ಕುಟುಂಬ ಹಾಗೂ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.