SK Home Ad
Home ನಮ್ಮ ಜಿಲ್ಲೆ ಬಳ್ಳಾರಿ ವೈಯಕ್ತಿಕ ದ್ವೇಷದಿಂದ ರಾಜಣ್ಣಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ತಪ್ಪಿಸಲಾಗಿದೆ: ಜೋಶಿ

ವೈಯಕ್ತಿಕ ದ್ವೇಷದಿಂದ ರಾಜಣ್ಣಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ತಪ್ಪಿಸಲಾಗಿದೆ: ಜೋಶಿ

0
64
File Photo

ಬಳ್ಳಾರಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವೈಯಕ್ತಿಕ ದ್ವೇಷದಿಂದ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ನೀಡಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.

ನಗರದಲ್ಲಿ ಗುರುವಾರ ನಡೆದ ಬಿಜೆಪಿ ‘ಬಳ್ಳಾರಿ ಚಲೋ’ ಪಾದಯಾತ್ರೆ ಸಮಾರೋಪ ಸಮಾವೇಶದಲ್ಲಿ ಮಾತನಾಡಿದ ಅವರು, ‘ಎಸ್‌ಟಿ ಸಮುದಾಯದ ನಾಯಕ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ರಾಹುಲ್ ಗಾಂಧಿ ಸೂಚಿಸಿದ್ದರಿಂದ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ. ಆಗ ಎಸ್‌ಟಿ ಸಮುದಾಯದ ಬಗ್ಗೆ ಕಾಳಜಿ ತೋರದ ಕಾಂಗ್ರೆಸ್, ಇದೀಗ ರಾಜಣ್ಣ ಅವರಿಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನೂ ನೀಡದೆ ಅನ್ಯಾಯ ಮಾಡಿದೆ’ ಎಂದು ದೂರಿದರು.

‘ಕಾಂಗ್ರೆಸ್ ಸರ್ಕಾರದಲ್ಲಿ ತುಷ್ಟೀಕರಣ ಮಿತಿ ಮೀರಿದೆ. ವಂದೇ ಮಾತರಂ ಗೀತೆಯನ್ನು ತುಂಡರಿಸುವ ಮೂಲಕ ದೇಶವನ್ನೇ ತುಂಡರಿಸುವ ಕೆಲಸ ಮಾಡಿದ್ದೀರಿ’ ಎಂದು ಜೋಶಿ ವಾಗ್ದಾಳಿ ನಡೆಸಿದರು. ‘ಮತಾಂಧರು ವಿರೋಧಿಸುತ್ತಾರೆ ಎಂಬ ಕಾರಣಕ್ಕೆ ವಂದೇ ಮಾತರಂಗೆ ಅವಮಾನ ಮಾಡಲಾಗಿದೆ’ ಎಂದರು.

ವಾಲ್ಮೀಕಿ ನಿಗಮದ ಹಣದ ಅವ್ಯವಹಾರ ಹಾಗೂ ಎಸ್‌ಸಿಎಸ್‌ಪಿ–ಟಿಎಸ್‌ಪಿ ಅನುದಾನದ ಕುರಿತು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆರೋಪ ಮಾಡಿದ ಅವರು, ‘ಎಸ್‌ಸಿ–ಎಸ್‌ಟಿ ಸಮುದಾಯಕ್ಕೆ ಸೇರಿದ ₹52 ಸಾವಿರ ಕೋಟಿ ಹಣವನ್ನು ಲೂಟಿ ಮಾಡಲಾಗಿದೆ. ಗ್ಯಾರಂಟಿಗಳ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ದುಡ್ಡು ಹೊಡೆಯುತ್ತಿದೆ’ ಎಂದು ಆರೋಪಿಸಿದರು.

‘ವಾಲ್ಮೀಕಿ ನಿಗಮದ ಹಣದ ಪ್ರಕರಣದಲ್ಲಿ ಆರೋಪ ಎದುರಿಸಿದ ಬಿ. ನಾಗೇಂದ್ರ ಅವರು ರಾಜೀನಾಮೆ ನೀಡಬೇಕಾಯಿತು. ಎಸ್‌ಟಿ ಸಮುದಾಯದ ಹಣದ ವಿಚಾರದಲ್ಲಿ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕಾಗಿತ್ತು’ ಎಂದು ಹೇಳಿದರು.

ಗೃಹಲಕ್ಷ್ಮಿ ಯೋಜನೆಯ ₹5 ಸಾವಿರ ಕೋಟಿ ಹಣಕ್ಕೆ ಇನ್ನೂ ಲೆಕ್ಕ ನೀಡಿಲ್ಲ ಎಂದು ಆರೋಪಿಸಿದ ಜೋಶಿ, ‘ಆ ಹಣ ಎಲ್ಲಿ ಹೋಯಿತು? ಯಾರಿಗೆ ಉದ್ಯೋಗ ಸೃಷ್ಟಿ ಮಾಡಿದ್ದೀರಿ? ವಿಧವೆಯರ ಪಿಂಚಣಿ ಹಣವನ್ನೂ ಬಂದ್ ಮಾಡಿದ್ದೀರಿ. ಇದಕ್ಕೆ ನಾಚಿಕೆಯಾಗುವುದಿಲ್ಲವೇ?’ ಎಂದು ಪ್ರಶ್ನಿಸಿದರು.

‘ಅನ್ನಭಾಗ್ಯ ಯೋಜನೆಯಡಿ ಐದು ಕೆ.ಜಿ. ಅಕ್ಕಿ ನೀಡುತ್ತಿರುವುದು ಕಾಂಗ್ರೆಸ್ ಸರ್ಕಾರವಲ್ಲ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ’ ಎಂದು ಹೇಳಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬರ ವೀಕ್ಷಣೆಗೂ ಜೋಶಿ ವ್ಯಂಗ್ಯವಾಡಿದರು. ‘ಬರ ವೀಕ್ಷಣೆಗೆ ಮುಖ್ಯಮಂತ್ರಿಗಳು ಹೆಲಿಕಾಪ್ಟರ್‌ನಲ್ಲಿ ತೆರಳಿದ್ದಾರೆ. ಇನ್ನು ವಿಮಾನದಲ್ಲಿ ಹೋಗಿದ್ದರೆ ಮೇಲಿನಿಂದ ಇನ್ನೂ ಚೆನ್ನಾಗಿ ಕಾಣುತ್ತಿತ್ತು’ ಎಂದು ಲೇವಡಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ರಾಹುಲ್ ಗಾಂಧಿ ಮಾಡುತ್ತಿರುವ ಟೀಕೆಗಳನ್ನು ಉಲ್ಲೇಖಿಸಿದ ಜೋಶಿ, ‘ರಾಹುಲ್ ಅಂಕಲ್ ಪ್ರಧಾನಿಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ನರೇಂದ್ರ ಮೋದಿ ಅವರು 25 ವರ್ಷಗಳ ಕಾಲ ಸತತವಾಗಿ ಗೆದ್ದು ಆಡಳಿತ ನಡೆಸಿದವರು. ನೀವು 25 ವರ್ಷಗಳ ಕಾಲ ಸತತವಾಗಿ ಸೋತಿದ್ದೀರಿ’ ಎಂದು ಟೀಕಿಸಿದರು.

ವಿಜಯೇಂದ್ರ ನೇತೃತ್ವದಲ್ಲಿ ಹತ್ತು ದಿನಗಳ ಕಾಲ ನಡೆದ ‘ಬಳ್ಳಾರಿ ಚಲೋ’ ಪಾದಯಾತ್ರೆ ಯಶಸ್ವಿಯಾಗಿದೆ ಎಂದು ಹೇಳಿದ ಅವರು, ‘ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಎಚ್ಚರಿಕೆ ನೀಡಿದರು.
‘ಬಳ್ಳಾರಿ ಚಲೋ’ ಪಾದಯಾತ್ರೆಯ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತಷ್ಟು ಸಂಘಟಿತವಾಗಿ ಹೋರಾಟ ನಡೆಸಲಿದೆ ಎಂದು ಜೋಶಿ ಹೇಳಿದರು.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.