SK Home Ad
Home ಸುದ್ದಿ ರಾಜ್ಯ ಜೋಶಿ ನೇತೃತ್ವದಲ್ಲಿ ಕಬ್ಬು ಬೆಳೆಗಾರರ ಸಭೆ: ರೈತ ಸಮೂಹದೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ

ಜೋಶಿ ನೇತೃತ್ವದಲ್ಲಿ ಕಬ್ಬು ಬೆಳೆಗಾರರ ಸಭೆ: ರೈತ ಸಮೂಹದೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ

0
72

ಹುಬ್ಬಳ್ಳಿ: ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲಾದ ಜೋಶಿ ಅವರ ನೇತೃತ್ವದಲ್ಲಿ ಭಾನುವಾರ ತಡರಾತ್ರಿ ನಡೆದ ಸಂಧಾನ ಸಭೆಯಲ್ಲಿ ರೈತರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ವ್ಯಕ್ತವಾಗಿದ್ದು, ಮುಂದಿನ ನಿರ್ಧಾರದ ಬಗ್ಗೆ ರೈತ ಸಮೂಹದೊಂದಿಗೆ ಚರ್ಚಿಸಿದ ಬಳಿಕ ನಿರ್ಧರಿಸುವುದಾಗಿ ರೈತ ಮುಖಂಡರು ತೀರ್ಮಾನಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ತಡರಾತ್ರಿ 1.15ರಿಂದ ಬೆಳಗಿನ ಜಾವ 3.10ರವರೆಗೆ ಸಭೆ ನಡೆದಿದೆ.

ಕಬ್ಬಿಗೆ ಸಂಬಂಧಿಸಿದ ಎಂಎಸ್‌ಪಿ ಬೆಲೆಯನ್ನು ಹೆಚ್ಚಿಸಬೇಕು, ರಾಜ್ಯದಲ್ಲಿ ಉತ್ಪಾದನೆಯಾಗುವ ಎಥೆನಾಲ್ ಅನ್ನು ಸಂಪೂರ್ಣವಾಗಿ ಖರೀದಿಸಬೇಕು ಹಾಗೂ ವಾಣಿಜ್ಯ ಬಳಕೆ ಸಕ್ಕರೆ ಮತ್ತು ಗೃಹಬಳಕೆ ಸಕ್ಕರೆಯನ್ನು ಪ್ರತ್ಯೇಕವಾಗಿ ವಿಂಗಡಿಸಿ, ವಾಣಿಜ್ಯ ಬಳಕೆ ಸಕ್ಕರೆಯ ಬೆಲೆ ಹೆಚ್ಚಿಸಬೇಕು ಎಂದು ರೈತ ಮುಖಂಡ ಚೂನಪ್ಪ ಪೂಜಾರಿ ಅವರು ರೈತರ ಪರವಾಗಿ ಪ್ರಮುಖ ಬೇಡಿಕೆಗಳನ್ನು ರೈತ ಮುಖಂಡರ ಮುಂದಿಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಲಾದ ಜೋಶಿ, ನಿಮ್ಮ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ. ಸಮಸ್ಯೆಗಳನ್ನು ಕೇಂದ್ರದ ಸಮಿತಿ ಮುಂದೆ ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಎರಡು ಮೂರು ದಿನಗಳಲ್ಲಿ ಸಮಿತೀ ಕಾರ್ಯಾರಂಭ ಮಾಡಲಿದೆ. ಈ ಪ್ರಕ್ರಿಯೆಗೆ ರೈತರು ಸಹಕಾರ ನೀಡಬೇಕು, ಬೇಡಿಕೆ ಈಡೇರಿಕೆಗೆ ಸ್ವಲ್ಪ ಸಮಯಾವಕಾಶ ಬೇಕು ಎಂದು ಮನವಿ ಮಾಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಚೂನಪ್ಪ ಪೂಜೇರಿ, ಸೊಮವಾರ ಬೆಳಿಗ್ಗೆ 11 ಗಂಟೆಗೆ ಧಾರವಾಡದ ತೇಗೂರಿನಲ್ಲಿ ರೈತ ಸಮೂಹದೊಂದಿಗೆ ಸಭೆ ನಡೆಸಲಾಗುವುದು. ಅಲ್ಲಿ ಸಚಿವರೊಂದಿಗೆ ನಡೆದ ಸಂಧಾನ ಸಭೆಯ ಸಂಪೂರ್ಣ ವಿವರವನ್ನು ತಿಳಿಸಿ, ರೈತರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ್ ಗುರೂಜಿ, ಸಂಸದ ಜಗದೀಶ ಶೆಟ್ಟ‌ರ, ಶಾಸಕರಾದ ಸಿ.ಸಿ. ಪಾಟೀಲ, ಎಂ.ಆರ್. ಪಾಟೀಲ, ಮಹೇಶ ಟೆಂಗಿನಕಾಯಿ, ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಧಾರವಾಡ ಜಿಲ್ಲಾಧಿಕಾರಿ ಆರ್. ಸ್ನೇಹಲ್, ಸಿಐಡಿ ಡಿಐಜಿ ಭೀಮಾಶಂಕರ ಗುಳೇದ, ಹು-ಧಾ ಪೊಲೀಸ್ ಕಮಿಷನ‌ರ್ ಭೂಷಣ ಬೋರಸೆ ಹಾಗೂ ಧಾರವಾಡ ಜಿಲ್ಲಾ ಎಸ್ಪಿ ಗುಂಜನ್ ಆರ್ಯ ಉಪಸ್ಥಿತರಿದ್ದರು.