ನವದೆಹಲಿ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಎಲ್. ಮುರುಗನ್ ಅವರು ಸಚಿವ ಸ್ಥಾನಕ್ಕೆ ಮತ್ತು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. 2026ರ ಅಕ್ಟೋಬರ್ 13ರಂದು ಈ ಬೆಳವಣಿಗೆ ನಡೆದಿದ್ದು, ತಮಿಳುನಾಡಿನಲ್ಲಿ ಬಿಜೆಪಿಯನ್ನು ಬಲಪಡಿಸಲು ಪೂರ್ಣ ಸಮಯ ಮೀಸಲಿಡುವ ಉದ್ದೇಶವನ್ನು ಅವರು ತಿಳಿಸಿದ್ದಾರೆ.
ಮುರುಗನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಕೇಂದ್ರ ಸಚಿವ ಸಂಪುಟದ ಜವಾಬ್ದಾರಿಯಿಂದ ಬಿಡುಗಡೆ ಮಾಡುವಂತೆ ಹಾಗೂ ರಾಜ್ಯಸಭಾ ಸದಸ್ಯತ್ವ ತ್ಯಜಿಸಲು ಅನುಮತಿ ನೀಡುವಂತೆ ಕೋರಿದ್ದಾರೆ. ತಮಿಳುನಾಡಿನಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವುದು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ತಳಮಟ್ಟದಲ್ಲಿ ಕೆಲಸ ಮಾಡುವುದು ತಮ್ಮ ಮುಂದಿನ ಗುರಿ ಎಂದು ಅವರು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಪಕ್ಷ ಸಂಘಟನೆಗೆ ಆದ್ಯತೆ : ಋಾಜೀನಾಮೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಿರ್ಧಾರವನ್ನು ಹಂಚಿಕೊಂಡಿರುವ ಮುರುಗನ್, ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ದೇಶಕ್ಕೆ ಹಾಗೂ ತಮಿಳುನಾಡಿಗೆ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ತಮ್ಮ ಜೀವನದ ದೊಡ್ಡ ಗೌರವ ಎಂದು ಹೇಳಿದ್ದಾರೆ. ಇದೀಗ ರಾಜ್ಯದಲ್ಲಿ ಬಿಜೆಪಿಯನ್ನು ಬಲಪಡಿಸಲು ಹಾಗೂ 2029ರ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಸಂಪೂರ್ಣ ಸಮಯ ನೀಡಲು ಬಯಸಿರುವುದಾಗಿ ತಿಳಿಸಿದ್ದಾರೆ.
ದಿನಗೂಲಿ ಕಾರ್ಮಿಕರ ಕುಟುಂಬದಿಂದ ಬಂದಿರುವ ತಾವು ಕೇಂದ್ರ ಸಚಿವ ಸಂಪುಟದಲ್ಲಿ ಸೇವೆ ಸಲ್ಲಿಸುವ ಅವಕಾಶ ಪಡೆದಿರುವುದಕ್ಕೆ ಕೃತಜ್ಞತೆ ಸಲ್ಲಿಸಿರುವ ಅವರು, ಇನ್ನು ಮುಂದೆ ಪಕ್ಷದ ಕಾರ್ಯಕರ್ತರೊಂದಿಗೆ ನೇರವಾಗಿ ಕೆಲಸ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಎಲ್. ಮುರುಗನ್ ಅವರ ರಾಜಕೀಯ ಹಿನ್ನೆಲೆ : ತಮಿಳುನಾಡಿನ ಬಿಜೆಪಿ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಮುರುಗನ್ ಅವರು 2021ರಲ್ಲಿ ಮೊದಲ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 2024ರಲ್ಲಿ ಎರಡನೇ ಬಾರಿಗೆ ರಾಜ್ಯಸಭಾ ಸದಸ್ಯರಾದ ಅವರು, ಕೇಂದ್ರದಲ್ಲಿ ಮಾಹಿತಿ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಅವರ ಈ ನಿರ್ಧಾರವು ಕೇಂದ್ರ ಸಚಿವ ಸಂಪುಟದ ಜವಾಬ್ದಾರಿಗಳಿಂದ ದೂರ ಸರಿದು ತಮಿಳುನಾಡಿನ ಪಕ್ಷ ಸಂಘಟನೆಗೆ ಹೆಚ್ಚಿನ ಗಮನ ನೀಡುವ ಹೆಜ್ಜೆಯಾಗಿದೆ.




















