ISTಗೆ ಮಹತ್ವ: ಡಿಜಿಟಲ್ ಭಾರತದಲ್ಲಿ ಸಮಯ ನಿಖರತೆಗೆ ಹೊಸ ಹೆಜ್ಜೆ – ಬ್ಯಾಂಕಿಂಗ್‌ನಿಂದ ರೈಲ್ವೆವರೆಗೆ ಭಾರತೀಯ ಪ್ರಮಾಣಿತ ಒಂದೇ ಸಮಯಕ್ಕೆ ಹೊಸ ನಿಯಮ
ನವದೆಹಲಿ: ದೇಶದಾದ್ಯಂತ ಅಧಿಕೃತ ಮತ್ತು ಸಮಯ ಆಧಾರಿತ ವ್ಯವಸ್ಥೆಗಳಲ್ಲಿ ಭಾರತೀಯ ಪ್ರಮಾಣಿತ ಸಮಯವನ್ನು (IST) ಸಾಮಾನ್ಯ ಸಮಯ ಉಲ್ಲೇಖವಾಗಿ ಬಳಸುವ ಉದ್ದೇಶದಿಂದ ಗ್ರಾಹಕ ವ್ಯವಹಾರಗಳ ಇಲಾಖೆ ಕಾನೂನು ಮಾಪನಶಾಸ್ತ್ರ (ಭಾರತೀಯ ಪ್ರಮಾಣಿತ ಸಮಯ) ನಿಯಮಗಳು, 2026 ಅನ್ನು ಅಧಿಸೂಚನೆ ಹೊರಡಿಸಿದೆ. ಆಗಸ್ಟ್ 27, 2026ರಂದು ಅಧಿಸೂಚನೆ ಹೊರಡಿಸಲಾಗಿದ್ದು, ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದ 180 ದಿನಗಳ ಬಳಿಕ ನಿಯಮಗಳು ಜಾರಿಗೆ ಬರಲಿವೆ.
ಕಾನೂನು, ಆಡಳಿತಾತ್ಮಕ, ವಾಣಿಜ್ಯ ಹಾಗೂ ಇತರ ಅಧಿಕೃತ ಉದ್ದೇಶಗಳಿಗೆ ದೇಶಾದ್ಯಂತ ಭಾರತೀಯ ಪ್ರಮಾಣಿತ ಸಮಯವನ್ನೇ ಸಾಮಾನ್ಯ ಸಮಯ ಉಲ್ಲೇಖವಾಗಿ ಬಳಸುವ ವ್ಯವಸ್ಥೆಯನ್ನು ಈ ನಿಯಮಗಳು ರೂಪಿಸಲಿವೆ. ನಿಯಮಗಳು ಜಾರಿಗೆ ಬರುವ ಮುನ್ನ ಸರ್ಕಾರಿ ಇಲಾಖೆಗಳು, ಉದ್ಯಮಗಳು, ಸಂಸ್ಥೆಗಳು ಮತ್ತು ಇತರ ಸಂಬಂಧಿತ ಸಂಸ್ಥೆಗಳು ತಮ್ಮ ವ್ಯವಸ್ಥೆಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಲು 180 ದಿನಗಳ ಕಾಲಾವಕಾಶ ನೀಡಲಾಗಿದೆ.
ಡಿಜಿಟಲ್ ತಂತ್ರಜ್ಞಾನ ಮತ್ತು ಸ್ವಯಂಚಾಲಿತ ವ್ಯವಸ್ಥೆಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಖರವಾದ ಸಮಯದ ಮಹತ್ವವೂ ಹೆಚ್ಚಾಗಿದೆ. ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿ, ದೂರಸಂಪರ್ಕ, ರೈಲ್ವೆ, ವಿದ್ಯುತ್ ಜಾಲ, ಕಂಪ್ಯೂಟರ್ ನೆಟ್‌ವರ್ಕ್‌ಗಳು ಹಾಗೂ ಸರ್ಕಾರಿ ದಾಖಲೆಗಳಂತಹ ಕ್ಷೇತ್ರಗಳಲ್ಲಿ ಪ್ರತಿಯೊಂದು ವ್ಯವಹಾರಕ್ಕೂ ನಿಖರವಾದ ಟೈಮ್‌ಸ್ಟ್ಯಾಂಪ್ ಅಗತ್ಯವಿದೆ. ವಿವಿಧ ಸಮಯ ಮೂಲಗಳ ನಡುವೆ ವ್ಯತ್ಯಾಸ ಉಂಟಾದರೆ ವಹಿವಾಟು, ದಾಖಲೆ ನಿರ್ವಹಣೆ ಮತ್ತು ವ್ಯವಸ್ಥೆಗಳ ಸಮನ್ವಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಹೀಗಾಗಿ ದೇಶದ ಪ್ರಮುಖ ವ್ಯವಸ್ಥೆಗಳು ನಿಖರ ಮತ್ತು ಏಕರೂಪವಾದ ಭಾರತೀಯ ಪ್ರಮಾಣಿತ ಸಮಯವನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳುವುದು ಹೊಸ ನಿಯಮಗಳ ಪ್ರಮುಖ ಉದ್ದೇಶವಾಗಿದೆ.
ಯಾವ ಕ್ಷೇತ್ರಗಳಿಗೆ ಅನುಕೂಲ? : ಹೊಸ ವ್ಯವಸ್ಥೆಯಿಂದ ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿ ವಹಿವಾಟುಗಳಿಗೆ ನಿಖರವಾದ ಸಮಯದ ಗುರುತು ಲಭ್ಯವಾಗಲಿದೆ. ರೈಲ್ವೆ, ವಿಮಾನ ನಿಲ್ದಾಣ ಸೇರಿದಂತೆ ವಿವಿಧ ಸಾರಿಗೆ ವ್ಯವಸ್ಥೆಗಳ ಸಮನ್ವಯ ಮತ್ತಷ್ಟು ಸುಧಾರಿಸಲಿದೆ. ದೂರಸಂಪರ್ಕ ಮತ್ತು ಇಂಟರ್ನೆಟ್ ಜಾಲಗಳ ಕಾರ್ಯಾಚರಣೆಯಲ್ಲೂ ಸಮಯದ ಏಕರೂಪತೆ ಸಹಕಾರಿಯಾಗಲಿದೆ.
ಇದರ ಜೊತೆಗೆ ವಿದ್ಯುತ್ ವ್ಯವಸ್ಥೆಗಳಲ್ಲಿ ಸಮಯದ ನಿಖರತೆ, ಸರ್ಕಾರಿ ಹಾಗೂ ಕಾನೂನು ದಾಖಲೆಗಳ ನಿರ್ವಹಣೆ ಮತ್ತು ತುರ್ತು ಸೇವೆಗಳಂತಹ ಸಮಯ-ಸೂಕ್ಷ್ಮ ಚಟುವಟಿಕೆಗಳ ಸಮನ್ವಯಕ್ಕೂ ಇದು ನೆರವಾಗಲಿದೆ.
ಭಾರತೀಯ ಸಮಯ ಮೂಲಗಳಿಗೆ ಒತ್ತು : ದೇಶಾದ್ಯಂತ ನಿಖರವಾದ ಭಾರತೀಯ ಪ್ರಮಾಣಿತ ಸಮಯವನ್ನು ಪ್ರಸಾರ ಮಾಡಲು ಭಾರತೀಯ ಸಂಸ್ಥೆಗಳು ಮತ್ತು ಕಾನೂನು ಮಾಪನಶಾಸ್ತ್ರ ಪ್ರಯೋಗಾಲಯಗಳ ಮೂಲಕ ಸಮಯ ಪ್ರಸರಣ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ವಿಶ್ವಾಸಾರ್ಹ ಮತ್ತು ಸುರಕ್ಷಿತ ಸಮಯ ಪ್ರಸರಣಕ್ಕಾಗಿ ಭಾರತದ ಉಪಗ್ರಹ ನ್ಯಾವಿಗೇಷನ್ ವ್ಯವಸ್ಥೆಯಾದ NavIC ಸೇರಿದಂತೆ ಅನುಮೋದಿತ ಭಾರತೀಯ ಸಮಯ ಮೂಲಗಳ ಬಳಕೆಗೆ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.
ಪ್ರಸ್ತುತ ಹಲವು ಡಿಜಿಟಲ್ ಹಾಗೂ ತಾಂತ್ರಿಕ ವ್ಯವಸ್ಥೆಗಳು ವಿದೇಶಿ ಉಪಗ್ರಹ ಆಧಾರಿತ ಸಮಯ ಮೂಲಗಳನ್ನೂ ಅವಲಂಬಿಸಿವೆ. ಭಾರತೀಯ ಸಮಯ ಪ್ರಸರಣ ವ್ಯವಸ್ಥೆಯನ್ನು ಬಲಪಡಿಸುವುದರಿಂದ ದೇಶದ ಪ್ರಮುಖ ಮತ್ತು ಸೂಕ್ಷ್ಮ ವ್ಯವಸ್ಥೆಗಳಿಗೆ ಸ್ಥಳೀಯ ಹಾಗೂ ವಿಶ್ವಾಸಾರ್ಹ ಸಮಯ ಮೂಲ ಲಭ್ಯವಾಗಲಿದೆ. ಇದರಿಂದ ಬಾಹ್ಯ ಸಮಯ ಮೂಲಗಳ ಮೇಲಿನ ಅವಲಂಬನೆಯನ್ನೂ ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ.
‘ಒಂದು ರಾಷ್ಟ್ರ, ಒಂದು ಕಾಲ’ ಉಪಕ್ರಮ : ‘ಒಂದು ರಾಷ್ಟ್ರ, ಒಂದು ಕಾಲ’ ಉಪಕ್ರಮದ ಭಾಗವಾಗಿ ಬೆಂಗಳೂರಿನ ಪ್ರಾದೇಶಿಕ ಉಲ್ಲೇಖ ಪ್ರಮಾಣಿತ ಪ್ರಯೋಗಾಲಯ (RRSL)ದಲ್ಲಿ ಜುಲೈ 2026ರಲ್ಲಿ ‘ವೈಟ್ ರ್ಯಾಬಿಟ್’ ತಂತ್ರಜ್ಞಾನ ಆಧಾರಿತ ಭಾರತೀಯ ಪ್ರಮಾಣಿತ ಸಮಯ ಪ್ರಸರಣ ಪ್ರದರ್ಶನ ಜಾಲವನ್ನು ನಿಯೋಜಿಸಲಾಗಿದೆ.
ಈ ವ್ಯವಸ್ಥೆಯ ಮೂಲಕ ಬ್ಯಾಂಕಿಂಗ್, ದೂರಸಂಪರ್ಕ, ವಿದ್ಯುತ್, ಸಾರಿಗೆ ಮತ್ತು ಡಿಜಿಟಲ್ ಆಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಭಾರತೀಯ ಪ್ರಮಾಣಿತ ಸಮಯವನ್ನು ಪ್ರಸಾರ ಮಾಡುವ ಸಾಮರ್ಥ್ಯವನ್ನು ಪ್ರದರ್ಶಿಸಲಾಗಿದೆ. ಅಲ್ಲದೆ RRSL ಬೆಂಗಳೂರು ಮತ್ತು NSE ಚೆನ್ನೈ ನಡುವೆ ಸುರಕ್ಷಿತವಾಗಿ IST ಪ್ರಸರಣ ಮಾಡುವ ವ್ಯವಸ್ಥೆಯನ್ನೂ ಪ್ರದರ್ಶಿಸಲಾಗಿದೆ.
ಈ ಕಾರ್ಯದಲ್ಲಿ CSIR-NPL, ISRO, SEBI, NSE, BSNL ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳು ಸಹಭಾಗಿತ್ವ ವಹಿಸಿವೆ.
180 ದಿನಗಳ ಕಾಲಾವಕಾಶ : ಹೊಸ ನಿಯಮಗಳು ತಕ್ಷಣವೇ ಜಾರಿಗೆ ಬರುವುದಿಲ್ಲ. ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದ 180 ದಿನಗಳ ಅವಧಿ ಪೂರ್ಣಗೊಂಡ ಬಳಿಕ ಅವು ಜಾರಿಗೆ ಬರಲಿವೆ. ಈ ಅವಧಿಯಲ್ಲಿ ಸರ್ಕಾರಿ ಸಂಸ್ಥೆಗಳು, ಉದ್ಯಮಗಳು, ಬ್ಯಾಂಕ್‌ಗಳು, ತಾಂತ್ರಿಕ ಸಂಸ್ಥೆಗಳು ಮತ್ತು ಇತರ ಸಂಬಂಧಿತ ವಲಯಗಳು ತಮ್ಮ ಅಸ್ತಿತ್ವದಲ್ಲಿರುವ ಸಮಯ ವ್ಯವಸ್ಥೆಗಳನ್ನು ಪರಿಶೀಲಿಸಿ ಅಗತ್ಯ ತಾಂತ್ರಿಕ ಬದಲಾವಣೆಗಳನ್ನು ಮಾಡಿಕೊಳ್ಳಬಹುದು.
ಒಟ್ಟಿನಲ್ಲಿ, ಡಿಜಿಟಲ್ ಹಾಗೂ ಸಮಯ-ಅವಲಂಬಿತ ವ್ಯವಸ್ಥೆಗಳು ವೇಗವಾಗಿ ವಿಸ್ತರಿಸುತ್ತಿರುವ ಸಂದರ್ಭದಲ್ಲಿ ದೇಶಾದ್ಯಂತ ಒಂದೇ ಅಧಿಕೃತ ಸಮಯ ಉಲ್ಲೇಖವನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ ಕಾನೂನು ಮಾಪನಶಾಸ್ತ್ರ (ಭಾರತೀಯ ಪ್ರಮಾಣಿತ ಸಮಯ) ನಿಯಮಗಳು, 2026 ಗಮನ ಸೆಳೆದಿವೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.




















