SK Home Ad
Home ಸುದ್ದಿ ರಾಜ್ಯ ಪುರುಷರಿಗೂ ಕಿರುಕುಳ ಆಗುತ್ತೆ: ಪ್ರತ್ಯೇಕ ಪುರುಷರ ಆಯೋಗ ರಚಿಸಿ

ಪುರುಷರಿಗೂ ಕಿರುಕುಳ ಆಗುತ್ತೆ: ಪ್ರತ್ಯೇಕ ಪುರುಷರ ಆಯೋಗ ರಚಿಸಿ

0
180

ಬೆಳಗಾವಿ: ಮಹಿಳೆಯರಂತೆ ಪುರುಷರೂ ಹಲವು ರೀತಿಯ ಕಿರುಕುಳ ಹಾಗೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಪುರುಷರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರತ್ಯೇಕ ಪುರುಷರ ಆಯೋಗ ರಚಿಸುವ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು.

ಸುವರ್ಣ ವಿಧಾನಸೌಧದಲ್ಲಿ ಆಯೋಜಿಸಿದ್ದ ಪಾಶ್‌ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪೊಲೀಸ್ ಎಂದರೆ ಭಯವಲ್ಲ, ಭರವಸೆ ಆಗಿದೆ. ಪೊಲೀಸ್ ಠಾಣೆ ಹೆಣ್ಣುಮಕ್ಕಳಿಗೆ ತವರು ಮನೆಯಂತಿರಬೇಕು. ಯಾವುದೇ ಸಮಸ್ಯೆ ಎದುರಾದಾಗ ಮಹಿಳೆಯರು ಧೈರ್ಯವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಬೇಕು ಎಂದರು.

ಗಂಡು ಮಕ್ಕಳಿಗೂ ಹೆಲ್ಪ್‌ಲೈನ್‌ ವ್ಯವಸ್ಥೆ ಇದೆ. ಪುರುಷರಿಗೆ ಕಿರುಕುಳವಾಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಪುರುಷರೂ ಕೌಟುಂಬಿಕ ಹಾಗೂ ಸಾಮಾಜಿಕವಾಗಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ಅವರ ಸಮಸ್ಯೆಗಳನ್ನು ಆಲಿಸಲು ಮಹಿಳಾ ಆಯೋಗದಂತೆ ಪ್ರತ್ಯೇಕ ಪುರುಷರ ಆಯೋಗ ಇಲ್ಲ ಎಂದು ಹೇಳಿದರು.

ಪುರುಷರಿಗೂ ಕಿರುಕುಳ ಆಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು ಪುರುಷರ ಆಯೋಗ ರಚಿಸುವ ಬಗ್ಗೆ ಚಿಂತನೆ ನಡೆಸಬೇಕು. ಮಹಿಳೆಯರ ರಕ್ಷಣೆಯ ಜೊತೆಗೆ ಪುರುಷರ ಸಮಸ್ಯೆಗಳಿಗೂ ಸೂಕ್ತ ವೇದಿಕೆ ಕಲ್ಪಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.

ನನಗೆ ಓದಿಸಿದ್ದು ನನ್ನ ಅಪ್ಪ. ನನ್ನ ಬದುಕಿನಲ್ಲಿ ಪುರುಷರ ಪಾತ್ರವೂ ಮಹತ್ವದ್ದಾಗಿದೆ. ಹೀಗಾಗಿ ಎಲ್ಲ ಪುರುಷರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು.