SK Home Ad
Home ನಮ್ಮ ಜಿಲ್ಲೆ ಕಲಬುರಗಿ ಸೆ. 16,17 ರಂದು 79ನೇ ಕಲ್ಯಾಣ ಕರ್ನಾಟಕ ಉತ್ಸವ

ಸೆ. 16,17 ರಂದು 79ನೇ ಕಲ್ಯಾಣ ಕರ್ನಾಟಕ ಉತ್ಸವ

0
2
File Photo

79ನೇ ಕಲ್ಯಾಣ ಕರ್ನಾಟಕ ಉತ್ಸವ–2026

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಲು ಸಚಿವ ಪ್ರಿಯಾಂಕ್ ಖರ್ಗೆ ಮನವಿ

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ-2026ರ ಅಂಗವಾಗಿ ಇದೇ ಸೆಪ್ಟೆಂಬರ್ 16 ಮತ್ತು 17 ರಂದು ಕಲಬುರಗಿ ನಗರದಲ್ಲಿ ಆಯೋಜಿಸಲಾಗಿರುವ ವೈವಿಧ್ಯಮಯ ಸಾಂಸ್ಕೃತಿಕ, ಸಂಗೀತ, ನೃತ್ಯ ಹಾಗೂ ಮನರಂಜನಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು, ಯುವಜನರು, ವಿದ್ಯಾರ್ಥಿಗಳು ಹಾಗೂ ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು
ರಾಜ್ಯದ ಗೃಹ, ಐ.ಟಿ-ಬಿ.ಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.

ಕಲ್ಯಾಣ ಕರ್ನಾಟಕದ ಇತಿಹಾಸ, ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಸ್ಥಳೀಯ ಪ್ರತಿಭೆಗಳನ್ನು ಜನರೊಂದಿಗೆ ಸಂಭ್ರಮಿಸುವ ಉದ್ದೇಶದಿಂದ ಕಲಬುರಗಿ ನಗರದ ವಿವಿಧ ವೇದಿಕೆಗಳಲ್ಲಿ ಎರಡು ದಿನಗಳ ಕಾಲ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

79ನೇ ಕಲ್ಯಾಣ ಕರ್ನಾಟಕ ಉತ್ಸವ ನಮ್ಮ ಭಾಗದ ಇತಿಹಾಸ, ಕಲೆ, ಸಂಸ್ಕೃತಿ, ಪರಂಪರೆ ಮತ್ತು ಪ್ರತಿಭೆಯನ್ನು ಒಟ್ಟಾಗಿ ಸಂಭ್ರಮಿಸುವ ಜನರ ಉತ್ಸವಾಗಿರಲಿದೆ. ಕಲಬುರಗಿ ನಗರದ ಹಾಗೂ ಜಿಲ್ಲೆಯ ಜನರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಎರಡು ದಿನಗಳ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕು” ಎಂದು ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.

ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿವಿಧ ಕಾರ್ಯಕ್ರಮಗಳನ್ನು ವೀಕ್ಷಿಸಿ, ನಮ್ಮ ಕಲಾವಿದರು ಮತ್ತು ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು. ಸೆಪ್ಟೆಂಬರ್ 16 ಮತ್ತು 17ರಂದು ಕಲಬುರಗಿ ನಗರವೇ ಉತ್ಸವದ ಸಂಭ್ರಮದಲ್ಲಿ ಕಂಗೊಳಿಸಲಿದ್ದು, ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಯೇ ಈ ಉತ್ಸವದ ಯಶಸ್ಸು ಎಂದು ಸಚಿವರು ತಿಳಿಸಿದ್ದಾರೆ.

ಸೆಪ್ಟೆಂಬರ್ 16ರ ಕಾರ್ಯಕ್ರಮಗಳು:

ಕಲಬುರಗಿ‌ ನಗರದ ಪಬ್ಲಿಕ್ ಗಾರ್ಡನ್‌ನಲ್ಲಿ ಸಂಜೆ 6.30ರಿಂದ ಸ್ಥಳೀಯ ಪ್ರತಿಭೆಗಳಿಂದ ಕಲಾ ಪ್ರದರ್ಶನ, ನಂತರ ಶಾಸ್ತ್ರೀಯ ನೃತ್ಯ ಹಾಗೂ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 8 ಗಂಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಂದ‌ ‘ಸ್ಟ್ರೀಟ್ ಫೆಸ್ಟಿವಲ್’ ಗೆ ಚಾಲನೆ ನೀಡಲಾಗುತ್ತದೆ. ರಾತ್ರಿ 8-30 ರಿಂದ 10 ಗಂಟೆವರೆಗೆ ಸವಾರಿ‌ ಬ್ಯಾಂಡ್ ತಂಡ ಕಲಾ‌ ರಸಿಕರಿಗೆ ಸಂಗೀತ ಉಣಬಡಿಸಲಿದೆ.

ಇನ್ನು ಅಪ್ಪನ ಕೆರೆಯಲ್ಲಿ ಸಂಜೆ 7 ರಿಂದ 8.30‌ ಗಂಟೆವರೆಗೆ ಭೈರವ್ ಮತ್ತು ತಂಡದಿಂದ ಇಂಡೋ-ಫ್ಯೂಷನ್ ವಾದ್ಯ ಪ್ರದರ್ಶನ ನಡೆಯಲಿದೆ. 8.30 ಗಂಟೆಗೆ ಮುಖ್ಯಮಂತ್ರಿಗಳಿಂದ ಕೆರೆ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ರಾತ್ರಿ 9 ರಿಂದ 9.30 ಗಂಟೆಯವರೆಗೆ 3ಡಿ‌‌ ಲೈಟ್ ಶೋ ಮತ್ತು ಡ್ರೋನ್‌ ಶೋ ಸಹ ನಡೆಯಲಿದೆ.

ಸೆಪ್ಟೆಂಬರ್ 17ರ ಕಾರ್ಯಕ್ರಮಗಳು:

ಪೊಲೀಸ್ ಪರೇಡ್ ಮೈದಾನದಲ್ಲಿ ಬೆಳಿಗ್ಗೆ 9 ಗಂಟೆಗೆ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಅಂಗವಾಗಿ ಮುಖ್ಯಮಂತ್ರಿಗಳಿಂದ ರಾಷ್ಟ್ರಧ್ವಜಾರೋಹಣ ನಡೆಯಲಿದೆ. ಡ್ಯಾನ್ಸ್ ಕರ್ನಾಟಕ ಡ್ತಾನ್ಸ್ ತಂಡದಿಂದ ಅಂದು ಪರೇಡ್ ಮೈದಾನದಲ್ಲಿ ಬೆಳಿಗ್ಗೆ 8ರಿಂದ 11 ಗಂಟೆಯವರೆಗೆ ಸಮೂಹ ನೃತ್ಯ ಹಾಗೂ ಖ್ಯಾತ ಕಲಾವಿದ ವಿಲಾಸ್‌ ನಾಯಕ್ ಅವರಿಂದ ಲೈವ್ ಪೇಂಟಿಂಗ್ ಕಾರ್ಯಕ್ರಮ ನಡೆಯಲಿದೆ.

ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಸಂಜೆ 6-30 ರಿಂದ 8 ಗಂಟೆಯವರೆಗೆ ಗಣೇಶ‌ ವಂದನೆ,‌ ವಿವೇಕ ಮರಳಿಧರನ್ ಅವರಿಂದ ಸ್ಟ್ಯಾಂಡಪ್‌ ಕಾಮಿಡಿ,‌ ಸ್ಟೆಪ್ ಎನ್ ಸ್ಟೈಲ್ ತಂಡದಿಂದ ಸಮಕಾಲಿನ‌ ನೃತ್ಯ, ಎಸ್. ಸೋನುವೇಣು ಗೋಪಾಲ ಅವರಿಂದ ಸ್ಟ್ಯಾಂಡಪ್‌ ಕಾಮಿಡಿ ಹಾಗೂ ರಾತ್ರಿ 8ರಿಂದ 10 ಗಂಟೆಯವರೆಗೆ ಬೆಂಗಳೂರು ಮೂಲದ ಅಕೌಸ್ಟಿಕ್ ಸಾಗಾ ತಂಡವು ಬಹುಭಾಷಾ ಬ್ಯಾಂಡ್ ಪ್ರಸ್ತುತಪಡಿಸಲಿದೆ.

ಪಬ್ಲಿಕ್ ಗಾರ್ಡನ್‌ನಲ್ಲಿ ಸಂಜೆ 6-30ರಿಂದ 8 ಗಂಟೆಯವರೆಗೆ ನೃತ್ಯ ಕಾರ್ಯಕ್ರಮ, ಸುಗಮ‌ ಸಂಗೀತ, ನೃತ್ಯ ಕಾರ್ಯಕ್ರಮ, ಸೃಷ್ಟಿ ಅವರಿಂದ ಸ್ಟ್ಯಾಂಡಪ್‌ ಕಾಮಿಡಿ ನಡೆಯಲಿದೆ. ರಾತ್ರಿ 8 ರಿಂದ 10 ಗಂಟೆಯವರೆಗೆ ಝೀ ಕನ್ನಡ ಸರೆಗಮಪಾ ತಂಡದಿಂದ ಸಂಗೀತ ಪ್ರದರ್ಶನ ನಡೆಯಲಿದೆ.

ಅಪ್ಪನ ಕೆರೆಯಲ್ಲಿ ಸಂಜೆ 7 ರಿಂದ ರಾತ್ರಿ 9.30 ಗಂಟೆಯವರೆಗೆ ಪ್ರತಿ 30 ನಿಮಿಷಕ್ಕೊಮ್ಮೆ ಧ್ವನಿ ಬೆಳಕು ಕಾರ್ಯಕ್ರಮ ನಡೆಯಲಿದೆ.