ಚಿತ್ರದುರ್ಗ: ತಾಲ್ಲೂಕಿನ ಮಲ್ಲಾಪುರ ಗ್ರಾಮದ ಬಳಿ ಗುರಯವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಾಲಕ ಸೇರಿ ಇಬ್ಬರು ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಸಾರಿಗೆ ಬಸ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬಸ್ ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್ ಚಾಲಕ ಬಾಪು ಪಾಟೀಲ್ (36), ಕೂಡ್ಲಿಗಿ ಮೂಲದ ಬಾಲಕ ಗಗನ್ (14) ಮೃತರು. ಇಬ್ಬರೂ ಗಂಭೀರ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಗಾಯಗೊಂಡ 15ಕ್ಕೂ ಹೆಚ್ಚು ಪ್ರಯಾಣಿಕರಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ. ಚಿತ್ರದುರ್ಗದಿಂದ ಹೊರಟಿದ್ದ ಸಾರಿಗೆ ಬಸ್ ಮಲ್ಲಾಪುರ ಗ್ರಾಮದ ಸಮೀಪ ಬರುತ್ತಿದ್ದಂತೆ ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಧಾವಿಸಿ ರಕ್ಷಣಾ ಕಾರ್ಯ ನಡೆಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಸಿಪಿಐ ಬಾಲಚಂದ್ರ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಹುಬ್ಬಳ್ಳಿಯಲ್ಲಿ ಗಾಳಿಪಟದ ಮಾಂಜಾ ದಾರಕ್ಕೆ ಮಹಿಳೆ ಬಲಿ
- ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ: ಬಸ್–ಲಾರಿ ಮುಖಾಮುಖಿ ಡಿಕ್ಕಿಗೆ ಬಾಲಕ ಸೇರಿ ಇಬ್ಬರು ಸಾವು
- ಯತ್ನಾಳ್, ಈಶ್ವರಪ್ಪ ಸೇರ್ಪಡೆ ವಿಚಾರ ವರಿಷ್ಠರ ಅಂಗಳದಲ್ಲಿ: ಬಿ.ಪಿ. ಹರೀಶ್
- ಕರ್ನಾಟಕದ ಬರ ಪರಿಹಾರಕ್ಕೆ ₹20,585 ಕೋಟಿ ನೆರವಿಗೆ ಮನವಿ: ಪ್ರಧಾನಿ ಮೋದಿ, ಅಮಿತ್ ಶಾಗೆ ಪರಮೇಶ್ವರ ಪತ್ರ
- ದೇವಾ ಸಂಗೀತದ ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದ ಕೃಷ್ಣರಾಜ್ ನಿಧನ






















