SK Home Ad
Home ಸುದ್ದಿ ದೇಶ ಏಷ್ಯಾಡ್‌ ಅಖಾಡಕ್ಕೆ ಭಾರತದ ಕ್ರೀಡಾಪಟುಗಳು; ‘ಇದು ನಿಮ್ಮ ಕ್ಷಣ’ ಎಂದ ನೀತಾ ಅಂಬಾನಿ

ಏಷ್ಯಾಡ್‌ ಅಖಾಡಕ್ಕೆ ಭಾರತದ ಕ್ರೀಡಾಪಟುಗಳು; ‘ಇದು ನಿಮ್ಮ ಕ್ಷಣ’ ಎಂದ ನೀತಾ ಅಂಬಾನಿ

0
13

ಮುಂಬೈ: ಜಪಾನ್‌ ಐಚಿ-ನಗೋಯಾದಲ್ಲಿ ಶನಿವಾರ ಆರಂಭಗೊಂಡಿರುವ 20ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡ ಸ್ಪರ್ಧಿಸುತ್ತಿರುವ ಸಮಯದಲ್ಲಿ ರಿಲಯನ್ಸ್ ಫೌಂಡೇಶನ್‌ನ ಕ್ರೀಡಾ ಅಭಿಯಾನವು ʻಅವಕಾಶದ ಶಕ್ತಿʼ ಯನ್ನು ಮತ್ತು ʻಅಂತಿಮ ಗೆಲುವಿನ ಗೆರೆʼ ಯನ್ನು ತಲುಪುವ ಕನಸು ಕಾಣುವ ಮುನ್ನ, ‘ಆರಂಭಿಕ ಗೆರೆಯನ್ನು ತಲುಪುವ ಅವಕಾಶ ಪ್ರತಿ ಮಗುವಿಗೂ ಸಿಗಬೇಕು’ ಎಂಬ ನಂಬಿಕೆಯನ್ನು ಎತ್ತಿಹಿಡಿಯುತ್ತದೆ. ಇದೇ ವೇಳೆ ನೀತಾ ಅಂಬಾನಿ ಅವರು, ‘ಇದು ನಿಮ್ಮ ಕ್ಷಣ, ಇದನ್ನು ಸದುಪಯೋಗಪಡಿಸಿಕೊಳ್ಳಿ’ ಎಂದು ಏಷ್ಯಾಡ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತದ ಕ್ರೀಡಾಪಟುಗಳಿಗೆ ವಿಶೇಷ ಸಂದೇಶವನ್ನು ನೀಡಿದ್ದಾರೆ.

ಒಂದೇ ಒಂದು ಅವಕಾಶವೂ ಕ್ರೀಡಾಪಟುವೊಬ್ಬನ ಜೀವನದ ದಿಕ್ಕನ್ನೇ ಹೇಗೆ ಬದಲಿಸಬಲ್ಲದು ಎಂಬುದನ್ನು ರಿಲಯನ್ಸ್ ಫೌಂಡೇಶನ್‌ನ ಅಭಿಯಾನವು ಎತ್ತಿ ತೋರಿಸುತ್ತದೆ. ಜೊತೆಗೆ, ಅಂತಹ ಅವಕಾಶವನ್ನು ಪಡೆದ ಕ್ರೀಡಾಪಟುಗಳು ಮುಂದೆ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಬಲ್ಲರು ಮತ್ತು ದೇಶಕ್ಕೆ ಹೆಮ್ಮೆ ತರಬಲ್ಲರು ಎಂಬುದನ್ನೂ ಇದು ಪ್ರತಿಬಿಂಬಿಸುತ್ತದೆ.

“ಭಾರತ ತಂಡದ ನನ್ನ ಪ್ರಿಯ ಕ್ರೀಡಾಪಟುಗಳೇ, ಏಷ್ಯಾದ ಅತಿದೊಡ್ಡ ಕ್ರೀಡಾ ವೇದಿಕೆಗೆ ನೀವು ಕಾಲಿಡುತ್ತಿರುವಾಗ, ಇಡೀ ದೇಶದ ಭರವಸೆಗಳು ಮತ್ತು ಶುಭ ಹಾರೈಕೆಗಳು ನಿಮ್ಮೊಂದಿಗೆ ಇವೆ ಎಂಬುದನ್ನು ನೆನಪಿಡಿ. ಧೈರ್ಯ ಮತ್ತು ಸಂತೋಷದಿಂದ ಸ್ಪರ್ಧಿಸಿ, ಏಕೆಂದರೆ ನೀವು ಮಾಡುವ ಸಾಧನೆಯು ಕೇವಲ ಪದಕ ಗೆಲುವನ್ನೂ ಮೀರಿದ ಮಹತ್ವವನ್ನು ಹೊಂದಿರಬಲ್ಲದು. ಈ ಒಂದು ಅವಕಾಶವು ಜೀವನವನ್ನೇ ಪರಿವರ್ತಿಸಬಲ್ಲದು. ನಿಮ್ಮ ಒಂದು ಪ್ರದರ್ಶನವು ಬೇರೆಯವರ ಕನಸಿಗೆ ಸ್ಫೂರ್ತಿಯಾಗಬಲ್ಲದು. ಒಬ್ಬ ಕ್ರೀಡಾಪಟು ಇಡೀ ಪೀಳಿಗೆಗೆ ಸ್ಫೂರ್ತಿಯಾಗಬಲ್ಲರು. ಇದು ನಿಮ್ಮ ಕ್ಷಣ. ಇದನ್ನು ಸಾರ್ಥಕಪಡಿಸಿಕೊಳ್ಳಿ. ಇಡೀ ದೇಶವೇ ನಿಮ್ಮನ್ನು ಹುರಿದುಂಬಿಸುತ್ತಿದೆ” ಎಂದು ನೀತಾ ಅಂಬಾನಿ ಭಾರತದ ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿ ಶುಭ ಹಾರೈಸಿದ್ದಾರೆ.

ರಿಲಯನ್ಸ್ ಫೌಂಡೇಶನ್‌ನಿಂದ ಬೆಂಬಲ ಪಡೆಯುತ್ತಿರುವ ಒಟ್ಟು 48 ಕ್ರೀಡಾಪಟುಗಳು ಈ ಬಾರಿ ಏಷ್ಯನ್ ಗೇಮ್ಸ್‌ನಲ್ಲಿ 9 ಭಿನ್ನ ಕ್ರೀಡೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಇವರಲ್ಲಿ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್, ಅಥ್ಲೀಟ್‌ಗಳಾದ ತೇಜಸ್ವಿನ್ ಶಂಕರ್, ಶ್ರೀಶಂಕರ್ ಮುರಳಿ, ಬ್ಯಾಡ್ಮಿಂಟನ್ ಆಟಗಾರರಾದ ಸಾತ್ವಿಕ್‌ ಸಾಯಿರಾಜ್ ರಂಕಿರೆಡ್ಡಿ ಮತ್ತು ಕನ್ನಡಿಗ ಚಿರಾಗ್ ಶೆಟ್ಟಿ ಅವರಂತಹ ಭಾರತದ ಪ್ರಮುಖ ಕ್ರೀಡಾ ತಾರೆಯರೂ ಸೇರಿದ್ದಾರೆ. ರಿಲಯನ್ಸ್ ಫೌಂಡೇಶನ್‌ ಬೆಂಬಲಿತ ಶೂಟರ್ ಇಲವೆನಿಲ್ ವಲರಿವನ್ ಒಳಗೊಂಡ ಭಾರತೀಯ ಶೂಟಿಂಗ್ ತಂಡ ಮಹಿಳೆಯರ 10 ಮೀ. ಏರ್ ರೈಫಲ್ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸುವ ಮೂಲಕ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆಗೆ ಭಾನುವಾರ ಚಾಲನೆ ನೀಡಿದೆ.

ರಿಲಯನ್ಸ್ ಫೌಂಡೇಶನ್ ಭಾರತದ ಕ್ರೀಡಾ ತಂಡಕ್ಕೆ ಪ್ರಾಯೋಜಕ ಕೂಡ ಆಗಿದ್ದು, ಕ್ರೀಡಾಪಟುಗಳಿಗೆ ಮೈದಾನದ ಒಳಗೆ ಮತ್ತು ಹೊರಗೆ ಬೆಂಬಲವನ್ನು ನೀಡುತ್ತಿದೆ. ಸರ್ ಎಚ್.ಎನ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕ್ರೀಡಾ ವೈದ್ಯಕೀಯ ತಂಡವು (ಫಿಸಿಯೋಥೆರಪಿಸ್ಟ್ ಸೇರಿ) ಭಾರತೀಯ ಕ್ರೀಡಾ ತಂಡದ ಭಾಗವಾಗಿದ್ದು, ವೈದ್ಯಕೀಯ ಮತ್ತು ಫಿಸಿಯೋಥೆರಪಿ ಸೇವೆಯನ್ನು ಒದಗಿಸುತ್ತಿದೆ.