SK Home Ad
Home ಸುದ್ದಿ ರಾಜ್ಯ ಹೊಸ ಅಧ್ಯಾಯವಲ್ಲ, ಬಿಜೆಪಿ ಹೊಸ ಯುಗ ಆರಂಭ: ವಿಜಯೇಂದ್ರ

ಹೊಸ ಅಧ್ಯಾಯವಲ್ಲ, ಬಿಜೆಪಿ ಹೊಸ ಯುಗ ಆರಂಭ: ವಿಜಯೇಂದ್ರ

0
151
File Photo

ರಾಯಚೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟಕ್ಕೆ ಹೊಸ ಆಯಾಮ ನೀಡಿದ್ದು, ಆರಂಭವಾಗಿರುವ ಪಾದಯಾತ್ರೆ ಕೇವಲ ಹತ್ತು ದಿನಗಳ ಕಾರ್ಯಕ್ರಮವಲ್ಲ; ಮುಂದಿನ ಒಂದೂವರೆ-ಎರಡು ವರ್ಷಗಳ ಕಾಲ ಸರ್ಕಾರದ ವೈಫಲ್ಯ ಮತ್ತು ಭ್ರಷ್ಟಾಚಾರವನ್ನು ಜನರ ಮುಂದಿಟ್ಟು ನಿರಂತರ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಘೋಷಿಸಿದರು.

ಲಿಂಗಸುಗೂರಿನಲ್ಲಿ ಪಾದಯಾತ್ರೆ ಆರಂಭಕ್ಕೂ ಮುನ್ನ ಸಮಾವೇಶದಲ್ಲಿ ಮಾತನಾಡಿ, `ಭ್ರಷ್ಟ, ಜನವಿರೋಧಿ, ದಲಿತ ವಿರೋಧಿ ಹಾಗೂ ಅಭಿವೃದ್ಧಿ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಿರ್ಣಾಯಕ ಹೋರಾಟ ಆರಂಭಿಸಿದೆ. ಈ ಸರ್ಕಾರವನ್ನು ಬುಡಸಮೇತ ಕಿತ್ತೊಗೆಯುವವರೆಗೆ ಹೋರಾಟ ನಿಲ್ಲುವುದಿಲ್ಲ’ ಎಂದು ಗುಡುಗಿದರು.

ಇದು ಕೇವಲ ಪಾದಯಾತ್ರೆಯಲ್ಲ. ಉತ್ತರ ಕರ್ನಾಟಕದ ನೆಲದಿಂದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ದೊಡ್ಡ ರಾಜಕೀಯ ಹೋರಾಟದ ಆರಂಭ ಎಂದು ವಿಜಯೇಂದ್ರ ಬಣ್ಣಿಸಿದರು.

`ಹತ್ತು ದಿನಗಳ ಕಾಲ ನಡೆಯುವ ಪಾದಯಾತ್ರೆಯಲ್ಲಿ ಪಕ್ಷದ ಪ್ರಮುಖ ನಾಯಕರು, ಉತ್ತರ ಕರ್ನಾಟಕದ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕರ್ತರಲ್ಲಿ ಅಪಾರ ಉತ್ಸಾಹವಿದ್ದು, ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲಾಗುವುದು. ಈ ಪಾದಯಾತ್ರೆ ಐತಿಹಾಸಿಕವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಹೋರಾಟದ ಪರಿಣಾಮವಾಗಿ ಒಬ್ಬ ಸಚಿವರು ರಾಜೀನಾಮೆ ನೀಡಬೇಕಾಯಿತು. ಇದು ನಮ್ಮ ಹೋರಾಟದ ಮೊದಲ ಹಂತದ ಪರಿಣಾಮ ಎಂದರು.

ಸಚಿವರ ರಾಜೀನಾಮೆಯಿಂದ ಬಿಜೆಪಿ ಹೋರಾಟ ಮುಗಿದಿಲ್ಲ. ಇದು ಇನ್ನೂ ದೊಡ್ಡ ರಾಜಕೀಯ ಸಮರದ ಆರಂಭ ಮಾತ್ರ. `ಬಿಜೆಪಿಗೆ ಹೊಸ ಅಧ್ಯಾಯವಲ್ಲ, ಹೊಸ ಯುಗ ಇಂದಿನಿಂದ ಆರಂಭವಾಗಲಿದೆ’ ಎಂದು ವಿಜಯೇಂದ್ರ ಘೋಷಿಸಿದರು.