Bigg Boss: ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ ಮನೆಯಲ್ಲಿ ವಾರದ ದಿನಗಳಲ್ಲಿ ಮಿತಿಮೀರಿದ ಗದ್ದಲ ಹಾಗೂ ಅಸಭ್ಯ ವರ್ತನೆ ತೋರಿದ ಸ್ಪರ್ಧಿಗಳಿಗೆ ನಿರೂಪಕ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬೆವರಿಳಿಸಿದ್ದಾರೆ. ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯ ಪ್ರೋಮೋ ಬಿಡುಗಡೆಯಾಗಿದ್ದು, ಶೋನ ಘನತೆ ಹಾಳುಮಾಡುತ್ತಿರುವ ಸ್ಪರ್ಧಿಗಳಿಗೆ ಸುದೀಪ್ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕಳೆದ ವಾರ ದೊಡ್ಮನೆಯೊಳಗೆ ಕ್ಷುಲ್ಲಕ ವಿಚಾರಗಳಿಗೂ ಸ್ಪರ್ಧಿಗಳು ಅತಿಯಾಗಿ ಜಗಳವಾಡಿಕೊಂಡಿದ್ದರು. ಆಟದ ವೇಳೆ ಸೌಂದರ್ಯ ಶೆಟ್ಟಿ ಮತ್ತು ಮಾಡರ್ನ್ ಮಹಾಕವಿ ಮಂಜ ನಡುವೆ ನಡೆದ ಕಿತ್ತಾಟ, ಉಸ್ತುವಾರಿಗಳ ವಿರುದ್ಧ ಮಂಜ ಬಳಸಿದ ಆಕ್ಷೇಪಾರ್ಹ ಪದಗಳು, ಕಿರಣ್ ಶಾಸ್ತ್ರಿ ಅವರ ಸಿಡುಕುತನ ಹಾಗೂ ಕೇವಲ ಮೊಟ್ಟೆಯ ವಿಚಾರಕ್ಕೆ ಅವಿನಾಶ್ ಮನೆಯಿಂದ ಹೊರಹೋಗುವುದಾಗಿ ನಡೆಸಿದ ರಂಪಾಟ ವೀಕ್ಷಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಎಲ್ಲಾ ಅವಾಂತರಗಳನ್ನು ಪ್ರಸ್ತಾಪಿಸಿದ ಸುದೀಪ್, ಸ್ಪರ್ಧಿಗಳ ಕಿವಿಯನ್ನು ಹಿಂಡಿದ್ದಾರೆ.
ಮುಖ್ಯವಾಗಿ ಮಾಡರ್ನ್ ಮಹಾಕವಿ ಮಂಜನಿಗೆ ಅವರದ್ದೇ ಧಾಟಿಯಲ್ಲಿ ಟಾಂಗ್ ಕೊಟ್ಟ ಸುದೀಪ್, ‘ನೀವು ಅಣ್ಣ ಎಂದು ಕರೆಯಬೇಕಾದರೆ ತಮ್ಮನಿಗೂ ಒಂದಷ್ಟು ಬೆಲೆ ಹಾಗೂ ನಡವಳಿಕೆ ಇರಬೇಕು’ ಎಂದು ಚುರುಕು ಮುಟ್ಟಿಸಿದರು. ನಂತರ ಇಡೀ ಮನೆಯವರನ್ನು ತರಾಟೆಗೆ ತೆಗೆದುಕೊಂಡ ಅವರು, ‘ಇಷ್ಟೊಂದು ಜನ ಶೋ ನೋಡುತ್ತಿದ್ದಾರೆ ಎಂಬ ಕಾರಣಕ್ಕೆ ನೀವು ಈ ರೀತಿ ಆಡುತ್ತಿದ್ದೀರಾ? ಈ ಕೋಟ್ಯಂತರ ಪ್ರೇಕ್ಷಕರು ಕಳೆದ 12 ಸೀಸನ್‌ಗಳಿಂದ ನಾವು ಸಂಪಾದಿಸಿರುವ ಅತ್ಯಮೂಲ್ಯ ಆಸ್ತಿ. ಯಾರೋ ನಾಲ್ಕು ಜನರ ಅಶಿಸ್ತಿಗಾಗಿ ಕೋಟಿ ಕೋಟಿ ಕನ್ನಡಿಗರ ಪ್ರೀತಿಯನ್ನು ಕಳೆದುಕೊಳ್ಳಲು ನಾವ್ಯಾರೂ ಸಿದ್ಧರಿಲ್ಲ’ ಎಂದು ನೇರ ಎಚ್ಚರಿಕೆ ನೀಡಿದರು.
ಕಿಚ್ಚನ ಈ ನೇರ ನುಡಿಯ ಕ್ಲಾಸ್‌ನಿಂದಾಗಿ ಮನೆಯ ಎಲ್ಲಾ ಸದಸ್ಯರು ತಲೆತಗ್ಗಿಸಿ ನಿಲ್ಲುವಂತಾಗಿದ್ದು, ಶಿಸ್ತು ಮೀರಿದ ಸ್ಪರ್ಧಿಗಳಿಗೆ ಈ ವಾರಾಂತ್ಯದ ಪಂಚಾಯಿತಿಯಲ್ಲಿ ಮತ್ತಷ್ಟು ಬಿಸಿ ತಟ್ಟಲಿದೆಯೇ ಎಂಬ ಕುತೂಹಲ ವೀಕ್ಷಕರಲ್ಲಿ ಗರಿಗೆದರಿದೆ.





















