SK Home Ad
Home ಸಂದರ್ಶನ ಹೊರಟ್ಟಿ ರಾಜೀನಾಮೆಗೂ ಮುನ್ನ ಏನಾಯ್ತು?

ಹೊರಟ್ಟಿ ರಾಜೀನಾಮೆಗೂ ಮುನ್ನ ಏನಾಯ್ತು?

0
58

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನದಿಂದ ತಮ್ಮನ್ನು ಕೆಳಗಿಳಿಸಲು ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಹಲವು ಬಾರಿ ಒತ್ತಡ ಹೇರಿದರು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಸಭಾಪತಿ ಸ್ಥಾನದಲ್ಲಿ ತಮ್ಮ ಅವಧಿ ಪೂರ್ಣಗೊಳಿಸಲು ಅವಕಾಶ ನೀಡದೆ ರಾಜೀನಾಮೆ ಪಡೆಯಲಾಯಿತು. ಈ ಬೆಳವಣಿಗೆಯಿಂದ ತಮಗೆ ನೋವಾಗಿದೆ. ಆದರೆ ಎಲ್ಲವನ್ನೂ ಮರೆತು ಮುಂದಿನ ರಾಜಕೀಯ ಜೀವನದತ್ತ ಹೆಜ್ಜೆ ಇಡುತ್ತೇನೆ ಎಂದು ಅವರು ಹೇಳಿದ್ದಾರೆ.

ಪ್ರಶ್ನೆ: ಸಭಾಪತಿ ಸ್ಥಾನಕ್ಕೆ ನಿಮ್ಮ ರಾಜೀನಾಮೆ ನೀಡಲು ನಿಜವಾಗಿಯೂ ಒತ್ತಡವಿತ್ತೇ?
ಹೊರಟ್ಟಿ: ಹೌದು. ಜುಲೈ 21ರಂದು ರಾತ್ರಿ 11.30ರ ಸುಮಾರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಫೋನ್‌‌ ಮಾಡಿ ಮಾತನಾಡಿದರು. ಆಗ ಮುಖ್ಯಮಂತ್ರಿಗಳು, ‘ನೀವು ನಾಳೆ ಬಂದು ರಾಜೀನಾಮೆ ಕೊಡಿ’ ಎಂದು ಹೇಳಿದರು. ನಾನು ಆ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದೆ. ಆರೋಗ್ಯದ ಸಮಸ್ಯೆಯೂ ಇತ್ತು. ಆದರೂ ಮುಖ್ಯಮಂತ್ರಿಗಳು ರಾಜೀನಾಮೆ ನೀಡುವಂತೆ ಸೂಚಿಸಿದರು.

ಆಗ ‘ಆಯ್ತು ಸರ್’ ಎಂದು ಹೇಳಿದ್ದೆ. ನಂತರ ಆಗಸ್ಟ್ 3ರಂದು ಮತ್ತೆ ರಾಜೀನಾಮೆ ನೀಡುವಂತೆ ತಿಳಿಸಿದರು. ಆಗಲೂ ನಾನು ರಾಜೀನಾಮೆ ನೀಡಲಿಲ್ಲ.

ಪ್ರಶ್ನೆ: ನಂತರ ರಾಜೀನಾಮೆ ನೀಡುವ ವಿಚಾರದಲ್ಲಿ ಏನಾಯಿತು?
ಹೊರಟ್ಟಿ:
ಮತ್ತೆ ನನಗೆ ಫೋನ್ ಮಾಡಿ ರಾಜೀನಾಮೆ ನೀಡುವ ವಿಚಾರ ಕೇಳಿದರು. ನಾನು ‘ವಿಚಾರ ಮಾಡುತ್ತೇನೆ’ ಎಂದು ಹೇಳಿದೆ. ರಾಜೀನಾಮೆ ನೀಡಲು ಕಾರಣ ಬೇಕಲ್ಲವೇ ಎಂದು ಕೇಳಿದೆ. ಆಗ ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ, ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಮಾತನಾಡಲಾಯಿತು.

ನಂತರ ಸೆಷನ್ ಆಗಸ್ಟ್ 13ರಂದು ಆರಂಭವಾಗಲಿದ್ದು, ಆಗಸ್ಟ್ 14ರಂದು ಉಪಸಭಾಪತಿ ಚುನಾವಣೆ ನಡೆಸಿ ಅವರಿಗೆ ಅಧಿಕಾರ ಹಸ್ತಾಂತರಿಸಬೇಕು. ಬಳಿಕ ನಾನು ರಾಜೀನಾಮೆ ನೀಡಿ, ವಿದಾಯ ಭಾಷಣ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದಿದ್ದೆವು.

ಪ್ರಶ್ನೆ: ಆದರೆ ಆಗಸ್ಟ್ 7ರಂದು ಏಕಾಏಕಿ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಏಕೆ ಎದುರಾಯಿತು?
ಹೊರಟ್ಟಿ
: ಆಗಸ್ಟ್ 7ರಂದು ಒಂದು ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಅಲ್ಲಿ ಮುಖ್ಯಮಂತ್ರಿ ಸೇರಿದಂತೆ ಸುಮಾರು 20 ಮಂದಿ ನನ್ನ ಬಳಿ ಬಂದು, ‘ಇವತ್ತೇ ರಾಜೀನಾಮೆ ಕೊಡಿ’ ಎಂದು ಹೇಳಿದರು. ನಾನು, ‘ನಾವು ಆಗಸ್ಟ್ 14ರಂದು ರಾಜೀನಾಮೆ ನೀಡುವ ಬಗ್ಗೆ ಮಾತನಾಡಿದ್ದೇವೆ. ಕೊಟ್ಟ ಮಾತಿನಿಂದ ಹಿಂದೆ ಸರಿಯುವುದಿಲ್ಲ. ಖಂಡಿತವಾಗಿಯೂ ರಾಜೀನಾಮೆ ನೀಡುತ್ತೇನೆ’ ಎಂದು ಹೇಳಿದೆ.

ಆದರೆ ಅವರು, ‘ಇವತ್ತೇ ಕೊಡಬೇಕು’ ಎಂದು ಒತ್ತಾಯಿಸಿದರು. ಬಳಿಕ ನನ್ನ ಪಿಎಸ್‌ ಅವರನ್ನು ಕರೆಸಿ ರಾಜೀನಾಮೆ ಪತ್ರವನ್ನು ಟೈಪ್ ಮಾಡಿಸಿ ತಂದರು. ಸುಮಾರು ಒಂದೂವರೆ ಗಂಟೆ ಕಾಲ ಅಲ್ಲಿಯೇ ಕುಳಿತುಕೊಂಡ ನಂತರ ಅನಿವಾರ್ಯವಾಗಿ ರಾಜೀನಾಮೆ ಪತ್ರಕ್ಕೆ ಸಹಿ ಮಾಡಿ ನೀಡಬೇಕಾಯಿತು.

ಪ್ರಶ್ನೆ: ಮುಖ್ಯಮಂತ್ರಿ ನಿವಾಸಕ್ಕೆ ನೀವು ಏಕಾಏಕಿ ತೆರಳಿದ್ದೇಕೆ?
ಹೊರಟ್ಟಿ:
ಆಗಸ್ಟ್ 7ರಂದು ನಾನು ಮುಖ್ಯಮಂತ್ರಿಗೆ ಫೋನ್ ಮಾಡಿ ಮಾತನಾಡಿದ್ದೆ. ಅವರು ಮನೆಗೆ ಬರುವಂತೆ ಹೇಳಿದರು. ‘ಬಂದು ಹೋಗಿ, ಕುಳಿತುಕೊಂಡು ಮಾತನಾಡೋಣ’ ಎಂದರು. ಸ್ವಲ್ಪ ಸಮಯದ ಬಳಿಕ ಜಾರಕಿಹೊಳಿ, ಜಮೀರ್ ಅಹಮದ್ ಖಾನ್, ಬಾಲಕೃಷ್ಣ ಸೇರಿದಂತೆ ಕೆಲವರು ಅಲ್ಲಿಗೆ ಬಂದಿದ್ದರು. ಅವರು ಸ್ನೇಹಿತರಾಗಿದ್ದರಿಂದ ಕಾಫಿ ಕುಡಿದು ಹೋಗೋಣ ಎಂದು ಕರೆದರು. ಅದಕ್ಕಾಗಿ ನಾನು ಹೋಗಿದ್ದೆ.

ಸಭಾಪತಿ ಸ್ಥಾನದಲ್ಲಿದ್ದವರು ಮುಖ್ಯಮಂತ್ರಿ ಮನೆಗೆ ಹೋಗಬಾರದು ಎಂಬ ಯಾವುದೇ ಉದ್ದೇಶ ನನಗಿರಲಿಲ್ಲ. ಸಾಮಾನ್ಯವಾಗಿ ಸ್ನೇಹಿತರ ಭೇಟಿಗಾಗಿ ಹೋಗಿದ್ದೆ. ಆದರೆ ನಂತರ ಈ ವಿಚಾರ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಯಿತು.

ಪ್ರಶ್ನೆ: ಅಲ್ಲಿ ನಿಮಗೆ ರಾಜೀನಾಮೆ ನೀಡುವಂತೆ ಒತ್ತಡ ಹೇರಲಾಯಿತೇ?
ಹೊರಟ್ಟಿ:
ಹೌದು. ಅಲ್ಲಿ ಸುಮಾರು 12.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಚರ್ಚೆ ನಡೆಯಿತು. ಮುಖ್ಯಮಂತ್ರಿ ಸೇರಿದಂತೆ ಹಲವು ನಾಯಕರು ಇದ್ದರು. ಜಾರಕಿಹೊಳಿ ಅವರು ಕೂಡ ‘ಹೊರಟ್ಟಿ ಅವರಂತಹವರನ್ನು ಮುಂದುವರಿಸಬೇಕು’ ಎಂದು ಹೇಳಿದ್ದರು.

ಆದರೆ ಪರಿಸ್ಥಿತಿ ಬೇರೆಯದೇ ಆಗಿತ್ತು. ಕೊನೆಗೆ ರಾಜೀನಾಮೆ ನೀಡಬೇಕಾಯಿತು.

ಪ್ರಶ್ನೆ: ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿದ್ದು ಯಾರು?
ಹೊರಟ್ಟಿ:
ರಾಜೀನಾಮೆ ಪತ್ರವನ್ನು ಟೈಪ್ ಮಾಡಿಸಿ ನನ್ನ ಬಳಿ ತಂದಿದ್ದರು. ಮುಖ್ಯಮಂತ್ರಿಗಳ ಪಿಎಸ್‌ ಕಡೆಯಿಂದ ಪತ್ರವನ್ನು ತಂದುಕೊಡಲಾಗಿತ್ತು. ನಾನು ಪತ್ರ ಬರೆದು ಕೊಟ್ಟಿದ್ದೆ. ಅದರಲ್ಲಿ ದಿನಾಂಕದ ವಿಚಾರದಲ್ಲೂ ಗೊಂದಲವಿತ್ತು. ಪತ್ರದಲ್ಲಿ ತಿಂಗಳು ನಮೂದಿಸಲಾಗಿತ್ತು; ದಿನಾಂಕವನ್ನು ನಂತರ ನಾನೇ ಹಾಕಿ ಕೊಟ್ಟಿದ್ದೇನೆ.

ಪ್ರಶ್ನೆ: ಹೊಸ ಸಭಾಪತಿ ಆಯ್ಕೆಯಲ್ಲಿ ಸರ್ಕಾರ ಏನಾದರೂ ಎಡವಿದೆಯೇ?
ಹೊರಟ್ಟಿ:
ಹೊಸ ಸಭಾಪತಿ ಆಯ್ಕೆ ಬಗ್ಗೆ ನಾನು ಯಾವುದೇ ಟೀಕೆ ಮಾಡಲು ಹೋಗುವುದಿಲ್ಲ. ಆದರೆ ನನ್ನ ಕಾರ್ಯವೈಖರಿಯನ್ನು ವಿಧಾನಪರಿಷತ್‌ನ ಬಹುತೇಕ ಸದಸ್ಯರು ಪಕ್ಷಾತೀತವಾಗಿ ಮೆಚ್ಚಿಕೊಂಡಿದ್ದಾರೆ. ಇಂದಿಗೂ ಹಲವರು ನನ್ನನ್ನು ಭೇಟಿ ಮಾಡಿ ಮಾತನಾಡುತ್ತಾರೆ.

ಸಭಾಪತಿಯಾಗಿ ಸದನವನ್ನು ನಡೆಸುವಾಗ ನಾನು ಯಾವುದೇ ಪಕ್ಷಪಾತ ಮಾಡಿಲ್ಲ. ಸರ್ಕಾರದ ಪರವೂ ಆಗಿರಲಿಲ್ಲ, ವಿರೋಧ ಪಕ್ಷದ ಪರವೂ ಆಗಿರಲಿಲ್ಲ. ಎಲ್ಲರಿಗೂ ಸಮಾನ ಅವಕಾಶ ನೀಡಲು ಪ್ರಯತ್ನಿಸಿದ್ದೇನೆ. ಇದನ್ನು ಸಿದ್ದರಾಮಯ್ಯನವರು ಕೂಡ ಹೇಳಿದ್ದಾರೆ.

ಪ್ರಶ್ನೆ: ನಿಮ್ಮ ಅವಧಿಯಲ್ಲಿ ಸದನವನ್ನು ಹೇಗೆ ನಡೆಸಿದ್ದೇನೆ ಎಂದು ನೀವು ಭಾವಿಸುತ್ತೀರಿ?
ಹೊರಟ್ಟಿ
: ನನ್ನ ಅವಧಿಯಲ್ಲಿ ಸುಮಾರು ಶೇ. 95ರಷ್ಟು ಸದನವನ್ನು ಅತ್ಯಂತ ಸಮರ್ಪಕವಾಗಿ ನಡೆಸಿದ್ದೇನೆ ಎಂಬ ತೃಪ್ತಿ ಇದೆ. ಉಳಿದ ಶೇ.5ರಷ್ಟು ಅವಧಿಯಲ್ಲಿ ನಡೆದ ಗಲಾಟೆ, ಗದ್ದಲಗಳು ನನ್ನ ನಿಯಂತ್ರಣಕ್ಕೂ ಮೀರಿದವು.

ಸದನದ ಗೌರವ ಮತ್ತು ಘನತೆ ಕಾಪಾಡಬೇಕು ಎಂಬುದು ನನ್ನ ಮುಖ್ಯ ಉದ್ದೇಶವಾಗಿತ್ತು. ಹಿಂದಿನ ಸಭಾಪತಿಗಳೂ ಸದನವನ್ನು ಗಟ್ಟಿಯಾಗಿ ನಡೆಸಿದ್ದಾರೆ. ಕೆಲವೊಮ್ಮೆ ಸದಸ್ಯರ ಮೇಲೆ ಕೋಪಗೊಂಡು ಕಠಿಣವಾಗಿ ಮಾತನಾಡಿರುವ ಸಂದರ್ಭಗಳೂ ಇವೆ. ಆದರೆ ಅದನ್ನು ಯಾರೂ ವೈಯಕ್ತಿಕವಾಗಿ ತೆಗೆದುಕೊಂಡಿಲ್ಲ.

ಪ್ರಶ್ನೆ: ಇತ್ತೀಚಿನ ದಿನಗಳಲ್ಲಿ ವಿಧಾನಪರಿಷತ್‌ನ ಘನತೆ ಕಡಿಮೆಯಾಗುತ್ತಿದೆ ಎಂಬ ಭಾವನೆ ಇದೆಯೇ?
ಹೊರಟ್ಟಿ:
ಹೌದು. ವಿಧಾನಪರಿಷತ್‌ನ ಘನತೆ ಕಡಿಮೆಯಾಗುತ್ತಿರುವುದು ನಿಜ. ಇತ್ತೀಚೆಗೆ ರವಿ ಸೇರಿದಂತೆ ಹಲವರು ಮಾತನಾಡಿರುವ ವಿಚಾರಗಳಲ್ಲೂ ಇದು ವ್ಯಕ್ತವಾಗಿದೆ.
ಇಂದು ಶಿಕ್ಷಕರ ಕ್ಷೇತ್ರ, ಪದವೀಧರ ಕ್ಷೇತ್ರ ಸೇರಿದಂತೆ ಚುನಾವಣೆಯಲ್ಲಿ ಹಣದ ಪ್ರಭಾವ ಹೆಚ್ಚಾಗಿದೆ. ಹಣ ಕೊಟ್ಟು ಮತ ಪಡೆಯುವ ಪರಿಸ್ಥಿತಿ ಬಂದಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ.

ಪ್ರಶ್ನೆ: ವಿಧಾನಪರಿಷತ್ ಚುನಾವಣೆಯಲ್ಲೂ ಹಣದ ಪ್ರಭಾವ ಹೆಚ್ಚಾಗಿದೆ ಎಂದು ಹೇಳುತ್ತಿದ್ದೀರಾ?
ಹೊರಟ್ಟಿ:
ಖಂಡಿತವಾಗಿಯೂ. ಶಿಕ್ಷಕರ ಕ್ಷೇತ್ರದಲ್ಲೂ ಹಣದ ಪ್ರಭಾವ ಕಂಡುಬರುತ್ತಿದೆ. ಪದವೀಧರ ಕ್ಷೇತ್ರದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಅಭ್ಯರ್ಥಿಗಳು ಹಣ ಖರ್ಚು ಮಾಡಿ ಮತ ಪಡೆಯುವ ಸ್ಥಿತಿ ಬಂದಿದೆ.

ಒಂದು ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ₹10 ಸಾವಿರ, ಮತ್ತೊಬ್ಬರು ₹7 ಸಾವಿರ, ಇನ್ನೊಬ್ಬರು ₹5 ಸಾವಿರದವರೆಗೆ ಮತದಾರರಿಗೆ ಹಣ ನೀಡಿದ ಉದಾಹರಣೆಗಳಿವೆ. ಇಂತಹ ಪರಿಸ್ಥಿತಿ ಮುಂದುವರಿದರೆ ಚುನಾವಣೆಗಳ ಅರ್ಥವೇ ಕಳೆದುಹೋಗುತ್ತದೆ.

ಜಾತಿ, ಹಣ ಹಾಗೂ ಇತರ ಪ್ರಭಾವಗಳು ಅಭ್ಯರ್ಥಿಯ ಅರ್ಹತೆ, ಸಾಮರ್ಥ್ಯ ಮತ್ತು ವಿಚಾರಧಾರೆಗಿಂತ ಮುಖ್ಯವಾಗುತ್ತಿರುವುದು ವಿಷಾದನೀಯ.

ಪ್ರಶ್ನೆ: ಮುಂದಿನ ದಿನಗಳಲ್ಲಿ ಹಣದ ಪ್ರಭಾವವಿಲ್ಲದೆ ವಿಧಾನಪರಿಷತ್ ಚುನಾವಣೆ ನಡೆಯಲು ಸಾಧ್ಯವೇ?
ಹೊರಟ್ಟಿ:
ಇಂದಿನ ಪರಿಸ್ಥಿತಿಯಲ್ಲಿ ಅದು ಬಹಳ ಕಷ್ಟವಾಗಿದೆ. ಹಣ ಖರ್ಚು ಮಾಡುವವರು ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಈ ಪರಿಸ್ಥಿತಿ ಬದಲಾಗಬೇಕು.

ನಾವು ವಿಧಾನಪರಿಷತ್ ಸದಸ್ಯರಿಗೆ ತರಬೇತಿ ನೀಡಿದ್ದೇವೆ. ತಜ್ಞರನ್ನು ಕರೆಸಿ ಚುನಾವಣಾ ವ್ಯವಸ್ಥೆ ಹಾಗೂ ಸದನದ ಕಾರ್ಯವೈಖರಿ ಕುರಿತು ಚರ್ಚಿಸಿದ್ದೇವೆ. ಆದರೆ ಹಣದ ಪ್ರಭಾವ ಹೆಚ್ಚಾದರೆ ಇಂತಹ ಪ್ರಯತ್ನಗಳಿಗೂ ಅರ್ಥವಿಲ್ಲದಂತಾಗುತ್ತದೆ.

ಪ್ರಶ್ನೆ: ಮುಂದಿನ ಚುನಾವಣೆಯಲ್ಲಿ ನೀವು ಸ್ಪರ್ಧಿಸುವ ಸಾಧ್ಯತೆ ಇದೆಯೇ?
ಹೊರಟ್ಟಿ:
ಚುನಾವಣೆಗಳಲ್ಲಿ ಹಣದ ಪ್ರಭಾವ ಹೆಚ್ಚಾಗಿರುವುದರಿಂದ ಮುಂದಿನ ಚುನಾವಣೆಯ ಬಗ್ಗೆ ಈಗಲೇ ಯಾವುದೇ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಹಣ ಖರ್ಚು ಮಾಡದೆ ಗೆಲ್ಲುವುದು ಕಷ್ಟವಾಗುತ್ತಿರುವ ಪರಿಸ್ಥಿತಿ ಇದೆ.

ಆದರೆ ನನ್ನ ರಾಜಕೀಯ ಜೀವನದಲ್ಲಿ ನಾನು ಸದಾ ಜನರ ವಿಶ್ವಾಸ ಮತ್ತು ನನ್ನ ಕೆಲಸದ ಆಧಾರದ ಮೇಲೆ ಚುನಾವಣೆಗಳನ್ನು ಎದುರಿಸಿದ್ದೇನೆ. ಮುಂದೆಯೂ ಅದನ್ನೇ ಮುಂದುವರಿಸುತ್ತೇನೆ. ಅತ್ಯಂತ ಹೆಚ್ಚು ಬಹುಮತದಿಂದ ಆರಿಸಿ ಬರುತ್ತೇನೆ ಎಂದು ಚಾಲೆಂಜ್ ಮಾಡಿದ್ದೇನೆ.

ಪ್ರಶ್ನೆ: ಸಭಾಪತಿ ಸ್ಥಾನದಿಂದ ನಿರ್ಗಮಿಸುವ ಸಂದರ್ಭದಲ್ಲಿ ನಿಮಗೆ ಬೇಸರವಿದೆಯೇ?
ಹೊರಟ್ಟಿ:
ಇಷ್ಟು ವರ್ಷಗಳ ಕಾಲ ಸಭಾಪತಿಯಾಗಿ ಕಾರ್ಯನಿರ್ವಹಿಸಿದ ಬಳಿಕ ಈ ರೀತಿ ಅವಧಿ ಪೂರ್ಣಗೊಳಿಸುವ ಮುನ್ನವೇ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಬಂದಿರುವುದು ನೋವು ತಂದಿದೆ. ಆದರೂ ನನಗೆ ಮಾಡಿದ ಎಲ್ಲವನ್ನೂ ಮರೆತು ಮುಂದಕ್ಕೆ ಸಾಗುತ್ತೇನೆ. ನೋವು ಇದ್ದರೂ ಅದನ್ನು ತಡೆದುಕೊಂಡು ಮುಂದಿನ ಹೆಜ್ಜೆ ಇಡುತ್ತೇನೆ.