SK Home Ad
Home ಸುದ್ದಿ ದೇಶ ಸಾವರ್ಕರ್ ಹೇಳಿಕೆ ಪ್ರಕರಣ: ರಾಹುಲ್ ಗಾಂಧಿಗೆ ಸುಪ್ರೀಂ ರಿಲೀಫ್

ಸಾವರ್ಕರ್ ಹೇಳಿಕೆ ಪ್ರಕರಣ: ರಾಹುಲ್ ಗಾಂಧಿಗೆ ಸುಪ್ರೀಂ ರಿಲೀಫ್

0
97

ನವದೆಹಲಿ: ಹಿಂದೂತ್ವ ಸಿದ್ಧಾಂತಿ ವಿ.ಡಿ. ಸಾವರ್ಕರ್ ಕುರಿತು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ಮತ್ತು ಮ್ಯಾಜಿಸ್ಟ್ರೇಟ್‌ ಸಮನ್ಸ್‌ ಅನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.

ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಶೀಲ್ ನಾಗು ಅವರನ್ನೊಳಗೊಂಡ ಪೀಠವು ಪ್ರಕರಣವನ್ನು ವಿಚಾರಣೆ ನಡೆಸಿತು. ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಪ್ರಕರಣ ಮುಂದುವರಿಸಲು ಅಗತ್ಯವಿರುವ ಅನುಮತಿ (sanction) ನೀಡಿರುವ ಬಗ್ಗೆ ಯಾವುದೇ ದಾಖಲೆ ಅಥವಾ ಮಾಹಿತಿ ಇಲ್ಲದಿರುವುದನ್ನು ನ್ಯಾಯಾಲಯ ಗಮನಿಸಿತು. ಈ ಹಿನ್ನೆಲೆಯಲ್ಲಿ ಪ್ರಕರಣ ಹಾಗೂ ಮ್ಯಾಜಿಸ್ಟ್ರೇಟ್‌ ನೀಡಿದ್ದ ಆದೇಶಗಳನ್ನು ರದ್ದುಗೊಳಿಸಿತು.

2022ರ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಸಾವರ್ಕರ್ ಕುರಿತು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗಳನ್ನು ಆಧರಿಸಿ ವಕೀಲ ನೃಪೇಂದ್ರ ಪಾಂಡೆ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153A ಮತ್ತು 505 ಅಡಿಯಲ್ಲಿ ಆರೋಪಗಳನ್ನು ಮಾಡಲಾಗಿತ್ತು. ಲಖನೌ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 2024ರ ಡಿಸೆಂಬರ್‌ನಲ್ಲಿ ಅವರಿಗೆ ಸಮನ್ಸ್‌ ಜಾರಿ ಮಾಡಿತ್ತು.

ರಾಹುಲ್ ಗಾಂಧಿ ಈ ಸಮನ್ಸ್‌ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಇದೀಗ ಅಗತ್ಯ ಕಾನೂನು ಅನುಮತಿ ಇಲ್ಲದಿರುವುದನ್ನು ಆಧರಿಸಿ ಸುಪ್ರೀಂ ಕೋರ್ಟ್‌ ಪ್ರಕರಣವನ್ನು ರದ್ದುಪಡಿಸಿರುವುದು ಅವರಿಗೆ ಪ್ರಮುಖ ಕಾನೂನು ಪರಿಹಾರವಾಗಿದೆ.