SK Home Ad
Home ನಮ್ಮ ಜಿಲ್ಲೆ ದಾವಣಗೆರೆ ರಾಜ್ಯ ರಾಜಕಾರಣಕ್ಕೆ ಸಿದ್ದೇಶ್ವರ ಸಿದ್ಧತೆ? ವಿಧಾನಸಭೆ ಚುನಾವಣಾ ಕಣಕ್ಕಿಳಿಯುವ ಸುಳಿವು

ರಾಜ್ಯ ರಾಜಕಾರಣಕ್ಕೆ ಸಿದ್ದೇಶ್ವರ ಸಿದ್ಧತೆ? ವಿಧಾನಸಭೆ ಚುನಾವಣಾ ಕಣಕ್ಕಿಳಿಯುವ ಸುಳಿವು

0
60

ರಾಜ್ಯ ರಾಜಕಾರಣಕ್ಕೆ ಸಿದ್ದೇಶ್ವರ ಸಿದ್ಧತೆ? ‘ಯಾವ ಕ್ಷೇತ್ರ ನೀಡಿದರೂ ಸ್ಪರ್ಧೆಗೆ ಸಿದ್ಧ’

ದಾವಣಗೆರೆ: ಮಾಜಿ ಕೇಂದ್ರ ಸಚಿವ ಹಾಗೂ ದಾವಣಗೆರೆ ಮಾಜಿ ಸಂಸದ ಡಾ.ಜಿ.ಎಂ. ಸಿದ್ದೇಶ್ವರ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸುವ ಮೂಲಕ ರಾಜ್ಯ ರಾಜಕಾರಣಕ್ಕೆ ಮರಳುವ ಸಾಧ್ಯತೆಯ ಸುಳಿವು ನೀಡಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಪಕ್ಷದ ವರಿಷ್ಠರು ಹಾಗೂ ರಾಜ್ಯ ನಾಯಕತ್ವ ಅವಕಾಶ ನೀಡಿದರೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧವಿರುವುದಾಗಿ ಅವರು ತಿಳಿಸಿದರು. ದಾವಣಗೆರೆ ಜಿಲ್ಲೆಯಲ್ಲಿ ಮಾತ್ರವಲ್ಲದೆ, ರಾಜ್ಯದ ಯಾವುದೇ ವಿಧಾನಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿದರೂ ಸ್ಪರ್ಧಿಸಲು ಸಿದ್ಧ ಎಂದರು.

‘ಯಾವ ಕ್ಷೇತ್ರ ನೀಡಿದರೂ ಕಣಕ್ಕಿಳಿಯುವೆ’: ಪಕ್ಷದ ನಾಯಕತ್ವ ನಿರ್ಧರಿಸಿ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶ ನೀಡಿದರೂ ಚುನಾವಣಾ ಕಣಕ್ಕಿಳಿಯುವುದಾಗಿ ಘೋಷಿಸಿದ ಸಿದ್ದೇಶ್ವರ ಅವರು, . ಈ ಮೂಲಕ ದಾವಣಗೆರೆ ಲೋಕಸಭಾ ರಾಜಕಾರಣದ ಹೊರತಾಗಿ ರಾಜ್ಯ ವಿಧಾನಸಭಾ ರಾಜಕಾರಣದತ್ತ ಗಮನ ಹರಿಸಿರುವ ಸಂದೇಶ ನೀಡಿದರು. ಆದರೆ, ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಅಥವಾ ಪಕ್ಷದಿಂದ ಟಿಕೆಟ್ ನೀಡುವ ಕುರಿತು ಯಾವುದೇ ಅಧಿಕೃತ ನಿರ್ಧಾರವಾಗಿಲ್ಲ. ಅಂತಿಮವಾಗಿ ನನ್ನನ್ನು ಅಭ್ಯರ್ಥಿ ಎಂದು ಆಯ್ಕೆ ಮಾಡುವ ನಿರ್ಧಾರ ಪಕ್ಷದ ವರಿಷ್ಠರು ಹಾಗೂ ರಾಜ್ಯ ನಾಯಕತ್ವಕ್ಕೆ ಬಿಟ್ಟಿದ್ದೇನೆ ಎಂದು ತಿಳಿಸಿದರು.

ಚೇತರಿಕೆ ಬಳಿಕ ರಾಜಕೀಯ ಚಟುವಟಿಕೆಗೆ ಸಿದ್ಧತೆ: ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದೆ. ಈಗ ಚಿಕಿತ್ಸೆ ಪಡೆದ ಬಳಿಕ ಚೇತರಿಸಿಕೊಳ್ಳುತ್ತಿದ್ದೇನೆ. ಕಾಲಿಗೆ ಸಣ್ಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಪಕ್ಷದ ಚಟುವಟಿಕೆಗಳಲ್ಲಿ ಮತ್ತಷ್ಟು ಸಕ್ರಿಯರಾಗುವ ವಿಶ್ವಾಸ ವ್ಯಕ್ತಪಡಿಸಿದರು.

‘ಕೊನೆಯ ಉಸಿರಿನವರೆಗೂ ಬಿಜೆಪಿಯ ಕಾರ್ಯಕರ್ತ’: ತಾವು ರಾಜಕೀಯದಲ್ಲಿ ತಾತ್ಕಾಲಿಕ ಸಂಚಲನ ಸೃಷ್ಟಿಸುವ ‘ಬ್ರೇಕಿಂಗ್ ನ್ಯೂಸ್’ಗಳಿಗೆ ಆದ್ಯತೆ ನೀಡುವುದಿಲ್ಲ ಎಂದು ಹೇಳಿದ ಅವರು, ಕೊನೆಯ ಉಸಿರಿರುವವರೆಗೂ ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಶ್ರಮಿಸುತ್ತೇನೆ. ಇನ್ನು ಮುಂದೆ ಕೇಂದ್ರ ರಾಜಕಾರಣಕ್ಕೆ ಹೋಗುವುದಿಲ್ಲ. ಬದಲಾಗಿ ಲೋಕಸಭಾ ಕ್ಷತ್ರಕ್ಕೆ ನಮ್ಮ ಕುಟುಂಬದಲ್ಲಿ ಯಾರಿಗಾದರೂ ಟಿಕೆಟ್ ಕೊಟ್ಟರೂ ನನಗೆ ಓಕೆ. ನಾನು ಮಾತ್ರ ಲೋಕಸಭಾ ಕ್ಷೇತ್ರಕ್ಕೆ ನಿಲ್ಲುವುದಿಲ್ಲ. ಏನಿದ್ದರೂ ನನ್ನ ಚಿತ್ರ ರಾಜ್ಯ ರಾಜಕಾರಣದತ್ತ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.