SK Home Ad
Home ಸುದ್ದಿ ರಾಜ್ಯ ಬಿಜೆಪಿ ದಂಡಯಾತ್ರೆಗೆ ಎರಡನೇ ದಿನವೂ ಹರಿದು ಬಂದ ಜನಸಾಗರ

ಬಿಜೆಪಿ ದಂಡಯಾತ್ರೆಗೆ ಎರಡನೇ ದಿನವೂ ಹರಿದು ಬಂದ ಜನಸಾಗರ

0
52

ಮಸ್ಕಿ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಬಳ್ಳಾರಿ ಚಲೋ ಪಾದಯಾತ್ರೆ ಎರಡನೇ ದಿನ ಬುಧವಾರ ಜನಸಾಗರಕ್ಕೆ ಸಾಕ್ಷಿಯಾಯಿತು.

ರಾಜಕೀಯ ಹೋರಾಟದ ನಡುವೆಯೇ ರೈತರ ಬರದ ಸಂಕಷ್ಟವೂ ಮುನ್ನೆಲೆಗೆ ಬಂತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸಂತೆಕಲ್ಲೂರು ಸರ್ಕಲ್‌ನಿಂದ ಬೆಳಿಗ್ಗೆ 9ಕ್ಕೆ ಆರಂಭವಾದ ಪಾದಯಾತ್ರೆ ಮಸ್ಕಿ ಪಟ್ಟಣದ ಮೂಲಕ ರಾತ್ರಿ 9 ಗಂಟೆಯ ಸುಮಾರಿಗೆ ಗುಡದೂರು ಕಡೆಗೆ ಸಾಗಿತು.

ಸುಮಾರು 22 ಕಿ.ಮೀ. ಪಾದಯಾತ್ರೆಯಲ್ಲಿ ಬಿಜೆಪಿ ನಾಯಕರು, ಶಾಸಕರು, ಮಾಜಿ ಶಾಸಕರು ಹಾಗೂ ವಿವಿಧ ಜಿಲ್ಲೆಗಳ ಮುಖಂಡರು, ಕಾರ್ಯಕರ್ತರು ಹೆಜ್ಜೆ ಹಾಕಿದರು.

ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣದ ಅಸ್ತ್ರ ಹಿಡಿದು ಆರಂಭವಾದ ಬಿಜೆಪಿಯ ಬಳ್ಳಾರಿ ದಂಡಯಾತ್ರೆ ಈಗ ಇಡೀ ರಾಜ್ಯ ಸರಕಾರದ ವೈಫಲ್ಯಗಳನ್ನು ಎತ್ತಿ ಹಿಡಿಯುವ, 2028ರ ಚುನಾವಣೆಯ ದಿಕ್ಸೂಚಿ ಯಾತ್ರೆ ಎನ್ನುವ ಅಂಶಗಳನ್ನು ಸಾರುತ್ತಿತ್ತು.

ಸೆ. 1ರಂದು ಲಿಂಗಸಗೂರಿನಲ್ಲಿ ಪಾಂಚಜನ್ಯ ಮೊಳಗಿಸುವ ಮೂಲಕ ಆರಂಭವಾದ ಬಿಜೆಪಿಯ ಸಂಕಲ್ಪ ಯಾತ್ರೆ ಎರಡನೇ ದಿನ ಮಸ್ಕಿ ಕ್ಷೇತ್ರದ ತುಂಬ ಸಂಚರಿಸಿತು.

ಕೇವಲ ಮಸ್ಕಿ ಕ್ಷೇತ್ರದ ಜನರನ್ನು ಸೆಳೆಯುವುದು ಮಾತ್ರವಲ್ಲ, ನೆರೆಯ ಮಾನ್ವಿ, ಲಿಂಗಸಗೂರು, ಹುನಗುಂದ, ಬಾಗಲಕೋಟೆ, ಕುಷ್ಟಗಿ, ಸಿಂಧನೂರು ಸೇರಿ ಹಲವು ಕ್ಷೇತ್ರದ ಜನರನ್ನು ಸೆಳೆಯಿತು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆದ ಪಾದಯಾತ್ರೆ ಎರಡನೇ ದಿನದ ಜೋಶ್ ಸಾವಿರಾರು ಕಾರ್ಯಕರ್ತರನ್ನು ಕಾಲ್ನಡಿಗೆಯ ಹೆಜ್ಜೆ ಹಾಕುವಂತೆ ಮಾಡಿತು.

ಪಾದಯಾತ್ರೆಯ ಮಾರ್ಗದುದ್ದಕ್ಕೂ ಬಿಜೆಪಿ ಧ್ವಜ, ಬ್ಯಾನರ್, ಕಟೌಟ್‌ಗಳು ಹಾಗೂ ಕಾರ್ಯಕರ್ತರ ಘೋಷಣೆಗಳು ರಾಜಕೀಯ ವಾತಾವರಣಕ್ಕೆ ಕಾವು ನೀಡಿದವು.