SK Home Ad
Home ಸುದ್ದಿ ರಾಜ್ಯ ಖಾತೆ ಹಂಚಿಕೆ : ರಾಜಭವನಕ್ಕೆ ಪಟ್ಟಿ ರವಾನೆ – ಯಾರಿಗೆ ಯಾವ ಖಾತೆ?

ಖಾತೆ ಹಂಚಿಕೆ : ರಾಜಭವನಕ್ಕೆ ಪಟ್ಟಿ ರವಾನೆ – ಯಾರಿಗೆ ಯಾವ ಖಾತೆ?

0
257

ಕಾಂಗ್ರೆಸ್ ಹೈಕಮಾಂಡ್‌ನಿಂದ ಖಾತೆ ಹಂಚಿಕೆ ಪಟ್ಟಿ; ಬಹುತೇಕ ಸಚಿವರಿಗೆ ಖಾತೆ ಫೈನಲ್‌ – ರಾಜಭವನಕ್ಕೆ ಪಟ್ಟಿ ರವಾನೆ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಳಿಕ ಹೊಸ ಸಚಿವರಿಗೆ ಯಾವ ಖಾತೆಗಳನ್ನು ನೀಡಲಾಗುತ್ತದೆ ಎಂಬ ಕುತೂಹಲಕ್ಕೆ ತೆರೆ ಬೀಳುವ ಸಮಯ ಸಮೀಪಿಸಿದೆ. ನೂತನ ಸಚಿವರಿಗೆ ಬುಧವಾರ ಖಾತೆ ಹಂಚಿಕೆ ಮಾಡಿ ಅದರ ಅಧಿಕೃತ ಪಟ್ಟಿಯನ್ನು ಮುಖ್ಯಮಂತ್ರಿಗಳ ಕಚೇರಿಯಿಂದ ಲೋಕಭವನಕ್ಕೆ ರವಾನಿಸಲಾಗಿದೆ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಅಂಕಿತ ಇಂದು ದೊರೆಯುವ ನಿರೀಕ್ಷೆಯಿದೆ. ಬಳಿಕ ಪಟ್ಟಿಯಲ್ಲಿರುವ ಮಂತ್ರಿಗಳಿಗೆ ಖಾತೆಗಳು ಅಧಿಕೃತವಾಗಲಿವೆ. ಇಂದು ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಉಳಿದ ಖಾತೆ ಹಂಚಿಕೆ ಅಧಿಕೃತವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಸಚಿವರ ಸಭೆಯ ಸಂದರ್ಭದಲ್ಲೇ ಅಂತಿಮ ಪಟ್ಟಿ ಪ್ರಕಟವಾಗುವ ಸಾಧ್ಯತೆಯೂ ಇದೆ.

ಮಳೆಗಾಲ ಅಧಿವೇಶನಕ್ಕೂ ಮುನ್ನ ಖಾತೆ ಹಂಚಿಕೆ : ವಿಧಾನ ಮಂಡಲದ ಮಳೆಗಾಲದ ಅಧಿವೇಶನ ನಾಳೆಯಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವರ ಸಭೆ ಕರೆದಿದ್ದಾರೆ. ಅಧಿವೇಶನ ಆರಂಭಕ್ಕೂ ಮುನ್ನ ಸಚಿವರೊಂದಿಗೆ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಸಲಿರುವ ಸಿಎಂ, ಇದೇ ಸಭೆಯಲ್ಲಿ ಖಾತೆ ಹಂಚಿಕೆಯ ಅಂತಿಮ ವಿವರಗಳನ್ನು ಪ್ರಕಟಿಸುವ ಸಾಧ್ಯತೆಯಿದೆ.

ನಾಳೆ ಸಚಿವ ಸಂಪುಟ ಸಭೆಯೂ ನಡೆಯಲಿದ್ದು, ಅದಕ್ಕೂ ಮುನ್ನ ಸಚಿವರೊಂದಿಗೆ ಸಿಎಂ ಚರ್ಚೆ ನಡೆಸಲಿದ್ದಾರೆ. ಹೀಗಾಗಿ ಇಂದೇ ಸಚಿವರಿಗೆ ಖಾತೆ ಹಂಚಿಕೆ ಅಂತಿಮಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಕಾಂಗ್ರೆಸ್ ವಲಯಗಳಲ್ಲಿ ಚರ್ಚೆಯಾಗುತ್ತಿದೆ.

ಸದ್ಯ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಸಂಪುಟ ವಿಸ್ತರಣೆ ಬಳಿಕ ಪ್ರಮಾಣವಚನ ಸ್ವೀಕರಿಸಿರುವ ಸಚಿವರ ಪೈಕಿ ಬಹುತೇಕ ಮಂದಿಗೆ ಈ ಕೆಳಗಿನ ಖಾತೆಗಳನ್ನು ನೀಡಲಾಗಿದೆ ಎನ್ನಲಾಗಿದೆ.

  • ಬಸವರಾಜ ರಾಯರೆಡ್ಡಿ: ಉನ್ನತ ಶಿಕ್ಷಣ
    ಸಂತೋಷ್ ಲಾಡ್: ಕಾರ್ಮಿಕ
    ಲಕ್ಷ್ಮಣ ಸವದಿ: ಸಹಕಾರ
    ಚೆಲುವರಾಯಸ್ವಾಮಿ: ಕೃಷಿ
    ಬಾಲಕೃಷ್ಣ: ಸಣ್ಣ ನೀರಾವರಿ
    ಪುಟ್ಟರಂಗಶೆಟ್ಟಿ: ಪಶುಸಂಗೋಪನೆ
    ಜಮೀರ್ ಅಹ್ಮದ್ ಖಾನ್: ವಸತಿ / ವಕ್ಫ್
    ಮಧು ಬಂಗಾರಪ್ಪ: ಪ್ರಾಥಮಿಕ ಶಿಕ್ಷಣ
    ರಿಜ್ವಾನ್ ಅರ್ಷದ್: ಆಹಾರ ಮತ್ತು ನಾಗರಿಕ ಪೂರೈಕೆ
    ಮುನಿಯಪ್ಪ: ಸಮಾಜ ಕಲ್ಯಾಣ
    ಡಾ. ಅಜಯ್ ಸಿಂಗ್: ಅರಣ್ಯ
    ಬಸವಂತಪ್ಪ: ಮೀನುಗಾರಿಕೆ
    ಎಸ್.ಎಸ್. ಮಲ್ಲಿಕಾರ್ಜುನ: ಗಣಿ ಮತ್ತು ಭೂವಿಜ್ಞಾನ

ಇನ್ನೂ ಕೆಲ ಸಚಿವರಿಗೆ ಖಾತೆ ಹಂಚಿಕೆ ಬಾಕಿ : ಇನ್ನು ಸಚಿವರಾದ ಬಿ. ನಾಗೇಂದ್ರ, ರುದ್ರಪ್ಪ ಲಮಾಣಿ, ಶಿವರಾಜ್ ತಂಗಡಗಿ, ವಿಜಯಪ್ಪ ಕಾಶಪ್ಪನವರ್, ನರೇಂದ್ರ ಸ್ವಾಮಿ ಹಾಗೂ ಟಿ. ರಘುಮೂರ್ತಿ ಅವರಿಗೆ ಖಾತೆ ಹಂಚಿಕೆ ಇನ್ನೂ ಅಂತಿಮವಾಗಿಲ್ಲ ಎನ್ನಲಾಗಿದೆ.