ಹುಬ್ಬಳ್ಳಿ : ವಿಧಾನ ಪರಿಷತ್ತಿನ 5 ಸ್ಥಾನಗಳಿಗೆ ನಾಮನಿರ್ದೇಶನ ಮಾಡುವಾಗ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ರಾಜಕಾರಣಿಗಳು ಮತ್ತು ಅವರ ಹಿಂಬಾಲಕರ ಹೆಸರುಗಳನ್ನು ಶಿಫಾರಸು ಮಾಡಬಾರದು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಸಂವಿಧಾನದ 171ನೇ ವಿಧಿ ಪ್ರಕಾರ ಸಾಹಿತ್ಯ, ವಿಜ್ಞಾನ, ಕಲೆ, ಸಹಕಾರ ಚಳವಳಿ ಮತ್ತು ಸಮಾಜ ಸೇವೆ ಕ್ಷೇತ್ರಗಳಲ್ಲಿ ವಿಶೇಷ ಜ್ಞಾನ ಹಾಗೂ ಅನುಭವ ಹೊಂದಿರುವವರನ್ನು ಮಾತ್ರ ನಾಮನಿರ್ದೇಶನ ಮಾಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
1952ರಿಂದ ಇಲ್ಲಿಯವರೆಗೆ ಪರಿಷತ್ತಿಗೆ ನಾಮನಿರ್ದೇಶನಗೊಂಡ 123 ಮಹನೀಯರ ಪಟ್ಟಿಯನ್ನು ಪತ್ರದಲ್ಲಿ ಲಗತ್ತಿಸಿರುವ ಹೊರಟ್ಟಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಅನಂತನಾಗ್, ಡಾ. ಎಂ.ಸಿ. ಮೋದಿ, ಸಿದ್ಧಲಿಂಗಯ್ಯ, ಉಮಾಶ್ರೀ, ಜಗ್ಗೇಶ್, ಡಾ. ಜಯಮಾಲಾ ಅವರಂತಹವರು ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಮಾತ್ರ ನಾಮನಿರ್ದೇಶನ ಮಾಡುವ ಪರಂಪರೆ ಇದೆ ಎಂದು ಗಮನ ಸೆಳೆದಿದ್ದಾರೆ.
ಈ ಪರಂಪರೆಯನ್ನು ಕಡೆಗಣಿಸಿ ರಾಜಕಾರಣಿಗಳನ್ನು ನಾಮನಿರ್ದೇಶನ ಮಾಡಿದರೆ ಅದು ಸಂವಿಧಾನ ವಿರೋಧಿಯಾಗಲಿದ್ದು, ವಿಧಾನ ಪರಿಷತ್ತಿನ ಘನತೆ ಮತ್ತು ಗೌರವಕ್ಕೆ ಚ್ಯುತಿ ಬರುತ್ತದೆ. ಒಂದು ವೇಳೆ ಸರ್ಕಾರ ಇಂತಹವರನ್ನು ಶಿಫಾರಸು ಮಾಡಿದರೂ ರಾಜ್ಯಪಾಲರು ಅದನ್ನು ತಿರಸ್ಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.





















