ಟಾಟಾ ಸನ್ಸ್ನ ಆಡಳಿತ ಮಂಡಳಿಯಲ್ಲಿ ಆರಂಭವಾಗಿರುವ ಆಂತರಿಕ ಸಮರ ಇದೀಗ ದೇಶದ ರಾಜಕೀಯ ಅಂಗಳದಲ್ಲಿ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ. ಟಾಟಾ ಸನ್ಸ್ ಕಾರ್ಯಾಧ್ಯಕ್ಷರಾಗಿ ಎನ್. ಚಂದ್ರಶೇಖರನ್ ಅವರ ಮರುನೇಮಕವನ್ನು ಟಾಟಾ ಟ್ರಸ್ಟ್ ಅಧ್ಯಕ್ಷ ನೋಯೆಲ್ ಟಾಟಾ ಬಲವಾಗಿ ವಿರೋಧಿಸಿರುವ ಬೆನ್ನಲ್ಲೇ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
“ಟಾಟಾ ಸಂಸ್ಥೆಯನ್ನು ವ್ಯವಸ್ಥಿತವಾಗಿ ನಾಶಪಡಿಸಲಾಗುತ್ತಿದೆ; ಯಾವೊಬ್ಬ ಉದ್ಯಮಿಯೂ ಇದರ ವಿರುದ್ಧ ಧ್ವನಿ ಎತ್ತುತ್ತಿಲ್ಲ. ಭಾರತೀಯ ಉದ್ಯಮಗಳು ಬಿಜೆಪಿಯ ಆಟದ ಬೊಂಬೆಗಳಲ್ಲ” ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ ಅವರ ಈ ಆರೋಪಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೀಕ್ಷ್ಣ ತಿರುಗೇಟು ನೀಡಿದ್ದಾರೆ. “ಎಲ್ಲಾ ಆಂತರಿಕ ಹಾಗೂ ಕಾನೂನು ವಿಚಾರಗಳನ್ನು ರಾಜಕೀಯಗೊಳಿಸುವುದನ್ನು ನಿಲ್ಲಿಸಿ. ವಾಣಿಜ್ಯ ಮತ್ತು ಕಾರ್ಪೊರೇಟ್ ವಿಷಯಗಳನ್ನು ಅಪರಾಧ ಎಂದು ಕರೆಯುವುದು ಸ್ವೀಕಾರಾರ್ಹವಲ್ಲ.
ದಶಕಗಳ ಕಾಲ ‘ಲೈಸೆನ್ಸ್-ಕೋಟಾ ರಾಜ್’ ಮೂಲಕ ಉದ್ಯಮಗಳ ಕತ್ತು ಹಿಸುಕಿ ಬಡತನ ಹೇರಿದ್ದು ನಿಮ್ಮ ಪಕ್ಷ. ಭಾರತೀಯ ಉದ್ಯಮಗಳ ಯಶಸ್ಸನ್ನು ಅವಮಾನಿಸುವುದನ್ನು ಬಿಟ್ಟು ಎಲ್ಲೆಡೆ ಭೂತ ನೋಡುವುದನ್ನು ನಿಲ್ಲಿಸಿ” ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಅಸಲಿಗೆ, ಸೆಪ್ಟೆಂಬರ್ 17 ರಂದು ನಡೆದ ಟಾಟಾ ಸನ್ಸ್ ಮಂಡಳಿ ಸಭೆಯಲ್ಲಿ ಚಂದ್ರಶೇಖರನ್ ಅವರ ಮರುನೇಮಕ ನಿರ್ಣಯ ಅಂಗೀಕರಿಸಿದ್ದನ್ನು ನೋಯೆಲ್ ಟಾಟಾ ನಿಯಮಬಾಹಿರ ಎಂದು ಪ್ರಶ್ನಿಸಿದ್ದಾರೆ. ಕಂಪನಿಯ ನಿಯಮಾವಳಿಗಳ ಆರ್ಟಿಕಲ್ 118 ರ ಅಡಿಯಲ್ಲಿ ಯಾವುದೇ ಆಯ್ಕೆ ಸಮಿತಿ ರಚಿಸಿಲ್ಲ ಹಾಗೂ ಆರ್ಟಿಕಲ್ 104B ಅಡಿಯಲ್ಲಿ ಟ್ರಸ್ಟ್ ನಿರ್ದೇಶಕರ ಒಮ್ಮತದ ಮತ ಪಡೆದಿಲ್ಲ ಎಂದು ಅಕ್ಟೋಬರ್ 26 ರಂದು ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಭೆಯ ಆಡಿಯೋ-ವಿಡಿಯೋ ರೆಕಾರ್ಡಿಂಗ್ ಹಾಗೂ ಅಧಿಕೃತ ಮಿನಿಟ್ಸ್ ಹಂಚಿಕೊಳ್ಳದೆ ತರಾತುರಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ಅವರ ಪ್ರಮುಖ ಆರೋಪವಾಗಿದೆ.




















