SK Home Ad
Home ಸುದ್ದಿ ದೇಶ ಆ ಘೋರ ಕ್ಷಣದಲ್ಲೂ ನಾನು ಹನುಮಾನ್ ಚಾಲೀಸಾ ಪಠಿಸುತ್ತಿದ್ದೆ: ಮೋದಿ ಜೊತೆ ಪೈಲಟ್ ಸ್ಮಿತ್ ಭಾವುಕ...

ಆ ಘೋರ ಕ್ಷಣದಲ್ಲೂ ನಾನು ಹನುಮಾನ್ ಚಾಲೀಸಾ ಪಠಿಸುತ್ತಿದ್ದೆ: ಮೋದಿ ಜೊತೆ ಪೈಲಟ್ ಸ್ಮಿತ್ ಭಾವುಕ ಮಾತು!

0
15

ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸಹ ಪೈಲಟ್ ನಡೆಸಿದ ಭೀಕರ ಚಾಕು ಇರಿತದ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಸಾಹಸಕ್ಕೆ ಇಡೀ ಜಗತ್ತೇ ಸಲಾಂ ಹೇಳುತ್ತಿದೆ. ಸೌದಿ ಅರೇಬಿಯಾದ ತಬೂಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾಪ್ಟನ್ ಸ್ಮಿತ್ ಜೊತೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾಲ್ ಮೂಲಕ ಮಾತನಾಡಿ, ಅವರ ಅಪ್ರತಿಮ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ಕೊಂಡಾಡಿದರು.

“ನೀವು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೂ ನಿಮ್ಮ ಪ್ರಾಣದ ಹಂಗು ತೊರೆದು ನೂರಾರು ಪ್ರಯಾಣಿಕರನ್ನು ರಕ್ಷಿಸಿದ್ದೀರಿ. ನಿಮ್ಮ ಸಾಹಸ 140 ಕೋಟಿ ಭಾರತೀಯರ ಗೌರವವನ್ನು ಹೆಚ್ಚಿಸಿದೆ” ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು.

ಈ ವೇಳೆ ಆಸ್ಪತ್ರೆಯ ಹಾಸಿಗೆಯಲ್ಲೇ ಭಾವುಕರಾಗಿ ಕಣ್ಣೀರಿಟ್ಟ ಸ್ಮಿತ್, “ನನಗೆ ತೀವ್ರ ಗಾಯಗಳಾಗಿ ರಕ್ತದ ಮಡುವಿನಲ್ಲಿ ಕೆಳಗೆ ಬಿದ್ದಿದ್ದೆ. ಆದರೆ 17 ವರ್ಷಗಳ ಹಾರಾಟದ ಅನುಭವದಿಂದ ಕಣ್ಣು ಮುಚ್ಚಿದರೂ ವಿಮಾನ ಕೆಳಮುಖವಾಗಿ ಧುಮುಕುತ್ತಿರುವುದು ನನಗೆ ಅರ್ಥವಾಯಿತು. ಸುಮ್ಮನಿದ್ದರೆ ಎಲ್ಲರೂ ಸಾಯುತ್ತಾರೆ ಅನ್ನಿಸಿತು. ಹಾಗಾಗಿ ಕೊನೆಯ ಕ್ಷಣದಲ್ಲಿ ಬಾಗಿಲು ತೆರೆದೆ” ಎಂದು ಭಯಾನಕ ಕ್ಷಣಗಳನ್ನು ವಿವರಿಸಿದರು.

ಬಾಗಿಲು ತೆರೆದ ತಕ್ಷಣ ಪ್ರಯಾಣಿಕರು ಒಳನುಗ್ಗಿ ದಾಳಿಕೋರನನ್ನು ಹಿಡಿದಿದ್ದರಿಂದ ಸಂಭವನೀಯ ಭಾರಿ ದುರಂತ ತಪ್ಪಿತು. ಇದೇ ವೇಳೆ ಮಾತನಾಡಿದ ಸ್ಮಿತ್, “ನಾನು ತೀವ್ರ ನೋವಿನಲ್ಲಿದ್ದಾಗ ಮತ್ತು ಆತಂಕವಾದಾಗಲೆಲ್ಲ ಹನುಮಾನ್ ಚಾಲೀಸಾ ಜಪಿಸುತ್ತೇನೆ. ಆ ಘೋರ ಕ್ಷಣದಲ್ಲೂ ನಾನು ಹನುಮಾನ್ ಚಾಲೀಸಾವನ್ನೇ ಪಠಿಸುತ್ತಿದ್ದೆ, ದೇವರೇ ನನ್ನನ್ನು ಹಾಗೂ ಪ್ರಯಾಣಿಕರನ್ನು ಕಾಪಾಡಿದ್ದಾನೆ” ಎಂದರು. ಗಾಯದ ನಡುವೆಯೂ ಅದಮ್ಯ ಸಾಹಸ ತೋರಿ 170ಕ್ಕೂ ಹೆಚ್ಚು ಜನರ ಜೀವ ಉಳಿಸಿದ ಸ್ಮಿತ್ ಅವರ ಕರ್ತವ್ಯನಿಷ್ಠೆಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.