SK Home Ad
Home ಕ್ರೀಡೆ 2027 ವಿಶ್ವಕಪ್‌ ಕ್ರಿಕೆಟ್‌ಗೆ ಆಫ್ರಿಕಾದ ಆತಿಥ್ಯ: 12 ಮೈದಾನಗಳ ಘೋಷಣೆ

2027 ವಿಶ್ವಕಪ್‌ ಕ್ರಿಕೆಟ್‌ಗೆ ಆಫ್ರಿಕಾದ ಆತಿಥ್ಯ: 12 ಮೈದಾನಗಳ ಘೋಷಣೆ

0
58

ಜೋಹಾನ್ಸ್‌ಬರ್ಗ್: 2027ರ ಐಸಿಸಿ ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಜಂಟಿಯಾಗಿ ಆತಿಥ್ಯ ವಹಿಸಲಿದ್ದು, ಪಂದ್ಯಗಳು ನಡೆಯಲಿರುವ 12 ಮೈದಾನಗಳನ್ನು ಐಸಿಸಿ ಶುಕ್ರವಾರ ಅಧಿಕೃತವಾಗಿ ಪ್ರಕಟಿಸಿದೆ.

ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಆತಿಥೇಯ ನಗರಗಳು ಹಾಗೂ ಟೂರ್ನಿಯ ‘Three Nations, One Heartbeat’ (ಮೂರು ರಾಷ್ಟ್ರಗಳು–ಒಂದು ಹೃದಯಬಡಿತ) ಬ್ರ್ಯಾಂಡ್‌ಅನ್ನು ಅನಾವರಣಗೊಳಿಸಲಾಯಿತು.

2027ರ ವಿಶ್ವಕಪ್ ಪಂದ್ಯಾವಳಿಯು 24 ವರ್ಷಗಳ ಬಳಿಕ ಮತ್ತೆ ಆಫ್ರಿಕಾ ಖಂಡಕ್ಕೆ ಮರಳುತ್ತಿದೆ. ಇದಕ್ಕೂ ಮೊದಲು 2003ರಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ಕೀನ್ಯಾ ಜಂಟಿಯಾಗಿ ವಿಶ್ವಕಪ್ ಆಯೋಜಿಸಿದ್ದವು.

12 ಆತಿಥೇಯ ಮೈದಾನಗಳು
ದಕ್ಷಿಣ ಆಫ್ರಿಕಾ:
ವಾಂಡರರ್ಸ್ ಸ್ಟೇಡಿಯಂ, ಜೋಹಾನ್ಸ್‌ಬರ್ಗ್
ಸೆಂಚೂರಿಯನ್, ತ್ಷ್ವಾನೆ
ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನ, ಕೇಪ್‌ಟೌನ್
ಕಿಂಗ್ಸ್‌ಮೀಡ್, ಡರ್ಬನ್
ಸೇಂಟ್ ಜಾರ್ಜ್ ಪಾರ್ಕ್, ಕ್ವೆಬೆರ್ಹಾ
ಮಂಗೌಂಗ್ ಓವಲ್, ಬ್ಲೂಮ್‌ಫೊಂಟೇನ್
ಬೋಲ್ಯಾಂಡ್ ಪಾರ್ಕ್, ಪಾರ್ಲ್
ಬಫೆಲೋ ಪಾರ್ಕ್, ಕುಗೊಂಪೊ ಸಿಟಿ

ಜಿಂಬಾಬ್ವೆ:
ಹರಾರೆ ಸ್ಫೋರ್ಟ್ಸ್ ಕ್ಲಬ್, ಹರಾರೆ
ಕ್ವೀನ್ಸ್ ಸ್ಫೋರ್ಟ್ಸ್ ಕ್ಲಬ್, ಬುಲವಾಯೊ
ಮೋಸಿ-ಓ-ಟುನ್ಯಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ವಿಕ್ಟೋರಿಯಾ ಫಾಲ್ಸ್

ನಮೀಬಿಯಾ:
ನಮೀಬಿಯಾ ಕ್ರಿಕೆಟ್ ಗ್ರೌಂಡ್, ವಿಂಡ್‌ಹೋಕ್

ಹೊಸ ಮಾದರಿಯಲ್ಲಿ ವಿಶ್ವಕಪ್: 2027ರ ವಿಶ್ವಕಪ್‌ನಲ್ಲಿ ಒಟ್ಟು 14 ತಂಡಗಳು ಪಾಲ್ಗೊಳ್ಳಲಿದ್ದು, 57 ಪಂದ್ಯಗಳು ನಡೆಯಲಿವೆ. ಈ ಬಾರಿ ಹೊಸ ಮೂರು ಹಂತಗಳ ಸ್ಪರ್ಧಾ ಮಾದರಿಯನ್ನು ಅಳವಡಿಸಲಾಗಿದೆ.

ಮೊದಲ ಹಂತದಲ್ಲಿ 12ರಿಂದ 14ನೇ ಶ್ರೇಯಾಂಕದ ಮೂರು ತಂಡಗಳು ʻಸೂಪರ್ ಸಿರೀಸ್ʼ ನಲ್ಲಿ ಮುಖಾಮುಖಿಯಾಗಲಿವೆ. ಅಲ್ಲಿ ಗೆದ್ದ ತಂಡ ಮುಂದಿನ ಹಂತಕ್ಕೆ ಪ್ರವೇಶಿಸಲಿದೆ.

ನಂತರ 12 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಲೀಗ್ ಪಂದ್ಯಗಳನ್ನು ನಡೆಸಲಾಗುತ್ತದೆ. ಪ್ರತಿ ಗುಂಪಿನ ಅಗ್ರ ಮೂರು ತಂಡಗಳು ಹಾಗೂ ಎರಡೂ ಗುಂಪುಗಳಿಂದ ಮುಂದಿನ ಅತ್ಯುತ್ತಮ ಒಂದು ತಂಡ ಸೇರಿ ʻಸೂಪರ್ 7ʼ ಹಂತಕ್ಕೆ ಅರ್ಹತೆ ಪಡೆಯಲಿವೆ.

ಸೂಪರ್-7 ಹಂತದಲ್ಲಿ 21 ಪಂದ್ಯಗಳು ನಡೆಯಲಿದ್ದು, ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿವೆ.

24 ವರ್ಷಗಳ ಬಳಿಕ ಆತಿಥ್ಯ: ಈ ಸಂದರ್ಭದಲ್ಲಿ ಮಾತನಾಡಿದ ಐಸಿಸಿ ಅಧ್ಯಕ್ಷ ಜಯ್ ಶಾ, “2027ರ ವಿಶ್ವಕಪ್ ಪ್ರಯಾಣದಲ್ಲಿ ಇದು ಮಹತ್ವದ ಮೈಲುಗಲ್ಲು. 24 ವರ್ಷಗಳ ಬಳಿಕ ವಿಶ್ವಕಪ್ ಮತ್ತೆ ಆಫ್ರಿಕಾಕ್ಕೆ ಮರಳುತ್ತಿರುವುದು ಕ್ರಿಕೆಟ್‌ಗೆ ಐತಿಹಾಸಿಕ ಕ್ಷಣ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಜಗತ್ತಿಗೆ ಮರೆಯಲಾಗದ ಆತಿಥ್ಯ ನೀಡಲಿವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಐಸಿಸಿ ಸಿಇಒ ಸಂಜೋಗ್ ಗುಪ್ತಾ, “ವಿಶ್ವಕಪ್ ಕೇವಲ ಕ್ರಿಕೆಟ್ ಟೂರ್ನಿಯಲ್ಲ; ಇದು ಆಫ್ರಿಕಾದ ಸಂಸ್ಕೃತಿ, ವೈವಿಧ್ಯತೆ, ಆತಿಥ್ಯ ಮತ್ತು ಕ್ರೀಡಾ ಪ್ರೇಮವನ್ನು ಜಗತ್ತಿಗೆ ಪರಿಚಯಿಸುವ ವೇದಿಕೆಯಾಗಿದೆ” ಎಂದು ಹೇಳಿದರು.