ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿದ್ದ ʻಸಂಸತ್ ಚಲೋʼ ಪ್ರತಿಭಟನಾ ರ‍್ಯಾಲಿ ವೇಳೆ ಭಾರೀ ಉದ್ವಿಗ್ನತೆ ಉಂಟಾಗಿದೆ. ಪ್ರತಿಭಟನೆಯನ್ನು ನಿಯಂತ್ರಿಸಲು ಮುಂದಾದ ಪೊಲೀಸರು ಪಕ್ಷದ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರನ್ನು ವಶಕ್ಕೆ ಪಡೆದಿದ್ದಾರೆ.
ಸಂಸತ್ ಭವನದತ್ತ ಸಾವಿರಾರು ಕಾರ್ಯಕರ್ತರು ಮೆರವಣಿಗೆ ನಡೆಸಲು ಮುಂದಾದಾಗ ಪೊಲೀಸರು ತಡೆದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಯಿತು.
ಈ ವೇಳೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅಭಿಜಿತ್ ದೀಪ್ಕೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವರ ಬಂಧನದ ನಂತರವೂ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಪ್ರತಿಭಟನೆ ಮುಂದುವರಿಸಿದರು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಂಸತ್ ಸುತ್ತಮುತ್ತ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಸಂಚಾರದಲ್ಲಿಯೂ ಕೆಲಕಾಲ ವ್ಯತ್ಯಯ ಉಂಟಾಯಿತು. ಪ್ರತಿಭಟನೆಗೆ ಕಾರಣವಾದ ಬೇಡಿಕೆಗಳ ಕುರಿತು ಪಕ್ಷದ ನಾಯಕರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.






















