SK Home Ad
Home ಸುದ್ದಿ ರಾಜ್ಯ ಅರಮನೆ ಸರ್ಕಾರದ್ದು, ರಾಜರಿಗೆ ಜಾಗ ಕೊಟ್ಟಿದ್ದೇವೆ ಅಷ್ಟೇ

ಅರಮನೆ ಸರ್ಕಾರದ್ದು, ರಾಜರಿಗೆ ಜಾಗ ಕೊಟ್ಟಿದ್ದೇವೆ ಅಷ್ಟೇ

0
67

ಮೈಸೂರು: ದಸರಾ ಆಚರಣೆಯಲ್ಲಿ ಸಮನ್ವಯದ ಕೊರತೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಅರಮನೆ, ಅರಮನೆ ಜಾಗ ಹಾಗೂ ಅರಮನೆ ಮಂಡಳಿ ಸರ್ಕಾರಕ್ಕೆ ಸೇರಿದ್ದು. ಅವರಿಗೆ ಉಳಿದುಕೊಳ್ಳಲು ಒಂದಿಷ್ಟು ಜಾಗ ಕೊಟ್ಟಿದ್ದೇವೆ, ಅಷ್ಟೇ. ಸರ್ಕಾರದ ದಸರಾಕ್ಕೂ ಇತಿಹಾಸವಿದೆ. ಅದನ್ನು ದಸರಾ ಅಲ್ಲ ಎಂದು ಹೇಳುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಮೋದಾದೇವಿ ಒಡೆಯರ್ ಅವರಿಗೆ ಏನಾದರೂ ಸಮಸ್ಯೆಗಳಿದ್ದರೆ ಸರ್ಕಾರದ ಗಮನಕ್ಕೆ ತರಬಹುದಿತ್ತು. ಆದರೆ, ಅವರು ಸರ್ಕಾರಕ್ಕೆ ಪತ್ರ ಬರೆಯದೆ ಏಕಾಏಕಿ ಮಾಧ್ಯಮಗಳಿಗೆ ಪತ್ರ ಬರೆದಿದ್ದಾರೆ. ಅವರ ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.

ಅಂಬಾರಿಯನ್ನು ಉಚಿತವಾಗಿ ಪಡೆಯುತ್ತಿಲ್ಲ. ಅದಕ್ಕೂ ಸರ್ಕಾರ ಹಣ ನೀಡುತ್ತದೆ. ಅಂಬಾರಿ ಆನೆಯ ಆಯ್ಕೆ ಕೊನೆಯ ಕ್ಷಣದಲ್ಲಿ ನಡೆದಿದ್ದು, ಮಹೇಂದ್ರ, ಧನಂಜಯ ಹಾಗೂ ಪ್ರಶಾಂತ ಆನೆಗಳ ವಿಚಾರದಲ್ಲಿ ಗೊಂದಲ ಉಂಟಾಗಿದ್ದರಿಂದ ಆಯ್ಕೆ ವಿಳಂಬವಾಯಿತು. ಅಂಬಾರಿ ಆನೆ ಯಾವುದು ಎಂಬುದನ್ನು ರಾಜವಂಶಸ್ಥರಿಗೆ ತಿಳಿಸುವ ಕಾನೂನುಬದ್ಧ ಅಗತ್ಯವಿಲ್ಲ ಎಂದರು.

ಜೆಟ್ಟಿ ಕಾಳಗ ರದ್ದು, ಪರಿಶೀಲನೆ: ಜೆಟ್ಟಿ ಕಾಳಗ ರದ್ದಾದ ವಿಚಾರದಲ್ಲಿ ಪ್ರಮೋದಾದೇವಿ ಒಡೆಯರ್ ಅವರ ಹೇಳಿಕೆಗೂ ಪೊಲೀಸರ ವಿವರಣೆಗೂ ವ್ಯತ್ಯಾಸವಿದೆ. ಜೆಟ್ಟಿಗಳು ತಡವಾಗಿ ಬಂದಿದ್ದರಿಂದ ಸಮಸ್ಯೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿ, ಎಲ್ಲಿ ತಪ್ಪಾಗಿದೆ ಎಂಬುದನ್ನು ತಿಳಿದುಕೊಳ್ಳಲಾಗುವುದು ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.