SK Home Ad
Home ಸುದ್ದಿ ರಾಜ್ಯ ಬಡ್ತಿಗೆ ಪರದಾಟ; ಕ್ರೀಡಾ ಇಲಾಖೆಯಲ್ಲಿ ಮೇಲಧಿಕಾರಿಗಳದ್ದೇ ಆಟ

ಬಡ್ತಿಗೆ ಪರದಾಟ; ಕ್ರೀಡಾ ಇಲಾಖೆಯಲ್ಲಿ ಮೇಲಧಿಕಾರಿಗಳದ್ದೇ ಆಟ

0
49

ಧನಂಜಯ ಎಸ್. ಹಕಾರಿ
ದಾವಣಗೆರೆ: ರಾಜ್ಯ ಕ್ರೀಡಾ ಇಲಾಖೆಯಲ್ಲಿ ಕಳೆದ ದಶಕದಿಂದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಮೇಲಧಿಕಾರಿಗಳು ತಮಗೆ ಕೆಲಸ ಮಾಡಿಕೊಡುವವರು, ಅವರಿಗೆ ಹತ್ತಿರವಾದವರನ್ನು ಮಾತ್ರ ಬೆಂಗಳೂರು ಕೇಂದ್ರ ಕಚೇರಿಗೆ ಕರೆಯಿಸಿಕೊಳ್ಳುವ ಕೆಟ್ಟ ಸಂಸ್ಕೃತಿ ಮುಂದುವರೆಸುತ್ತಿದ್ದಾರೆ.

ರಾಜ್ಯದ 31 ಜಿಲ್ಲೆಗಳ ಪೈಕಿ ಎಂಟು ಜಿಲ್ಲೆಗಳಲ್ಲಿ ಮಾತ್ರ ಕ್ರೀಡಾ ಇಲಾಖೆಯ ಖಾಯಂ ಸಹಾಯಕ ನಿರ್ದೇಶಕರು (ಎಡಿ) ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನುಳಿದಂತೆ ಸಶಸ್ತ್ರ ಮೀಸಲು ಪಡೆ, ಮತ್ತೊಂದು ಇಲಾಖೆಯ ಹೆಚ್ಚುವರಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ಅಧಿಕಾರಿಗಳು ಸಹಾಯಕ ನಿರ್ದೇಶಕರಾಗಿ ಸಾಕಷ್ಟು ವರ್ಷಗಳಿಂದ ಕಾರ್ಯನಿರ್ವಹಿಸಿದರೂ ಉಪ ನಿರ್ದೇಶಕರಾಗಿ ಬಡ್ತಿ ನೀಡುತ್ತಿಲ್ಲ.

ರಾಜ್ಯ ಕರಡು ಪತ್ರದ ಪ್ರಕಾರ ಕ್ರೀಡಾ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು 7 ಉಪ ನಿರ್ದೇಶಕರಿಗೆ ಅವಕಾಶ ನೀಡಬೇಕಿದೆ. ಇದರಲ್ಲಿ ಚಿಕ್ಕಮಗಳೂರು ಹಾಗೂ ಬೆಳಗಾವಿ ಕೇಂದ್ರಗಳಲ್ಲಿ ಇಬ್ಬರು ಉಪ ನಿರ್ದೇಶಕರಿದ್ದಾರೆ. ಇನ್ನುಳಿದ ಐವರು ಡಿಡಿಗಳು ಬೆಂಗಳೂರಿನ ಕೇಂದ್ರದಲ್ಲಿ ಕಾರ್ಯನಿರ್ವಹಿಸಬೇಕು. ಸದ್ಯ ಮೂವರು ಮಾತ್ರ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳ ಕ್ರೀಡಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಿಲ್ಲ. ಜಿಲ್ಲಾ ಕೇಂದ್ರಗಳಲ್ಲಿನ ಬೇರೊಂದು ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಹೆಚ್ಚುವರಿಯಾಗಿ ಕ್ರೀಡಾ ಇಲಾಖೆಯ ಜವಾಬ್ದಾರಿಯನ್ನು ಹೊರಿಸಲಾಗಿದೆ.

4 ಜಿಲ್ಲೆಗಳಲ್ಲಿ ಸಶಸ್ತ್ರ ಮೀಸಲು ಪೊಲೀಸರು: ಸಾಮಾನ್ಯವಾಗಿ ಕ್ರೀಡೆಯಲ್ಲಿ ಸಾಧನೆ ಮಾಡಿದ ಬೇರೆ ಇಲಾಖೆಯ ಅಧಿಕಾರಿಗಳನ್ನು ಕ್ರೀಡಾ ಇಲಾಖೆಗೆ ಸೇರಿಸಿಕೊಳ್ಳುವುದು ವಾಡಿಕೆ. ತುಮಕೂರು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು, ಈ ಹಿಂದೆ ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದರು. ರಾಷ್ಟ್ರೀಯ ಮಟ್ಟದ ಫೆನ್ಸಿಂಗ್ ಕ್ರೀಡೆಯಲ್ಲಿ ಪದಕ ಜಯಿಸಿದ್ದಾರೆ. ಉಳಿದ ನಾಲ್ಕು ಜಿಲ್ಲೆಗಳಾದ ಬಾಗಲಕೋಟೆ, ಕಾರವಾರ, ಕೊಪ್ಪಳ ಮತ್ತು ರಾಯಚೂರು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಸಶಸ್ತ್ರ ಮೀಸಲು ಪೊಲೀಸ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದರು. ಉಡುಪಿಯಲ್ಲಿನ ಎಡಿ, ಉಡುಪಿ ಸರ್ಕಾರಿ ಕಾಲೇಜಿನ ಫಿಸಿಕಲ್ ಡೈರೆಕ್ಟರ್ ಆಗಿರುವ ರೋಷನ್ ಕುಮಾರ್ ಶೆಟ್ಟಿ, ಕಳೆದ 15 ವರ್ಷಗಳಿಂದ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಷ್ಟು ವರ್ಷಗಳಾದರೂ ಕ್ರೀಡಾ ಇಲಾಖೆ ಇಲ್ಲಿಗೆ ಯಾವೊಬ್ಬ ಅಧಿಕಾರಿಗಳನ್ನು ನೇಮಿಸದೆ ಇರುವುದು ನಿಜಕ್ಕೂ ದುರಂತವೇ ಸರಿ.

ಈ ಕುರಿತು ಮಾತನಾಡಿರುವ ಕ್ರೀಡಾ ಇಲಾಖೆ ನಿರ್ದೇಶಕ ಅನುಚೇತ್, “ಖಾಲಿ ಇರುವ ಸಹಾಯಕ ನಿರ್ದೇಶಕರ ಹುದ್ದೆಗಳನ್ನು ಮುಂದಿನ ದಿನಗಳಲ್ಲಿ ಭರ್ತಿ ಮಾಡಲಾಗುವುದು. ಈ ಹಿಂದೆ ಏನಾಗಿದೆ ಎನ್ನುವುದು ನನಗೆ ತಿಳಿದಿಲ್ಲ. ಅಧಿಕಾರಿಗಳ ಕೊರತೆ ಇರುವ ಕಾರಣದಿಂದ ಬೇರೆ ಇಲಾಖೆಯ ಅಧಿಕಾರಿಗಳನ್ನು ನೇಮಿಸಲಾಗಿದೆ.” ಎಂದು ಹೇಳಿದ್ದಾರೆ.

ಒಂದೇ ತಾಸು ಬಡ್ತಿ ಹುದ್ದೆಯಲ್ಲಿ ಕೆಲಸ: ಸಾಮಾನ್ಯವಾಗಿ ಸರ್ಕಾರ ಡಿಪಿಸಿ (ಡಿಪಾರ್ಟ್ಮೆಂಟ್ ಆಫ್ ಪ್ರೋಮೋಷನ್ ಕಮಿಟಿ) ನಿಯಮದ ಪ್ರಕಾರ ಅರ್ಹತೆಯುಳ್ಳ ಒಬ್ಬ ನೌಕರನಿಗೆ ವರ್ಷದಲ್ಲಿ 2 ಬಾರಿ ಪ್ರೋಮೋಷನ್ ನೀಡಬೇಕು. ಆದರೆ ಇದು ಕ್ರೀಡಾ ಇಲಾಖೆಯಲ್ಲಿ ಕಾರ್ಯಗತವಾಗಿಲ್ಲ. ಇತ್ತೀಚೆಗೆ ನಿವೃತ್ತಿಯಾದ ಕೋಲಾರದ ಸಹಾಯಕ ನಿರ್ದೇಶಕರೊಬ್ಬರು ಕೇವಲ ಒಂದು ಗಂಟೆ ಅವಧಿಗೆ ಮಾತ್ರ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಕಳೆದ 25 ವರ್ಷಗಳಿಂದ ಸಹಾಯಕ ನಿರ್ದೇಶಕರಾಗಿ ವಿವಿಧ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2 ವರ್ಷಗಳಿಂದ ಬಡ್ತಿ ಪಡೆಯಲು ಹರಸಾಹಸಪಟ್ಟರು. ಆದರೂ ಮೇಲಧಿಕಾರಿಗಳು ಇವರ ಮನವಿಯನ್ನು ಪುರಸ್ಕರಿಸಲಿಲ್ಲ. ಅಂತಿಮವಾಗಿ ಜೂನ್ 30ರಂದು ನಿವೃತ್ತಿಯ ದಿನ, ಹಿಂದಿನ ದಿನ ಅಂದರೆ ಜೂನ್ 29ರಂದು ಉಪ ನಿರ್ದೇಶಕರಾಗಿ ಬಡ್ತಿ ನೀಡಲಾಗಿತ್ತು. ಕೋಲಾರದಿಂದ ರೀಲಿವ್ ಆಗಿ, ಜೂನ್ 30ರ ಸಂಜೆ ಡಿಡಿ ಆಗಲು ಚಾರ್ಚ್ ತೆಗೆದುಕೊಂಡು ಒಂದು ಗಂಟೆ ಬಳಿಕ ನಿವೃತ್ತಿಯಾದರು.