SK Home Ad
Home ಸುದ್ದಿ ದೇಶ ‘ಉಡದಂತೆ ಬಾಯಿ ಬಡಿದುಕೊಳ್ತಿದ್ದೀರಾ?’: ಮಾಜಿ ಸಚಿವರ ಬಂಧನದ ಬೆನ್ನಲ್ಲೇ ಸ್ಟಾಲಿನ್ ವಿರುದ್ಧ ಸಿಎಂ ವಿಜಯ್ ಪಕ್ಷದ...

‘ಉಡದಂತೆ ಬಾಯಿ ಬಡಿದುಕೊಳ್ತಿದ್ದೀರಾ?’: ಮಾಜಿ ಸಚಿವರ ಬಂಧನದ ಬೆನ್ನಲ್ಲೇ ಸ್ಟಾಲಿನ್ ವಿರುದ್ಧ ಸಿಎಂ ವಿಜಯ್ ಪಕ್ಷದ ಕಿಡಿ!

0
46

ತಮಿಳುನಾಡಿನ ಮಾಜಿ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಅವರ ಭ್ರಷ್ಟಾಚಾರ ಪ್ರಕರಣದ ಬಂಧನದ ಬೆನ್ನಲ್ಲೇ, ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ  ಮತ್ತು ಡಿಎಂಕೆ ನಡುವೆ ಭೀಕರ ವಾಕ್ಸಮರ ಭುಗಿಲೆದ್ದಿದೆ. ಖಾಸಗಿ ಶಾಲೆಗಳಿಗೆ ಶಾಶ್ವತ ಮಾನ್ಯತೆ ಮತ್ತು ಸರ್ಕಾರಿ ಪರವಾನಗಿ ನೀಡಲು ಬರೋಬ್ಬರಿ 100 ಕೋಟಿ ರೂಪಾಯಿ ಲಂಚ ಪಡೆದ ಆರೋಪದಡಿ ಮದ್ರಾಸ್ ಹೈಕೋರ್ಟ್ ನಿರೀಕ್ಷಣಾ ಜಾಮೀನು ವಜಾಗೊಳಿಸಿದ ಕೆಲವೇ ಕ್ಷಣಗಳಲ್ಲಿ ಚೆನ್ನೈ ಸಿಸಿಬಿ ಪೊಲೀಸರು ಅನ್ಬಿಲ್ ಮಹೇಶ್ ಅವರನ್ನು ಸೋಮವಾರ ಬಂಧಿಸಿದ್ದಾರೆ.

ಈ ಬೆಳವಣಿಗೆಯ ಬೆನ್ನಲ್ಲೇ ನಟ, ರಾಜಕಾರಣಿ ಹಾಗೂ ತಮಿಳುನಾಡು ಮುಖ್ಯಮಂತ್ರಿ ವಿಜಯ್ ನೇತೃತ್ವದ ಟಿವಿಕೆ ಐಟಿ ವಿಭಾಗವು, ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪೋಸ್ಟ್‌ಗಳನ್ನು ಹಾಕಿರುವ ಟಿವಿಕೆ, 2025ರ ಕರೂರ್ ಕಾಲ್ತುಳಿತ ದುರಂತದ ಸಮಯದಲ್ಲಿ ಅನ್ಬಿಲ್ ಮಹೇಶ್ ಆಡಿದ್ದ ಮಾತುಗಳನ್ನು ಪ್ರಸ್ತಾಪಿಸಿ ಅಣಕವಾಡಿದೆ.

ವಿಜಯ್ ಅವರ ಸಾರ್ವಜನಿಕ  ರ್ಯಲಿಯಲ್ಲಿ 41 ಮಂದಿ ಸಾವನ್ನಪ್ಪಿದ್ದಾಗ, “ನಿಯಮಗಳನ್ನು ಪಾಲಿಸಲಿಲ್ಲ” ಎಂದು ಕಣ್ಣೀರಿಟ್ಟು ಮಾತನಾಡಿದ್ದ ಮಹೇಶ್ ಅವರ ಹಳೆಯ ವೀಡಿಯೋವನ್ನು ಉಲ್ಲೇಖಿಸಿ, “ಈಗ ನಿಯಮಗಳು ಸರಿಯಾಗಿ ಪಾಲನೆಯಾಗುತ್ತಿವೆ” ಎಂದು ವಿಂಕ್ ಎಮೋಜಿಯೊಂದಿಗೆ ಲೇವಡಿ ಮಾಡಿದೆ.

ಅಷ್ಟೇ ಅಲ್ಲದೆ, ಎಂ.ಕೆ. ಸ್ಟಾಲಿನ್ ವಿರುದ್ಧ ಅತ್ಯಂತ ಕಟು ಶಬ್ದಗಳಿಂದ ದಾಳಿ ನಡೆಸಿರುವ ಟಿವಿಕೆ, “ಅಧಿಕಾರದಲ್ಲಿದ್ದಾಗ ನೀವೇನು ನಿದ್ದೆ ಮಾಡುತ್ತಿದ್ದೀರಾ ಸ್ಟಾಲಿನ್ ಅವರೇ? ನಿಮ್ಮ ಸಚಿವರು ಸಾಲು ಸಾಲು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಸಿಲುಕಿರುವಾಗ, ನೀವ್ಯಾಕೆ ಉಡದಂತೆ (Bengal Monitor Lizard) ಬಾಯಿ ಬಡಿದುಕೊಳ್ಳುತ್ತಿದ್ದೀರಿ?” ಎಂದು ಪ್ರಶ್ನಿಸಿದೆ.

“ಭ್ರಷ್ಟಾಚಾರದಲ್ಲಿ ಮುಳುಗಿರುವ ಡಿಎಂಕೆ ಇಂದು ಸಜ್ಜನರ ಮುಖವಾಡ ಧರಿಸಲು ಹೊರಟಿದೆ. ‘ನನ್ನ ಪ್ರಾಣಸ್ನೇಹಿತನ ಮಗ ನನ್ನ ಮಗನಿದ್ದಂತೆ’ ಎಂದು ಮಹೇಶ್ ಪರ ನಿಲ್ಲುತ್ತಿದ್ದ ಸ್ಟಾಲಿನ್ ಈಗ ಏನು ಸಬೂಬು ಹೇಳುತ್ತಾರೆ? ನೈಜ ನಾಯಕ, ಭ್ರಷ್ಟಾಚಾರ ವಿರೋಧಿ ಹೀರೋ ನಮ್ಮ ಮುಖ್ಯಮಂತ್ರಿ ವಿಜಯ್” ಎಂದು ಡಿಎಂಕೆ ಪಕ್ಷವನ್ನು ‘ಕರಪ್ಷನ್ ಮುನ್ನೇತ್ರ ಕಳಗಂ’ ಎಂದು ಟೀಕಿಸಿದೆ.