SK Home Ad
Home ಸುದ್ದಿ ರಾಜ್ಯ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ವೈಭವ; ಭಕ್ತಿಯಲ್ಲಿ ಮಿಂದೆದ್ದ ಜನರು

ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ವೈಭವ; ಭಕ್ತಿಯಲ್ಲಿ ಮಿಂದೆದ್ದ ಜನರು

0
47

ಮಂಡ್ಯ (ಶ್ರೀರಂಗಪಟ್ಟಣ): ರಾಜ್ಯಕ್ಕೆ ಎದುರಾಗಿರುವ ಬರ ಸಮಸ್ಯೆ ನಿವಾರಣೆಯಾಗಲಿ, ರಾಜ್ಯ ಸಮೃದ್ಧವಾಗಲಿ ಹಾಗೂ ರಾಜ್ಯದ ಜನರಿಗೆ ಒಳಿತಾಗಲಿ ಎಂದು ಸಿಎಂ ಡಿ.ಕೆ. ಶಿವಕುಮಾರ್ ಕರ್ನಾಟಕದ ಜೀವನದಿ ಕಾವೇರಿ ಮಾತೆಯಲ್ಲಿ ಪ್ರಾರ್ಥಿಸಿದರು.

ಕೆಆರ್‌ಎಸ್ ಆಣೆಕಟ್ಟಿನ ಬೃಂದಾವನ ಉದ್ಯಾನದಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸುವ ಮೂಲಕ ಸಿಎಂ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿದರು.

ಕೆಆರ್‌ಎಸ್ ಆಣೆಕಟ್ಟಿನ ಕಾವೇರಿ ಮಾತೆ ಪ್ರತಿಮೆಗೆ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದ ಅವರು, ನಂತರ ರಾಜ್ಯದ ವಿವಿಧ ಭಾಗಗಳ ಕಲಾ ತಂಡಗಳ ಪ್ರದರ್ಶನವನ್ನು ವೀಕ್ಷಣೆ ಮಾಡಿದರು.

ಧಾರ್ಮಿಕ ದತ್ತಿ ಇಲಾಖೆಯ ಸ್ಥಳೀಯ 13 ವೈದಿಕರ ತಂಡವು ದಕ್ಷಿಣ ಭಾರತದ ಶೈಲಿಯಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿತು. ಮೊದಲು ವಾತಾಪಿ ಗಣಪತಿಂ ಭಜೆ ಮಂಗಳವಾದ್ಯದಿಂದ ಪೂಜೆ ಪ್ರಾರಂಭವಾಗಿ, ಕಾವೇರಿ ಪ್ರಾರ್ಥನೆ, ಗಣಪತಿ ಪ್ರಾರ್ಥನೆ, ಗುರು ಪ್ರಾರ್ಥನೆ, ಸಂಕಲ್ಪ ನೆರವೇರಿಸಲಾಯಿತು.

ನಂತರ ಕಾವೇರಿ ಸ್ತೊತ್ರದ ಮೂಲಕ ತೀರ್ಥ ಪೂಜೆ ಮಾಡಿ ಬಾಗಿನ ಅರ್ಪಣೆ ಮಾಡಲಾಯಿತು. ಬ್ರಹ್ಮ, ವಿಷ್ಣು, ಮಹೇಶ್ವರರ ಪ್ರಾರ್ಥನೆ, ಚಾಮರ ಸೇವೆ ಬಳಿಕ, ಮೂರು ದಿಕ್ಕಿಗೂ ಶಂಖನಾದ, ಧೂಪದ ಆರತಿ ಹಾಗೂ ಮಂತ್ರ ಪುಷ್ಪ ಪಠಣ ಮಾಡಲಾಯಿತು. ಬಳಿಕ ಕುಂಭಾರತಿ, ನಾಗಾರತಿ, ಕಾವೇರಿ ಆರತಿಯೊಂದಿಗೆ ಪೂಜಾ ಕೈಂಕರ್ಯ ಕೈಗೊಳ್ಳಲಾಯಿತು. ಶಂಖನಾದ, ಮಂತ್ರ ಘೋಷಗಳ ಮೂಲಕ ಕಾವೇರಿ ತಾಯಿಗೆ ವಿವಿಧ ಬಗೆಯ ಆರತಿ ಬೆಳಗಿದ ವರ್ಣರಂಜಿತ ಈ ದೃಶ್ಯವನ್ನು ಕಂಡು ನೆರೆದಿದ್ದ ಜನ ಭಕ್ತಿ ಪರವಶರಾದರು.

ನಂತರ ವಾರಣಾಸಿಯ ಪುರೋಹಿತರಾದ ಓಂ ಮಿಶ್ರಾ ಅವರ 15 ಸದಸ್ಯರ ತಂಡವು ಗಂಗಾರತಿ ಮಾದರಿಯಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿತು. ಭಕ್ತಿಗೀತೆಗಳ ಮಧ್ಯೆ ಧೂಪ ಆರತಿ, ಪಂಚಪ್ರದೀಪ ಆರತಿ, ಸರ್ಪ ಆರತಿ, ಮಯೂರ ಪಿಂಛ ಸೇವೆ, ವಿಂ ಜಾಮರ ಸೇವೆ ಬಳಿಕ ಶಂಖನಾದ ಮೊಳಗಿಸಿದರು. ಈ ಕಾವೇರಿ ಆರತಿ ಕಾರ್ಯಕ್ರಮವು ನೆರೆದಿದ್ದ ಜನರಿಗೆ ಭಕ್ತಿಯ ಲೋಕದ ದರ್ಶನ ಮಾಡಿಸಿತು.