ಭಾರತ ಮತ್ತು ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಇದೀಗ ಕ್ರಿಕೆಟ್ ಮೈದಾನದಲ್ಲೂ ತೀವ್ರ ಸ್ವರೂಪ ಪಡೆದುಕೊಂಡಿದೆ. ಮಹಿಳಾ ಏಷ್ಯಾ ಕಪ್ 2026ರ ಟ್ರೋಫಿ ಪ್ರದಾನ ಸಮಾರಂಭವನ್ನು ಭಾರತದ ಮಹಿಳಾ ತಂಡ ಬಹಿಷ್ಕರಿಸಿರುವ ಹಿಂದಿನ ಅಸಲಿ ಕಾರಣವನ್ನು ಬಿಸಿಸಿಐ ಬಹಿರಂಗಪಡಿಸಿದೆ.
ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ಮುಖ್ಯಸ್ಥ ಹಾಗೂ ಪಾಕ್ ಗೃಹ ಸಚಿವ ಮೋಸಿನ್ ನಖ್ವಿ ಅವರು ಟ್ರೋಫಿ ವಿತರಿಸುವುದಾದರೆ, ನಾವು ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಬಿಸಿಸಿಐ ಏಷ್ಯನ್ ಕ್ರಿಕೆಟ್ ಕೌನ್ಸಿಲ್ಗೆ (ACC) ಖಡಕ್ ಎಚ್ಚರಿಕೆ ನೀಡಿತ್ತು.
ಪರ್ಯಾಯ ಸಲಹೆ ತಿರಸ್ಕರಿಸಿದ ಎಸಿಸಿ: ಈ ಕುರಿತು ಖಾಸಗಿ ವಾಹಿನಿ ಜೊತೆ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, “ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದೊಂದಿಗಿನ ನಮ್ಮ ಬಾಂಧವ್ಯ ಹದಗೆಟ್ಟಿದೆ. ಆ ದೇಶದ ಗೃಹ ಸಚಿವರೂ ಆಗಿರುವ ಪಿಸಿಬಿ ಮುಖ್ಯಸ್ಥರಿಂದ ನಮ್ಮ ಆಟಗಾರ್ತಿಯರು ಟ್ರೋಫಿ ಪಡೆಯುವುದಿಲ್ಲ ಎಂಬ ನಿಲುವನ್ನು ನಾವು ಸ್ಪಷ್ಟಪಡಿಸಿದ್ದೆವು. ಬದಲಾಗಿ, ಎಸಿಸಿ ಉಪಾಧ್ಯಕ್ಷ ಖಾಲಿದ್ ಅವರಿಂದ ಟ್ರೋಫಿ ವಿತರಿಸುವಂತೆ ನಾವು ಪರ್ಯಾಯ ಸಲಹೆ ನೀಡಿದ್ದೆವು. ಆದರೆ ಎಸಿಸಿ ನಮ್ಮ ಮನವಿಯನ್ನು ತಿರಸ್ಕರಿಸಿದ ಕಾರಣ, ನಮಗೆ ಸಮಾರಂಭವನ್ನು ಬಹಿಷ್ಕರಿಸುವ ಹೊರತು ಬೇರೆ ದಾರಿಯಿರಲಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಪಹಲ್ಗಾಮ್ ಹುತಾತ್ಮರಿಗೆ ಗೌರವ: “ಈ ಟ್ರೋಫಿ ಪ್ರದಾನ ಸಮಾರಂಭವನ್ನು ಬಹಿಷ್ಕರಿಸುವ ಮೂಲಕ ಪಹಲ್ಗಾಮ್ ದಾಳಿಯಲ್ಲಿ ಹುತಾತ್ಮರಾದವರಿಗೆ ನಾವು ಗೌರವ ಸಲ್ಲಿಸಿದ್ದೇವೆ. ಪುರುಷರ ಏಷ್ಯಾ ಕಪ್ ಮಾದರಿಯಲ್ಲೇ, ಮುಂಬರುವ ದಿನಗಳಲ್ಲಿ ಮಹಿಳಾ ಹಾಗೂ ಪುರುಷರ ಎರಡೂ ಏಷ್ಯಾ ಕಪ್ ಟ್ರೋಫಿಗಳು ಭಾರತಕ್ಕೆ ಬರಲಿವೆ ಎಂದು ನಾವು ಭರವಸೆ ನೀಡುತ್ತೇವೆ” ಎಂದು ಸೈಕಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂಬರುವ ಟಿ20 ವಿಶ್ವಕಪ್ ಹಾಗೂ ಏಷ್ಯನ್ ಗೇಮ್ಸ್ ಗುರಿ: 2025ರಲ್ಲಿ ಚೊಚ್ಚಲ 50 ಓವರ್ಗಳ ವಿಶ್ವಕಪ್ ಗೆದ್ದಿರುವ ಭಾರತೀಯ ವನಿತೆಯರು, ಇದೀಗ ಟಿ20 ವಿಶ್ವಕಪ್ಗಾಗಿ ಬಲಿಷ್ಠ ತಂಡವನ್ನು ಕಟ್ಟುವತ್ತ ಗಮನಹರಿಸಿದ್ದಾರೆ. ಇದರ ಜೊತೆಗೆ, 2026ರ ಏಷ್ಯನ್ ಗೇಮ್ಸ್ನಲ್ಲಿ ಪುರುಷರ ಹಾಗೂ ಮಹಿಳಾ ವಿಭಾಗಗಳೆರಡರಲ್ಲೂ ಚಿನ್ನದ ಪದಕ ಗೆಲ್ಲುವುದೇ ಬಿಸಿಸಿಐನ ಅಂತಿಮ ಗುರಿಯಾಗಿದೆ ಎಂದು ಸೈಕಿಯಾ ತಿಳಿಸಿದ್ದಾರೆ. ಒಟ್ಟಿನಲ್ಲಿ, ಬಿಸಿಸಿಐನ ಈ ದಿಟ್ಟ ನಿಲುವು ದೇಶಾದ್ಯಂತ ಕ್ರೀಡಾಭಿಮಾನಿಗಳ ಪ್ರಶಂಸೆಗೆ ಪಾತ್ರವಾಗಿದೆ.






















