SK Home Ad
Home ಸುದ್ದಿ ರಾಜ್ಯ ನಾನೀಗ ಸಿಎಂ ಅಲ್ಲ, ನನ್ನ ಮಾತು ಎಷ್ಟು ನಡೆಯುತ್ತೆ ಅಂತ ನನಗೆ ಮಾತ್ರ ಗೊತ್ತು: ಸಿದ್ದರಾಮಯ್ಯ...

ನಾನೀಗ ಸಿಎಂ ಅಲ್ಲ, ನನ್ನ ಮಾತು ಎಷ್ಟು ನಡೆಯುತ್ತೆ ಅಂತ ನನಗೆ ಮಾತ್ರ ಗೊತ್ತು: ಸಿದ್ದರಾಮಯ್ಯ ಮಾರ್ಮಿಕ ಮಾತು!

0
46

ವಿಧಾನಸೌಧದ ಸಿಎಲ್‌ಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ಆಡಿರುವ ಮಾರ್ಮಿಕ ಮಾತುಗಳು ರಾಜ್ಯ ರಾಜಕೀಯ ಅಂಗಳದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ‘ನಾನೀಗ ಮುಖ್ಯಮಂತ್ರಿ ಅಲ್ಲ. ನನ್ನ ಮಾತು ಈಗಲೂ ಅಷ್ಟೇ ನಡೆಯುತ್ತೆ ಅಂತ ಬಹಳ ಜನ ಅಂದುಕೊಂಡಿದ್ದಾರೆ. ನಾನೂ ಹಾಗೆಯೇ ಅಂದುಕೊಂಡಿದ್ದೇನೆ. ಆದರೆ ಸದ್ಯ ನನ್ನ ಮಾತು ಎಷ್ಟು ನಡೆಯುತ್ತೆ, ಎಷ್ಟು ನಡೆಯಲ್ಲ ಅನ್ನೋದು ನನಗೆ ಮಾತ್ರ ಗೊತ್ತು’ ಎಂದು ಹೇಳುವ ಮೂಲಕ ಪರೋಕ್ಷವಾಗಿ ತಮ್ಮ ಬೇಸರವನ್ನು ಹೊರಹಾಕಿದ್ದಾರೆ.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಎಐಸಿಸಿ ವರಿಷ್ಠರ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದ ಬೆನ್ನಲ್ಲೇ ಸಿದ್ದರಾಮಯ್ಯ ಅವರಿಂದ ಇಂತಹ ಹೇಳಿಕೆ ಹೊರಬಿದ್ದಿರುವುದು ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಹಾಲಿ ಸರ್ಕಾರದಲ್ಲಿ ತಮ್ಮ ಸಲಹೆಗಳಿಗೆ ನಿರೀಕ್ಷಿತ ಮನ್ನಣೆ ಸಿಗುತ್ತಿಲ್ಲವೇ ಅಥವಾ ಆಡಳಿತದಲ್ಲಿ ತಮ್ಮ ಹಿಡಿತ ಕಡಿಮೆಯಾಗುತ್ತಿದೆಯೇ ಎಂಬ ಅನುಮಾನಗಳನ್ನು ಈ ಮಾತುಗಳು ಹುಟ್ಟುಹಾಕಿವೆ. ತಮ್ಮ ಪ್ರಭಾವದ ಕುರಿತು ಅವರಾಡಿದ ಈ ಮಾರ್ಮಿಕ ನುಡಿಗಳು ಆಡಳಿತಾರೂಢ ಕಾಂಗ್ರೆಸ್ ಆಂತರಿಕ ವಲಯದಲ್ಲೂ ಸಂಚಲನ ಮೂಡಿಸಿವೆ.

ಇದೇ ವೇಳೆ, ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ‘ಪ್ರಜಾಪ್ರಭುತ್ವದ ವಿರೋಧಿಗಳಿಂದ ಸಂವಿಧಾನ ಶ್ರೇಷ್ಠವಾಗಲು ಸಾಧ್ಯವಿಲ್ಲ. ಸ್ವಾತಂತ್ರ್ಯ ಬಂದು ಇಷ್ಟು ದಶಕಗಳು ಕಳೆದರೂ ಸಂವಿಧಾನದ ನೈಜ ಆಶಯಗಳು ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ. ಪ್ರಜಾಪ್ರಭುತ್ವ ಧ್ವಂಸ ಮಾಡುವ ಮನುವಾದಿಗಳ ಜೊತೆ ಕೈಜೋಡಿಸಿದರೆ ವೈಯಕ್ತಿಕವಾಗಿ ಅಧಿಕಾರ ಅಥವಾ ಸ್ಥಾನಮಾನ ಸಿಗಬಹುದೇ ವಿನಃ ಸಮಾಜದಲ್ಲಿ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ. ಸಮಾಜದಲ್ಲಿ ಇಂದಿಗೂ ಜೀವಂತವಾಗಿರುವ ಜಾತಿ ವ್ಯವಸ್ಥೆಯ ವಿರುದ್ಧ ನಾವೆಲ್ಲರೂ ಬದಲಾವಣೆಯ ದಾರಿಯಲ್ಲಿ ನಡೆಯಬೇಕು’ ಎಂದು ಕರೆ ನೀಡಿದರು.

‘ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಲು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನವೇ ಮೂಲ ಕಾರಣ. ಆದರೆ ಕೆಲವರು ಜಾತಿ ವ್ಯವಸ್ಥೆ ಬದಲಾಗಬಾರದು ಎಂದು ಹುನ್ನಾರ ನಡೆಸುತ್ತಿದ್ದಾರೆ. ನಾನು ಅಧಿಕಾರದಲ್ಲಿದ್ದಾಗ ತಳಸಮುದಾಯಗಳ ಕಲ್ಯಾಣಕ್ಕೆ ಶ್ರಮಿಸಿದ್ದೆ. ಕರ್ನಾಟಕದಲ್ಲಿ ಜಾರಿಗೆ ತಂದಂತೆ ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆಯನ್ನು ಕೇಂದ್ರ ಸರ್ಕಾರ ದೇಶಾದ್ಯಂತ ಏಕೆ ಜಾರಿಗೆ ತಂದಿಲ್ಲ? ಹಿಂದೆಲ್ಲಾ ಉತ್ಸಾಹದಿಂದ ಮೋದಿ ಮೋದಿ ಎಂದು ಕೂಗುತ್ತಿದ್ದ ಯುವಕರೆಲ್ಲಾ ಈಗ ಬೆಲೆಯೇರಿಕೆ ಹಾಗೂ ನೈಜ ಪರಿಸ್ಥಿತಿ ಕಂಡು ಸಂಪೂರ್ಣ ಸೈಲೆಂಟ್ ಆಗಿದ್ದಾರೆ’ ಎಂದು ವ್ಯಂಗ್ಯವಾಡಿದರು.