SK Home Ad
Home ಸುದ್ದಿ ದೇಶ “ನನ್ನನ್ನು ಆಂಧ್ರದ ಮಗನಾಗಿ ಪರಿಗಣಿಸಿ” : ಅನಂತ್ ಅಂಬಾನಿ ಮಾತು ವೈರಲ್

“ನನ್ನನ್ನು ಆಂಧ್ರದ ಮಗನಾಗಿ ಪರಿಗಣಿಸಿ” : ಅನಂತ್ ಅಂಬಾನಿ ಮಾತು ವೈರಲ್

0
39
ತೆಲುಗಿನಲ್ಲಿ ಭಾಷಣ; “ಆಂಧ್ರದ ಅಭಿವೃದ್ಧಿಗೆ ಏನು ಬೇಕಾದರೂ ಮಾಡಲು ಸಿದ್ಧ ಎಂದ ಅನಂತ್ ಅಂಬಾನಿ

ಮದನಪಲ್ಲೆ: ರಾಯಲಸೀಮೆಯನ್ನು ಜಾಗತಿಕ ತೋಟಗಾರಿಕಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಶುಕ್ರವಾರ ಚಾಲನೆ ದೊರೆತಿದ್ದು, ಈ ಸಂದರ್ಭದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ತೆಲುಗಿನಲ್ಲಿ ಮಾತನಾಡಿ ಗಮನ ಸೆಳೆದಿದ್ದಾರೆ. ಆಂಧ್ರಪ್ರದೇಶದ ಅಭಿವೃದ್ಧಿಗೆ ತಮ್ಮ ಸಂಸ್ಥೆಯ ಸಂಪೂರ್ಣ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದ್ದು, ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರನ್ನು ಉದ್ದೇಶಿಸಿ ತಮ್ಮನ್ನು ಆಂಧ್ರದ ಮಗನಾಗಿ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.

ಮದನಪಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹಾಗೂ ಅನಂತ್ ಅಂಬಾನಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸುಮಾರು ₹1 ಲಕ್ಷ ಕೋಟಿ ಹೂಡಿಕೆಯ ಗ್ಲೋಬಲ್ ಹಾರ್ಟಿಕಲ್ಚರ್ ಹಬ್ ಹಾಗೂ ರಿಲಯನ್ಸ್ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುತ್ತಿರುವ ಇಂಡಿಯನ್ ಸ್ಕೂಲ್ ಆಫ್ ಅಗ್ರಿಕಲ್ಚರ್ (ISA) ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿತು.

ಅನಂತ್ ಅಂಬಾನಿ ತಮ್ಮ ಭಾಷಣದಲ್ಲಿ ರೈತರ ಸಮಸ್ಯೆಗಳಿಗೆ ತಂತ್ರಜ್ಞಾನ ಮತ್ತು ನವೀನ ಕೃಷಿ ವಿಧಾನಗಳ ಮೂಲಕ ಪರಿಹಾರ ಕಂಡುಕೊಳ್ಳುವ ಅಗತ್ಯವನ್ನು ಒತ್ತಿಹೇಳಿದರು. ರೈತರ ಆದಾಯ ಹೆಚ್ಚಿಸುವುದು, ಕೃಷಿ ಶಿಕ್ಷಣ ಹಾಗೂ ತರಬೇತಿಯನ್ನು ಬಲಪಡಿಸುವುದು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ ಎಂದು ಅವರು ವಿವರಿಸಿದರು.

ಇಂಡಿಯನ್ ಸ್ಕೂಲ್ ಆಫ್ ಅಗ್ರಿಕಲ್ಚರ್ ಅನ್ನು ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ಮಾದರಿಯಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಶಿಕ್ಷಣ, ಸಂಶೋಧನೆ, ತಂತ್ರಜ್ಞಾನ ಹಾಗೂ ತರಬೇತಿಗೆ ಒತ್ತು ನೀಡುವ ಸಂಸ್ಥೆಯಾಗಿ ರೂಪಿಸುವ ಉದ್ದೇಶವಿದೆ. ಆಂಧ್ರಪ್ರದೇಶ ಸರ್ಕಾರ ಮತ್ತು ರಿಲಯನ್ಸ್ ನಡುವೆ ಈ ಸಂಸ್ಥೆಯ ಸ್ಥಾಪನೆ ಹಾಗೂ ನಿರ್ವಹಣೆಗೆ ಸಂಬಂಧಿಸಿದ ಒಪ್ಪಂದವೂ ನಡೆದಿದೆ.

ರಾಯಲಸೀಮೆಯ ಕೃಷಿ ಉತ್ಪನ್ನಗಳಿಗೆ ನೀರಾವರಿ, ಸಂಸ್ಕರಣೆ, ಸಂಗ್ರಹಣೆ, ಲಾಜಿಸ್ಟಿಕ್ಸ್, ಮಾರುಕಟ್ಟೆ ಸಂಪರ್ಕ ಮತ್ತು ರಫ್ತು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು ಗ್ಲೋಬಲ್ ಹಾರ್ಟಿಕಲ್ಚರ್ ಹಬ್ ಯೋಜನೆಯ ವ್ಯಾಪ್ತಿಯಲ್ಲಿದೆ. ಯೋಜನೆಯ ಒಟ್ಟು ಹೂಡಿಕೆ ಸುಮಾರು ₹1 ಲಕ್ಷ ಕೋಟಿಯಾಗಿದ್ದು, ಇದರಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯದ ಹೂಡಿಕೆ ಒಳಗೊಂಡಿದೆ ಎಂದು ವರದಿಗಳು ತಿಳಿಸಿವೆ.

ಕಾರ್ಯಕ್ರಮದಲ್ಲಿ ಅನಂತ್ ಅಂಬಾನಿ ಚಂದ್ರಬಾಬು ನಾಯ್ಡು ಅವರ ಹಿಂದಿನ ಕೃಷಿ ಮತ್ತು ಶಿಕ್ಷಣ ಸಂಬಂಧಿತ ಪ್ರಯತ್ನಗಳನ್ನು ಉಲ್ಲೇಖಿಸಿ, ರೈತರಿಗಾಗಿ ಹೊಸ ಸಂಸ್ಥೆಯ ಅಗತ್ಯವನ್ನು ವಿವರಿಸಿದರು. ರಿಲಯನ್ಸ್ ಆಂಧ್ರಪ್ರದೇಶದಲ್ಲಿ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಯ ಜೊತೆಗೆ ಕಂಪ್ರೆಸ್ಡ್ ಬಯೋಗ್ಯಾಸ್ ಯೋಜನೆಗಳಿಗೂ ಮುಂದಾಗುತ್ತಿದೆ ಎಂದು ಅವರು ತಿಳಿಸಿದರು.

ಅನಂತ್ ಅಂಬಾನಿ ತೆಲುಗಿನಲ್ಲಿ ಮಾತನಾಡಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿವೆ. ವಿಶೇಷವಾಗಿ ಆಂಧ್ರಪ್ರದೇಶದ ಅಭಿವೃದ್ಧಿಯಲ್ಲಿ ತಮ್ಮ ಪಾತ್ರದ ಕುರಿತು ಅವರು ವ್ಯಕ್ತಪಡಿಸಿದ ಮಾತುಗಳು ಹಾಗೂ ನಾಯ್ಡು ಅವರನ್ನು ಉದ್ದೇಶಿಸಿ ಮಾಡಿದ ಮನವಿಯ ವಿಡಿಯೊ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ನಾಯ್ಡು ಅವರು ಅನಂತ್ ಅಂಬಾನಿ ಅವರನ್ನು ಆಂಧ್ರಪ್ರದೇಶದೊಂದಿಗೆ ಆತ್ಮೀಯವಾಗಿ ಜೋಡಿಸಿಕೊಂಡು ಮಾತನಾಡಿದ್ದಾರೆ.