SK Home Ad
Home ನಮ್ಮ ಜಿಲ್ಲೆ ಬೆಳಗಾವಿ ರೈತರ ಹೋರಾಟಕ್ಕೆ ಮಠಾಧೀಶರು, ವಕೀಲರ ಸಾಥ್‌; ಐದನೇ ದಿನವೂ ಹೋರಾಟದ ಕಾವು!

ರೈತರ ಹೋರಾಟಕ್ಕೆ ಮಠಾಧೀಶರು, ವಕೀಲರ ಸಾಥ್‌; ಐದನೇ ದಿನವೂ ಹೋರಾಟದ ಕಾವು!

0
76

ಬೆಳಗಾವಿ: ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಗುರ್ಲಾಪುರ ಕ್ರಾಸ್‌ನಲ್ಲಿ ನಡೆಯುತ್ತಿರುವ ರೈತರ ಹೋರಾಟ ಐದನೇ ದಿನಕ್ಕೆ ಕಾಲಿಟ್ಟಿದ್ದು ಹೋರಾಟಕ್ಕೆ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ.

ಗುರುವಾರ ನಡೆದ ರೈತರ ಪ್ರತಿಭಟನೆಯಲ್ಲಿ ವಿವಿಧ ಮಠಾಧೀಶರು, ವಕೀಲರು ಭಾಗವಹಿಸಿ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ ಸಾವಿರಾರು ಸಂಖ್ಯೆಯಲ್ಲಿ ರೈತರು ಸ್ವಯಂ ಪ್ರೇರಿತರಾಗಿ ಬಂದು ಹೋರಾಟದಲ್ಲಿ ಭಾಗಿಯಾದರು.

ಮೂಡಲಗಿ ನ್ಯಾಯವಾದಿಗಳು ನ್ಯಾಯಾಲಯದ ಕಾರ್ಯ ಕಲಾಪದಿಂದ ದೂರ ಉಳಿದು ರೈತರೊಂದಿಗೆ ಹೋರಾಟದಲ್ಲಿ ಪಾಲ್ಗೊಂಡರು. ಹೋರಾಟದ ಸಂದರ್ಭದಲ್ಲಿ ರೈತರ ಮೇಲೆ ಯಾವುದೇ ಪ್ರಕರಣ ದಾಖಲಾದರೆ ನಾವು ನಮ್ಮ ಸಂಘದ ವತಿಯಿಂದ ಉಚಿತವಾಗಿ ಅವರಿಗೆ ಕಾನೂನು ಸೇವೆ ಒದಗಿಸುತ್ತೇವೆ ಎಂದು ನ್ಯಾಯವಾದಿ ಕೃಷ್ಣ ಹುಣಶ್ಯಾಳ ಹೇಳಿದರು.

ನಾಡಿನ ಎಲ್ಲ ಕಡೆಗಳಿಂದ ಧನಸಹಾಯ, ದವಸ ಧಾನ್ಯ ತುಂಬಿದ ಟ್ರ‍್ಯಾಕ್ಟರ್‌ಗಳು, ಮಹಿಳೆಯರು ರೊಟ್ಟಿ ಬುತ್ತಿ ಹೊತ್ತುಕೊಂಡು ಸಾಗರೋಪಾದಿಯಲ್ಲಿ ಹೋರಾಟಕ್ಕೆ ಹರಿದು ಬರುತ್ತಿದ್ದು ಕಬ್ಬಿಗೆ ನ್ಯಾಯಯುತ ಬೆಲೆ ನೀಡಬೇಕೆಂಬ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ.

ಈ ವೇಳೆ ಪ್ರತಿಭಟನಾನಿರತ ರೈತರನ್ನುದ್ದೇಶಿಸಿ ಮಾತನಾಡಿದ ರೈತ ನಾಯಕ ಚೂನಪ್ಪ ಪೂಜಾರಿ, ಕೇಂದ್ರ ಸಮಿತಿಯವರು ಬೆಂಗಳೂರಿನಲ್ಲಿ ನಡೆಸಿದ ಸಭೆಗೆ ಗುರ್ಲಾಪುರ ರೈತರ ಹೋರಾಟ ಬಿಟ್ಟು ತೆರಳಲು ಸಾಧ್ಯವಾಗಿಲ್ಲ. ಹೋರಾಟದ ಸ್ಥಳಕ್ಕೆ ಬಂದು ಕಬ್ಬು ಬೆಳೆಗಾರರ ನೈಜ ಪರಿಸ್ಥಿತಿ ಕಣ್ಣಾರೆ ವೀಕ್ಷಿಸಿ ಮಾಹಿತಿ ಪಡೆದುಕೊಳ್ಳಬೇಕಿತ್ತು ಎಂದು ಹೇಳಿದರು.

ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ದೊರೆಯಬೇಕು. ಸಕ್ಕರೆಗೆ ಪ್ರತಿ ಕೆಜಿಗೆ 60 ರೂ. ಎಂಎಸ್‌ಪಿ ನಿಗದಿಪಡಿಸಬೇಕು ಹಾಗೂ ಕಾರ್ಖಾನೆ ಮಾಲಿಕರು ಕಬ್ಬಿಗೆ ಪ್ರತಿ ಟನ್‌ಗೆ 4500 ರೂ. ನೀಡಲೇಬೇಕು ಎಂಬುದು ನಮ್ಮ ಪ್ರಮುಖ ಒತ್ತಾಯವಾಗಿದೆ ಎಂದು ಚೂನಪ್ಪ ಪೂಜಾರಿ ಹೇಳಿದರು.

ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಮಹಾಸ್ವಾಮಿಗಳು, ಚನ್ನಮ್ಮನ ಕಿತ್ತೂರು ಕಲ್ಮಠದ ಶ್ರೀಗಳು, ಶಶಿಕಾಂತ ಪಡಸಲಗಿ ಗುರೂಜಿ, ಶಿವಕುಮಾರ್ ಸ್ವಾಮಿಗಳು, ಈರಪ್ಪ ಗದಾಡಿ, ಮಲ್ಲಪ್ಪ ಅಂಗಡಿ, ಪ್ರೇಮ್ ಚೌಗಲಾ ಅನೇಕರು ಉಪಸ್ಥಿತರಿದ್ದರು.