SK Home Ad
Home ಸುದ್ದಿ ರಾಜ್ಯ ನಮಗೆ ನ್ಯಾಯ ಯಾವಾಗ?: ಸಚಿವರ ರಾಜೀನಾಮೆ ನಡುವೆ ಚಂದ್ರಶೇಖರ್ ಪತ್ನಿಯ ಪ್ರಶ್ನೆ

ನಮಗೆ ನ್ಯಾಯ ಯಾವಾಗ?: ಸಚಿವರ ರಾಜೀನಾಮೆ ನಡುವೆ ಚಂದ್ರಶೇಖರ್ ಪತ್ನಿಯ ಪ್ರಶ್ನೆ

0
99

ಶಿವಮೊಗ್ಗ: ‘ಇಂದು ಸಚಿವರಾಗುತ್ತಾರೆ, ನಾಳೆ ರಾಜೀನಾಮೆ ಕೊಡುತ್ತಾರೆ. ಮತ್ತೆ ಅಧಿಕಾರಕ್ಕೆ ಬರುತ್ತಾರೆ. ಬಿ.ನಾಗೇಂದ್ರ ಅವರು ಮತ್ತೊಮ್ಮೆ ಸಚಿವರಾದಾಗಲಾದರೂ ನಮಗೆ ನ್ಯಾಯ ಸಿಗಬಹುದು ಎಂಬ ಸಣ್ಣ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆಯೂ ಹುಸಿಯಾಗಿದೆ’ ಎಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ದಿವಂಗತ ಚಂದ್ರಶೇಖರ್ ಅವರ ಪತ್ನಿ ಕವಿತಾ ಕಣ್ಣೀರಿನಿಂದ ನೋವು ತೋಡಿಕೊಂಡಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾಗೇಂದ್ರ ಅವರ ರಾಜೀನಾಮೆ ಬಗ್ಗೆ ನಾನೇನು ಹೆಚ್ಚಿಗೆ ಹೇಳುವುದಿಲ್ಲ. ಆದರೆ ನನ್ನ ಪತಿ ಮೃತಪಟ್ಟ ಬಳಿಕ ನಮ್ಮ ಕುಟುಂಬಕ್ಕೆ ಸಿಗಬೇಕಾಗಿದ್ದ ಕಾನೂನುಬದ್ಧ ಪರಿಹಾರಕ್ಕಾಗಿ ನಾವು ಇನ್ನೂ ಅಲೆದಾಡುತ್ತಿದ್ದೇವೆ. ಬೆಂಗಳೂರಿಗೆ ಎಷ್ಟೋ ಬಾರಿ ಹೋಗಿ ಬಂದಿದ್ದೇವೆ. ಅಧಿಕಾರಿಗಳ ಕಚೇರಿಗಳ ಬಾಗಿಲು ತಟ್ಟಿದ್ದೇವೆ. ಆದರೂ ನಮ್ಮ ನೋವನ್ನು ಕೇಳುವವರು ಯಾರೂ ಇಲ್ಲ’ ಎಂದು ಅಳಲು ತೋಡಿಕೊಂಡರು.

‘ನಾಗೇಂದ್ರ ಅವರು ಮತ್ತೆ ಸಚಿವರಾಗುತ್ತಾರೆ ಎಂದಾಗ, ಬಹುಶಃ ಈಗಲಾದರೂ ನಮ್ಮ ಸಮಸ್ಯೆ ಬಗೆಹರಿಯಬಹುದು ಎಂದುಕೊಂಡಿದ್ದೆವು. ಆದರೆ ಅದು ಕೂಡ ಆಗಲಿಲ್ಲ. ಅವರ ರಾಜೀನಾಮೆ ನಮಗೆ ಸಮಾಧಾನವನ್ನೂ ತಂದಿಲ್ಲ, ಸಂತೋಷವನ್ನೂ ತಂದಿಲ್ಲ. ಏಕೆಂದರೆ ನಮಗೆ ಬೇಕಾಗಿರುವುದು ರಾಜಕೀಯವಲ್ಲ, ನಮ್ಮ ಕುಟುಂಬಕ್ಕೆ ಸಿಗಬೇಕಾದ ನ್ಯಾಯ ಮತ್ತು ಪರಿಹಾರ’ ಎಂದು ಕವಿತಾ ಹೇಳಿದರು.

‘ನನ್ನ ಪತಿಯ ಸಾವು ರಾಜಕೀಯ ಪಕ್ಷಕ್ಕೆ ಲಾಭವಾಗಿದೆ. ಆದರೆ ಆ ಸಾವಿನಿಂದ ನಮ್ಮ ಕುಟುಂಬಕ್ಕೆ ಏನು ಸಿಕ್ಕಿದೆ? ಇಂದಿಗೂ ನಮ್ಮ ಬದುಕು ಅದೇ ನೋವಿನಲ್ಲಿದೆ. ನಾಗೇಂದ್ರ ಅವರು ಮತ್ತೆ ಸಚಿವರಾಗುವ ಮೊದಲು ನಮ್ಮ ಸಮಸ್ಯೆ ಬಗೆಹರಿಸಬಹುದಿತ್ತು. ನಮ್ಮ ಕುಟುಂಬಕ್ಕೆ ಸಿಗಬೇಕಾದ ಪರಿಹಾರ ಕೊಡಿಸಿ, ಬಳಿಕ ಅವರು ಅಧಿಕಾರ ಸ್ವೀಕರಿಸಿದ್ದರೆ ನಮಗೂ ನೆಮ್ಮದಿ ಸಿಗುತ್ತಿತ್ತು’ ಎಂದು ಬೇಸರ ವ್ಯಕ್ತಪಡಿಸಿದರು.

ಚಂದ್ರಶೇಖರ್ ಅವರ ಪಿಎಫ್ ಹಣ, ಗ್ರ್ಯಾಚುಟಿ ಸೇರಿದಂತೆ ಕುಟುಂಬಕ್ಕೆ ಬರಬೇಕಾದ ಹಲವು ಮೊತ್ತಗಳು ಇನ್ನೂ ಬಂದಿಲ್ಲ. ಪತಿಯ ಅಗಲಿಕೆಯ ಬಳಿಕ ಕುಟುಂಬದ ಜವಾಬ್ದಾರಿ ಸಂಪೂರ್ಣವಾಗಿ ತಮ್ಮ ಹೆಗಲ ಮೇಲೆ ಬಿದ್ದಿದ್ದು, ಮಕ್ಕಳ ಭವಿಷ್ಯದ ಬಗ್ಗೆಯೂ ಆತಂಕ ಎದುರಾಗಿದೆ ಎಂದು ಕವಿತಾ ಹೇಳಿದರು.

‘ನನ್ನ ಮಗನಿಗೆ ಒಳ್ಳೆಯ ಕೆಲಸ ಸಿಗಬಹುದು, ನಮ್ಮ ಕುಟುಂಬಕ್ಕೆ ಒಂದು ಆಸರೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ ಮಗನಿಗೆ ವಾಚ್‌ಮನ್ ಕೆಲಸ ನೀಡಲಾಗಿದೆ. ಒಬ್ಬ ತಂದೆಯನ್ನು ಕಳೆದುಕೊಂಡ ಕುಟುಂಬಕ್ಕೆ ಇದೇನಾ ಸಿಗಬೇಕಾದ ನ್ಯಾಯ?’ ಎಂದು ಅವರು ನೋವಿನಿಂದ ಪ್ರಶ್ನಿಸಿದರು.

‘ಪತಿಯನ್ನು ಕಳೆದುಕೊಂಡ ನೋವು ಒಂದೆಡೆ, ಅವರ ಸಾವಿನ ಬಳಿಕವೂ ನ್ಯಾಯಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆಯಬೇಕಾದ ಪರಿಸ್ಥಿತಿ ಮತ್ತೊಂದೆಡೆ. ನಮ್ಮ ಕುಟುಂಬಕ್ಕೆ ಆಗಿರುವ ಅನ್ಯಾಯವನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಸರ್ಕಾರವಾದರೂ ನಮ್ಮ ಕಣ್ಣೀರನ್ನು ಗಮನಿಸಲಿ’ ಎಂದು ಕವಿತಾ ಮನವಿ ಮಾಡಿದರು.

‘ನಮಗೆ ಯಾರ ಮೇಲೂ ದ್ವೇಷವಿಲ್ಲ. ರಾಜಕೀಯವೂ ಬೇಡ. ನಮ್ಮ ಕುಟುಂಬಕ್ಕೆ ಕಾನೂನುಬದ್ಧವಾಗಿ ಸಿಗಬೇಕಾದ ಹಣ, ನನ್ನ ಮಕ್ಕಳ ಭವಿಷ್ಯಕ್ಕೆ ಭದ್ರತೆ ಮತ್ತು ನಮ್ಮ ನೋವಿಗೆ ನ್ಯಾಯ ಬೇಕಷ್ಟೇ. ಪತಿಯನ್ನು ಕಳೆದುಕೊಂಡು ಈಗಾಗಲೇ ಸಾಕಷ್ಟು ನೋವು ಅನುಭವಿಸಿದ್ದೇವೆ. ಇನ್ನಾದರೂ ಸರ್ಕಾರ ನಮ್ಮ ನೋವಿಗೆ ಸ್ಪಂದಿಸಿ ಸಮಸ್ಯೆ ಬಗೆಹರಿಸಬೇಕು’ ಎಂದು ಅವರು ಆಗ್ರಹಿಸಿದರು.