SK Home Ad
Home ಸುದ್ದಿ ದೇಶ ವಿಷಮಿಶ್ರಿತ ಮದ್ಯ ಸೇವನೆ: 10 ಮಂದಿ ಸಾವು, 25ಕ್ಕೂ ಹೆಚ್ಚು ಆಸ್ಪತ್ರೆಗೆ ದಾಖಲು

ವಿಷಮಿಶ್ರಿತ ಮದ್ಯ ಸೇವನೆ: 10 ಮಂದಿ ಸಾವು, 25ಕ್ಕೂ ಹೆಚ್ಚು ಆಸ್ಪತ್ರೆಗೆ ದಾಖಲು

0
95

ಸಾಗರ (ಮಧ್ಯಪ್ರದೇಶ): ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ವಿಷಮಿಶ್ರಿತ ಮದ್ಯ ಸೇವಿಸಿದ ಶಂಕೆಯಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಾಗರ ಜಿಲ್ಲೆಯ ಬಂಡಾ ತಹಸಿಲ್ ವ್ಯಾಪ್ತಿಯ ನಾಲ್ಕು ಗ್ರಾಮಗಳಲ್ಲಿ ಶನಿವಾರ ರಾತ್ರಿ ಮದ್ಯ ಸೇವಿಸಿದ ಬಳಿಕ ಹಲವರ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿದ್ದು, ಭಾನುವಾರ ಬೆಳಗ್ಗೆಯಿಂದ ಸಾವಿನ ಪ್ರಕರಣಗಳು ವರದಿಯಾಗಿವೆ.

ಸಾಗರ ಜಿಲ್ಲಾ ಕೇಂದ್ರದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಬಂಡಾ ಪ್ರದೇಶದ ಬರಾಜ್, ನೌರಾಜ್, ಘೂಘ್ರಾ ಖುರ್ದ್ ಹಾಗೂ ಬಮುರಾ ಭೇಡಾ ಸೇರಿದಂತೆ ಗ್ರಾಮಗಳಲ್ಲಿ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.

ಮದ್ಯ ಸೇವಿಸಿದ ಕೆಲವೇ ಗಂಟೆಗಳಲ್ಲಿ ವಾಂತಿ, ವಾಕರಿಕೆ ಸೇರಿದಂತೆ ತೀವ್ರ ಅಸ್ವಸ್ಥತೆಯ ಲಕ್ಷಣಗಳು ಕಾಣಿಸಿಕೊಂಡಿದ್ದು, ಅವರನ್ನು ಬಂಡಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಗಂಭೀರ ಸ್ಥಿತಿಯಲ್ಲಿದ್ದ 25ಕ್ಕೂ ಹೆಚ್ಚು ಮಂದಿಯನ್ನು ಸಾಗರದ ಬುಂದೇಲ್‌ಖಂಡ್ ಮೆಡಿಕಲ್ ಕಾಲೇಜು ಹಾಗೂ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಸಾಗರದ ಮುಖ್ಯ ಆರೋಗ್ಯ ಮತ್ತು ವೈದ್ಯಾಧಿಕಾರಿ ಡಾ. ದೇವೇಶ್ ಪಟೇರಿಯಾ ಅವರು ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ವಿಷಮಿಶ್ರಿತ ಮದ್ಯ ಸೇವನೆಯೇ ಸಾವಿಗೆ ಕಾರಣ ಎಂಬುದು ಪ್ರಾಥಮಿಕ ಶಂಕೆಯಾಗಿದ್ದು, ಮರಣೋತ್ತರ ಪರೀಕ್ಷೆ ಹಾಗೂ ವೈದ್ಯಕೀಯ ವರದಿಗಳ ಬಳಿಕ ನಿಖರ ಕಾರಣ ಸ್ಪಷ್ಟವಾಗಲಿದೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾಧಿಕಾರಿ ಪ್ರತಿಭಾ ಪಾಲ್, ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಸುಜಾನಿಯಾ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ಪರಿಣಾಮಕ್ಕೊಳಗಾದ ಗ್ರಾಮಗಳಲ್ಲಿ ಮನೆ-ಮನೆ ಆರೋಗ್ಯ ತಪಾಸಣೆ ಮತ್ತು ಸ್ಕ್ರೀನಿಂಗ್ ಕಾರ್ಯಾಚರಣೆ ಆರಂಭಿಸಲಾಗಿದೆ. ಕಳೆದ 48 ಗಂಟೆಗಳಲ್ಲಿ ಮದ್ಯ ಸೇವಿಸಿ ಯಾವುದೇ ಅಸ್ವಸ್ಥತೆಯ ಲಕ್ಷಣ ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ತೆರಳುವಂತೆ ಅಧಿಕಾರಿಗಳು ಗ್ರಾಮಸ್ಥರಿಗೆ ಸೂಚಿಸಿದ್ದಾರೆ.

ಇದರ ನಡುವೆ, ಪ್ರಕರಣದ ತನಿಖೆಯಲ್ಲಿ ಅಕ್ರಮ ಮದ್ಯದ ಪೂರೈಕೆ ಜಾಲದ ಸುಳಿವುಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ಉತ್ತರ ಪ್ರದೇಶದ ಲಲಿತ್‌ಪುರದಿಂದ ನಕಲಿ ಮದ್ಯವನ್ನು ಸಿದ್ಧಪಡಿಸಿ ಮಧ್ಯಪ್ರದೇಶದ ಬಂಡಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಪೂರೈಸುತ್ತಿದ್ದ ಶಂಕಿತ ಜಾಲದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಕಲಿ ಲೇಬಲ್‌, ಬಾಟಲಿ ಕ್ಯಾಪ್‌ ಹಾಗೂ QR ಕೋಡ್‌ಗಳನ್ನು ಬಳಸಿ ಮದ್ಯವನ್ನು ಅಸಲಿ ಬ್ರ್ಯಾಂಡ್‌ನಂತೆ ತೋರಿಸಲಾಗುತ್ತಿತ್ತೆಂಬ ಆರೋಪವೂ ತನಿಖೆಯಲ್ಲಿ ಕೇಳಿಬಂದಿದೆ. ಈ ಜಾಲಕ್ಕೂ ಸದ್ಯದ ಸಾವುಗಳಿಗೂ ನೇರ ಸಂಬಂಧವಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಅಕ್ರಮ ಮದ್ಯದ ಅಡ್ಡೆಗಳು ಹಾಗೂ ಮದ್ಯ ಮಾರಾಟ ಮಳಿಗೆಗಳ ಮೇಲೆ ತಪಾಸಣೆ ತೀವ್ರಗೊಳಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ಹೊರಬರುವ ಸಾಧ್ಯತೆ ಇದೆ.