SK Home Ad
Home ಸುದ್ದಿ ರಾಜ್ಯ ‘ಮತ ಕಳ್ಳತನದ ತನಿಖೆ ನಿಲ್ಲಲ್ಲ’: ಬಿಜೆಪಿಗೆ ಡಿಕೆಶಿ ಎಚ್ಚರಿಕೆ

‘ಮತ ಕಳ್ಳತನದ ತನಿಖೆ ನಿಲ್ಲಲ್ಲ’: ಬಿಜೆಪಿಗೆ ಡಿಕೆಶಿ ಎಚ್ಚರಿಕೆ

0
48

ದೆಹಲಿ: “ಮತ ಕಳ್ಳತನದ ಬಗ್ಗೆ ಕರ್ನಾಟಕದಲ್ಲಿ ನಾವು ತನಿಖೆ ಮುಂದುವರೆಸುತ್ತೇವೆ. ಸಂವಿಧಾನ ಉಳಿಸಲು, ಪ್ರಜಾಪ್ರಭುತ್ವ ರಕ್ಷಿಸಲು ನಾವು ಹೋರಾಡುತ್ತೇವೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.

ದೆಹಲಿಯ ಕರ್ನಾಟಕ ಭವನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕರ್ನಾಟಕದಲ್ಲಿ ಬಿಜೆಪಿಯವರು ತಪ್ಪು ಮಾಡಿಲ್ಲ ಎಂದಾದರೆ ಯಾಕೆ ಪ್ರಕರಣ ದಾಖಲಿಸಬೇಡಿ ಎನ್ನುತ್ತಿದ್ದಾರೆ? ಯಾಕೆ ರಾಜ್ಯಪಾಲರ ಬಳಿಗೆ ಹೋಗಿದ್ದಾರೆ? ಪ್ರತಿಭಟನೆ ಮಾಡುತ್ತೇವೆ ಎನ್ನುತ್ತಿದ್ದಾರೆ? ಅರ್ಜಿ ನಮೂನೆ 7ಕ್ಕೆ ಅಮಾಯಕ ಕಾರ್ಯಕರ್ತರಿಂದ ಸಹಿ ಹಾಕಿಸಿದ್ದಾರೆ. ಮುಖಂಡರುಗಳೇ ಸಹಿ ಹಾಕಬೇಕಿತ್ತು” ಎಂದರು.

“ಅನೇಕ ಕಡೆ ಅರ್ಜಿ ನಮೂನೆ 7ಕ್ಕೆ ತಪ್ಪಾಗಿ ಸಹಿ ಮಾಡಿದ್ದೇವೆ ಎಂದು ಅರ್ಜಿ ವಾಪಸ್ ಪಡೆದಿದ್ದಾರೆ. ಅನೇಕ ಕಡೆ ಪ್ರಕರಣಗಳು ದಾಖಲಾಗಿವೆ, ಬಿಎಲ್‌ಓಗಳೇ ದೂರು ನೀಡಿದ್ದಾರೆ. ಕಾರ್ಯಕರ್ತರಿಂದ ಮಾಡಬಾರದ್ದನೆಲ್ಲಾ ಮಾಡಿಸಿಕೊಂಡು ಅರಾಜಕತೆ ಸೃಷ್ಟಿ ಮಾಡಿರುವವರು ಬಿಜೆಪಿಯವರು. ಅವರು ಮಾಡಿರುವ ತಪ್ಪನ್ನು ಮುಚ್ಚಿಕೊಳ್ಳಲೇಬೇಕಲ್ಲವೇ? ಮತದಾನದ ಹಕ್ಕನ್ನು ಕಿತ್ತು ಹಾಕಲು ಹೊರಟವರು ಬಿಜೆಪಿಯವರು. ಅಪರಾಧ ಮಾಡಿ ಬಡವರ ವಿರುದ್ಧ ಕೆಲಸ ಮಾಡಿದ್ದಾರೆ” ಎಂದು ಕಿಡಿಕಾರಿದರು.

“ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರ ಬಳಿ ನಾನು ಮನವಿ ಮಾಡುತ್ತೇನೆ. ಎಚ್ಚರಿಕೆಯಿಂದಿರಿ, ಮತಗಳು ಕಳೆದುಕೊಂಡಿರುವವರು ಬಿಎಲ್ಎ, ಬಿಎಲ್ಓಗಳಿಗೆ ಮನವರಿಕೆ ಮಾಡಿ. ಜನರ ಮತದಾನದ ಹಕ್ಕನ್ನು ಉಳಿಸಬೇಕು” ಎಂದರು.

“ಇಂಡಿಯಾ ಒಕ್ಕೂಟದ ಪಕ್ಷಗಳ ‌ನಾಯಕರೆಲ್ಲರೂ ಒಟ್ಟಿಗೆ ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇವೆ. ನಮಗೆ ನ್ಯಾಯ ದೊರಕುತ್ತದೆ ಎನ್ನುವ ವಿಶ್ವಾಸವಿದೆ. ನಮ್ಮ ಹೋರಾಟಕ್ಕೆ ಮಣಿದು ಅಲ್ಪಸಂಖ್ಯಾತರ, ಹಿಂದುಳಿದವರ, ಪರಿಶಿಷ್ಟರ ಮತಗಳನ್ನು ತೆಗೆದು ಹಾಕಿರುವ ಬಗ್ಗೆ ವಿಶೇಷ ಅಭಿಯಾನ ನಡೆಸಿ ಎಂದು ಈಗಾಗಲೇ ಚುನಾವಣಾ ಆಯೋಗ ತಿಳಿಸಿತ್ತು” ಎಂದರು.

“ಮತಗಳ್ಳತನ ವಿರೋಧಿಸಿ ದೆಹಲಿಯಲ್ಲಿ ನಡೆದ ಪ್ರತಿಭಟನೆಗೆ ಲಕ್ಷಾಂತರ ಜನ ಸೇರಿದ್ದನ್ನು ಮಾಧ್ಯಮಗಳೇ ಬಿತ್ತರಿಸಿವೆ. ಲೆಕ್ಕಕ್ಕೆ ಸಿಗದಷ್ಟು ಜನ ಸೇರಿದ್ದರು. ನವರಾತ್ರಿ ಸಮಯದಲ್ಲಿ ಕರ್ನಾಟಕದಿಂದ ಸಚಿವರು, ನೂರಕ್ಕೂ ಹೆಚ್ಚು ಶಾಸಕರು, 300ಕ್ಕೂ ಹೆಚ್ಚು ಪದಾಧಿಕಾರಿಗಳು ಭಾಗವಹಿಸಿದ್ದರು” ಎಂದರು.

ಅಡ್ಡ ಮತದಾನ ಮಾಡಿದ ಶಾಸಕರ ಹೆಸರು ಹೇಳಲಿ: ಸಾಕಷ್ಟು ಶಾಸಕರು ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆ ಎನ್ನುವ ವಿಜಯೇಂದ್ರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, “ಮೊದಲು ಅವರನ್ನು ಅದಷ್ಟು ಬೇಗ ಕರೆಸಿಕೊಳ್ಳಲಿ. ತಡಮಾಡುವುದು ಬೇಡ. ವಿಜಯೇಂದ್ರ ಹಾಗೂ ಕುಮಾರಸ್ವಾಮಿ ಅವರಿಗೆ ಅಡ್ಡ ಮತದಾನ ಮಾಡಿದ ತಮ್ಮ 12 ಜನ ಶಾಸಕರು ಯಾರು ಎಂದು ಹೇಳಲು ಆಗಲಿಲ್ಲ. ಅವರು ಎನ್‌ಡಿಎ ಸರಿಯಿಲ್ಲ ಎಂದು ನಮಗೆ ಮತ ಹಾಕಿದ್ದಾರೆ” ಎಂದು ಲೇವಡಿ ಮಾಡಿದರು.