ಸಮುದ್ರದಾಳದಲ್ಲಿ ರಾಷ್ಟ್ರಧ್ವಜ ಹಾರಿಸಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ ಪುತ್ರ ಶರತ್; ತಂದೆಯಾಗಿ ಹೆಮ್ಮೆ ವ್ಯಕ್ತಪಡಿಸಿದ ಆರ್. ಅಶೋಕ್
ಬೆಂಗಳೂರು: ತಮ್ಮ ಪುತ್ರ ಶರತ್ ಅಶೋಕ್ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ ಐತಿಹಾಸಿಕ ಸಾಧನೆಯ ಭಾಗವಾಗಿರುವುದಕ್ಕೆ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಸಂತಸ ಹಾಗೂ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಆರ್. ಅಶೋಕ್, ಅಂಡಮಾನ್ ಮತ್ತು ನಿಕೋಬಾರ್‌ನ ಸ್ವರಾಜ್‌ದ್ವೀಪದಲ್ಲಿ ನೀರಿನ ಅಡಿಯಲ್ಲಿ ಅತಿದೊಡ್ಡ ರಾಷ್ಟ್ರಧ್ವಜ ಹಾರಿಸಿದ ದಾಖಲೆಯ ಭಾಗವಾಗಿದ್ದಕ್ಕಾಗಿ ಪುತ್ರ ಶರತ್ ಅವರನ್ನು ಅಭಿನಂದಿಸಿದ್ದಾರೆ.
ಲೋಕ ನಿವಾಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ಆಡಳಿತದ ವತಿಯಿಂದ ಶರತ್ ಅವರನ್ನು ಸನ್ಮಾನಿಸಲಾಗಿದ್ದು, ಗೌರವಾನ್ವಿತ ಲೆಫ್ಟಿನೆಂಟ್ ಗವರ್ನರ್ ಅಡ್ಮಿರಲ್ ಡಿ.ಕೆ. ಜೋಶಿ (ನಿವೃತ್ತ) ಅವರಿಂದ ಗಿನ್ನೆಸ್ ವಿಶ್ವ ದಾಖಲೆ ಪ್ರಮಾಣಪತ್ರ ಹಾಗೂ ಪದಕ ಸ್ವೀಕರಿಸಿದ್ದಾರೆ ಎಂದು ಆರ್. ಅಶೋಕ್ ತಿಳಿಸಿದ್ದಾರೆ.
ಸಮುದ್ರದಾಳದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ ಗಿನ್ನೆಸ್ ದಾಖಲೆಯ ಭಾಗವಾಗಲು ಧೈರ್ಯ, ಸಮರ್ಪಣೆ, ಶಿಸ್ತು ಮತ್ತು ತಂಡದ ಕಾರ್ಯ ಅಗತ್ಯವಿತ್ತು ಎಂದು ಅವರು ಹೇಳಿದ್ದಾರೆ.
“ನಮ್ಮ ಮಗ ರಾಷ್ಟ್ರಕ್ಕೆ ಹೆಮ್ಮೆ ತರುವ ಸಾಧನೆಗೆ ಕೊಡುಗೆ ನೀಡುವುದನ್ನು ನೋಡುವುದು ತಂದೆಯಾಗಿ ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಗದ ಭಾವನೆ” ಎಂದು ಆರ್. ಅಶೋಕ್ ಸಂತಸ ಹಂಚಿಕೊಂಡಿದ್ದಾರೆ.
ಶರತ್ ಮುಂದೆಯೂ ಇನ್ನಷ್ಟು ಎತ್ತರದ ಸಾಧನೆಗಳನ್ನು ಮಾಡುವಂತಾಗಲಿ ಎಂದು ಹಾರೈಸಿರುವ ಆರ್. ಅಶೋಕ್, ಪುತ್ರನ ಸಾಧನೆಗೆ ಶುಭಾಶಯ ತಿಳಿಸಿದ್ದಾರೆ.́





















