SK Home Ad
Home ಸುದ್ದಿ ರಾಜ್ಯ ಕಬ್ಬಿನ ದರಕ್ಕೆ ಪಟ್ಟು: ಸುವರ್ಣಸೌಧದಲ್ಲೇ ಕೈಕೈ ಮಿಲಾಯಿಸಿದ ರೈತರು

ಕಬ್ಬಿನ ದರಕ್ಕೆ ಪಟ್ಟು: ಸುವರ್ಣಸೌಧದಲ್ಲೇ ಕೈಕೈ ಮಿಲಾಯಿಸಿದ ರೈತರು

0
87

ಬೆಳಗಾವಿ: ‘ಹೊರಗೆ ಐದೂವರೆ ಸಾವಿರ ಎನ್ನುತ್ತೀರಿ; ಒಳಗೆ ನಾಲ್ಕೂವರೆ ಸಾವಿರ ಎನ್ನುತ್ತೀರಾ?’ ಎಂಬ ಪ್ರಶ್ನೆ ಕಬ್ಬು ಬೆಳೆಗಾರರ ಸಭಾಂಗಣದಲ್ಲಿ ರೈತ ಬಣಗಳ ನಡುವಿನ ಹೊಡೆದಾಟಕ್ಕೆ ತಿರುಗಿತು. ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಯಬೇಕಿದ್ದ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಕೋಡಿಹಳ್ಳಿ ಚಂದ್ರಶೇಖರ ಹಾಗೂ ಚೂನಪ್ಪ ಪೂಜಾರಿ ಬಣಗಳ ರೈತರು ಕೈಕೈ ಮಿಲಾಯಿಸಿದರು.

ಕಬ್ಬಿಗೆ ದರ ಕೇಳಲು ಬಂದವರೇ ಪರಸ್ಪರ ಮುಗಿಬಿದ್ದಾಗ ಸಭಾಂಗಣದಲ್ಲಿ ಗೊಂದಲ ಉಂಟಾಯಿತು. ಮೇಜಿನ ಮೇಲೆ ಕುಡಿಯುವ ನೀರಿಗಾಗಿ ಇಟ್ಟಿದ್ದ ಗಾಜಿನ ಲೋಟವನ್ನೂ ಎಸೆಯಲಾಯಿತು. ಪೊಲೀಸರು ಮಧ್ಯಪ್ರವೇಶಿಸಿ ಇಬ್ಬರು ರೈತರನ್ನು ಹೊರಗೆ ಕರೆದೊಯ್ದ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು.

ಸಭಾಂಗಣದಲ್ಲಿ ಕುಡಿಯುವ ನೀರು, ಚಹಾ ವ್ಯವಸ್ಥೆ ಇಲ್ಲ ಎಂಬ ಅಸಮಾಧಾನದಿಂದ ಮೊದಲು ಗದ್ದಲ ಆರಂಭವಾಯಿತು. ಅಲ್ಲಿದ್ದವರನ್ನು ಸಮಾಧಾನಪಡಿಸಿದ ಚೂನಪ್ಪ ಪೂಜಾರಿ ಬಳಿಕ ಮಾತು ಆರಂಭಿಸಿದರು. ‘ಈ ವರ್ಷ ಪ್ರತಿ ಟನ್‌ ಕಬ್ಬಿಗೆ ನಾಲ್ಕೂವರೆ ಸಾವಿರ ರೂಪಾಯಿ ಪಡೆದೇ ತೀರೋಣ’ ಎಂಬ ಅವರ ಹೇಳಿಕೆ ಮತ್ತೊಂದು ಸುತ್ತಿನ ಗಲಾಟೆಗೆ ಕಾರಣವಾಯಿತು.

₹5,500 ದರದ ಬೇಡಿಕೆ ಮುಂದಿಟ್ಟಿರುವಾಗ ₹4,500 ಪಡೆಯುವ ಮಾತೇಕೆ ಎಂದು ಕೋಡಿಹಳ್ಳಿ ಚಂದ್ರಶೇಖರ ಬಣದ ರೈತರು ಆಕ್ಷೇಪಿಸಿದರು. ‘ಹೊರಗೆ ಐದೂವರೆ ಸಾವಿರ ಅಂತೀರಿ; ಒಳಗೆ ನಾಲ್ಕೂವರೆ ಸಾವಿರ ಅಂತೀರಾ?’ ಎಂದು ಪ್ರಶ್ನಿಸಿದಾಗ ಉಭಯ ಬಣಗಳ ನಡುವೆ ಮಾತಿನ ಚಕಮಕಿ ತೀವ್ರಗೊಂಡಿತು.

ಈ ವೇಳೆ ಕೋಡಿಹಳ್ಳಿ ಬಣದ ರೈತರೊಬ್ಬರು ‘ನೀವು ಸೂಟ್‌ಕೇಸ್‌ ಗಿರಾಕಿ’ ಎಂದು ಆರೋಪಿಸಿದ್ದು ಪರಿಸ್ಥಿತಿಯನ್ನು ಮತ್ತಷ್ಟು ಕೆರಳಿಸಿತು. ಆ ರೈತನತ್ತ ಮತ್ತೊಂದು ಬಣದವರು ಮುಗಿಬೀಳುತ್ತಿದ್ದಂತೆ ತಳ್ಳಾಟ, ಹೊಡೆದಾಟ ನಡೆಯಿತು. ಗಾಜಿನ ಲೋಟ ಎಸೆದಾಟವೂ ನಡೆದು ಸಭಾಂಗಣದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು.

ಪೊಲೀಸರು ಉಭಯ ಬಣಗಳ ನಡುವೆ ನಿಂತು ರೈತರನ್ನು ಬೇರ್ಪಡಿಸಿದರು. ಗಲಾಟೆಯಲ್ಲಿ ತೊಡಗಿದ್ದ ಇಬ್ಬರನ್ನು ಸಭಾಂಗಣದಿಂದ ಕರೆದೊಯ್ದು ಪರಿಸ್ಥಿತಿ ತಿಳಿಗೊಳಿಸಿದರು. ಸರ್ಕಾರದ ಮುಂದೆ ಕಬ್ಬಿನ ದರದ ಬೇಡಿಕೆ ಮಂಡಿಸಬೇಕಿದ್ದ ಹೊತ್ತಿನಲ್ಲೇ, ಬೇಡಿಕೆಯ ಮೊತ್ತದ ವಿಚಾರದಲ್ಲಿ ರೈತ ಮುಖಂಡರ ನಡುವಿನ ಭಿನ್ನಮತ ಸ್ಫೋಟಗೊಂಡಿತು. ದರದ ಚರ್ಚೆಗೆ ಮೀಸಲಾಗಬೇಕಿದ್ದ ಸಭಾಂಗಣ ಪರಸ್ಪರ ಆರೋಪ, ಹೊಡೆದಾಟಕ್ಕೆ ಸಾಕ್ಷಿಯಾಯಿತು.