SK Home Ad
Home ಸುದ್ದಿ ದೇಶ 15 ಸಾವಿರ ರೂ. ಆಸೆಗೆ ತಲೆ ಬೋಳಿಸಿಕೊಂಡ ಮಹಿಳೆಯರು

15 ಸಾವಿರ ರೂ. ಆಸೆಗೆ ತಲೆ ಬೋಳಿಸಿಕೊಂಡ ಮಹಿಳೆಯರು

0
138

ಚೆನ್ನೈ: ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಸರ್ಕಾರಿ ಯೋಜನೆಯ ಹೆಸರಿನಲ್ಲಿ ನಡೆದ ವಿಚಿತ್ರ ವಂಚನೆಗೆ ಮೂವರು ಮಹಿಳೆಯರು ಬಲಿಯಾಗಿದ್ದಾರೆ. ಸೋಂಕು ತಗುಲದಂತೆ ತಲೆ ಬೋಳಿಸಿಕೊಂಡರೆ ₹15 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ನಂಬಿಸಿ ದುಷ್ಕರ್ಮಿಯೊಬ್ಬ ಮೂವರು ಮಹಿಳೆಯರ ತಲೆ ಬೋಳಿಸಿರುವ ಘಟನೆ ಬೆಳಕಿಗೆ ಬಂದಿದೆ.

ಮಹಿಳೆಯೊಬ್ಬರಿಗೆ ಕರೆ ಮಾಡಿದ ವ್ಯಕ್ತಿ ತಾನು ಸರ್ಕಾರಿ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಮಹಿಳೆಯ ಹೆಸರು ಹಾಗೂ ಕುಟುಂಬದ ಸದಸ್ಯರ ವಿವರಗಳನ್ನು ಹೇಳಿ ಅವರ ವಿಶ್ವಾಸಗಳಿಸಿದ್ದ ಆತ, ಕೋವಿಡ್-19 ರೀತಿಯ ಹೊಸ ಸಾಂಕ್ರಾಮಿಕ ರೋಗವೊಂದು ಮಾನವನ ಕೂದಲಿನ ಮೂಲಕ ಹರಡುತ್ತಿದೆ ಎಂದು ಸುಳ್ಳು ಮಾಹಿತಿ ನೀಡಿದ್ದಾನೆ.

ರೋಗದಿಂದ ರಕ್ಷಿಸಿಕೊಳ್ಳಲು ತಲೆ ಬೋಳಿಸಿಕೊಳ್ಳುವುದು ಅಗತ್ಯ ಎಂದು ಹೇಳಿದ ಆತ, ಕೆಲವು ದೇಶಗಳಲ್ಲಿ ಜನರು ಈಗಾಗಲೇ ಈ ಕ್ರಮ ಅನುಸರಿಸುತ್ತಿದ್ದಾರೆ ಎಂಬ ಸುಳ್ಳು ಉದಾಹರಣೆಗಳನ್ನೂ ನೀಡಿದ್ದಾನೆ.

ಇದಕ್ಕಾಗಿ ತಮಿಳುನಾಡು ಸರ್ಕಾರ ವಿಶೇಷ ಪ್ರೋತ್ಸಾಹಧನ ಘೋಷಿಸಿದೆ ಎಂದು ನಂಬಿಸಿದ ವಂಚಕ, ತಲೆ ಬೋಳಿಸಿಕೊಂಡ ಮಹಿಳೆಯರಿಗೆ ₹15 ಸಾವಿರ, ಶಾಲೆ-ಕಾಲೇಜು ವಿದ್ಯಾರ್ಥಿನಿಯರಿಗೆ ₹45 ಸಾವಿರ ಹಾಗೂ ಲ್ಯಾಪ್‌ಟಾಪ್‌, ಪುರುಷರಿಗೆ ₹6 ಸಾವಿರ ನೀಡಲಾಗುತ್ತದೆ ಎಂದು ಹೇಳಿದ್ದಾನೆ.

ಗ್ರಾಮದಲ್ಲಿ ಸೀಮಿತ ಸಂಖ್ಯೆಯ ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ ಎಂದು ಹೇಳಿ, ಈ ಮಾಹಿತಿಯನ್ನು ಸಂಬಂಧಿಕರು ಮತ್ತು ಗ್ರಾಮಸ್ಥರಿಗೂ ತಿಳಿಸಲು ಸೂಚಿಸಿದ್ದಾನೆ. ಮರುದಿನ ಮಧ್ಯಾಹ್ನ ಅಧಿಕಾರಿಗಳು ಬಂದು ಹಣ ವಿತರಿಸಲಿದ್ದು, ಅದಕ್ಕೂ ಮುನ್ನ ತಲೆ ಬೋಳಿಸಿಕೊಂಡವರಿಗಷ್ಟೇ ಹಣ ಸಿಗುತ್ತದೆ ಎಂದು ಆತ ಎಚ್ಚರಿಕೆ ನೀಡಿದ್ದಾನೆ.

ಈ ಮಾತುಗಳನ್ನು ನಂಬಿದ ಸುಮಾರು 20 ಗ್ರಾಮಸ್ಥರು ತಲೆ ಬೋಳಿಸಿಕೊಳ್ಳಲು ಸಿದ್ಧತೆ ನಡೆಸಿದ್ದರು. ಅವರಲ್ಲಿ ಮೂವರು ಮಹಿಳೆಯರು ತಲೆ ಬೋಳಿಸಿಕೊಂಡಿದ್ದರು. ನಂತರ ಭರವಸೆ ನೀಡಿದ ಹಣದ ಬಗ್ಗೆ ಕರೆ ಮಾಡಿದಾಗ ವಂಚಕನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಆಗ ತಾವು ಮೋಸ ಹೋಗಿರುವುದು ಮಹಿಳೆಯರಿಗೆ ಗೊತ್ತಾಯಿತು. ವಿಷಯ ತಿಳಿದ ಉಳಿದ ಗ್ರಾಮಸ್ಥರು ತಕ್ಷಣವೇ ತಲೆ ಬೋಳಿಸಿಕೊಳ್ಳುವ ನಿರ್ಧಾರದಿಂದ ಹಿಂದೆ ಸರಿದರು.

ಈ ಘಟನೆ ಬಳಿಕ ಇಂತಹ ಸುಳ್ಳು ಕರೆಗಳು ಮತ್ತು ವದಂತಿಗಳನ್ನು ನಂಬಬಾರದು ಎಂದು ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.