ಮಲ್ಲಿಕಾರ್ಜುನ ಚಿಲ್ಕರಾಗಿ
ಬಳ್ಳಾರಿ\ಕೊಪ್ಪಳ: ತುಂಗಭದ್ರೆ ಜಲಾಶಯ ನಿರ್ಮಾಣ ಇತಿಹಾಸದಲ್ಲೇ ಎದುರಾಗಿದ್ದ ಗಂಡಾಂತರದಿಂದ ಪಾರಾಗಿ 33 ಹೊಸ ಕ್ರಸ್ಟ್‌ಗೇಟ್‌ಗಳ ಅಳವಡಿಕೆ ಮೂಲಕ ಹೊಸ ಚೈತನ್ಯ ಪಡೆದ ಅಣೆಕಟ್ಟೆಯಲ್ಲಿ ಸಂತಸ ಮೇಳೈಸಿದೆ. ಈ ಬಾರಿ ಮುಂಗಾರು ಮಳೆ ಕೊರತೆಯಿಂದ ಜಲಾಶಯದಲ್ಲಿ ನೀರಿಲ್ಲ ಎನ್ನುವ ಕೊರಗು, ಶಾಶ್ವತವಾಗಿ ಸಿಕ್ಕ ಪರಿಹಾರದ ಮುಂದೆ ಮಂಕಾಗಿದೆ.
ಗುರುವಾರ 25ರಂದು ಮುಂಜಾನೆ 11 ಗಂಟೆಗೆ ತುಂಗಭದ್ರಾ ಜಲಾಶಯದ ಹೊಸ 33 ಕ್ರಸ್ಟ್ ಗೇಟಗಳ ಉದ್ಘಾಟನೆ ಕಾರ್ಯಕ್ರಮವು ಈ ಭಾಗದ ರೈತಾಪಿ ಸಮೂಹದ ಬಾಳು ಹಸನಾಗಿಸುವಲ್ಲಿ ಆಶಾಕಿರಣ ಮೂಡಿಸಿದೆ.
ಎಲ್ಲಿ-ಏನು ಕಾರ್ಯಕ್ರಮ?: 2024ರ ಆ.10ರಂದು ತುಂಗಭದ್ರೆ ಜಲಾಶಯದ 19ನೇ ಕ್ರಸ್ಟ್‌ಗೇಟ್ ಕೊಚ್ಚಿ ಹೋಗಿದ್ದರಿಂದ ಹರಿಯುವ ನೀರಿನಲ್ಲಿ ತಾತ್ಕಾಲಿಕವಾಗಿ ಸ್ಟಾಪ್‌ಲಾಗ್ ಗೇಟ್ ಅಳವಡಿಸಿ ಡ್ಯಾಂನ್ನು ರಕ್ಷಣೆ ಮಾಡಲಾಗಿತ್ತು. ಬಳಿಕೆ ತಜ್ಞರ ಸೂಚನೆ ಮೇರೆಗೆ ಜಲಾಶಯದ 33 ಕ್ರಸ್ಟ್ ಗೇಟುಗಳನ್ನು ಬದಲಾಯಿಸಲಾಗಿದ್ದು, 52 ಕೋಟಿ ವೆಚ್ಚದಲ್ಲಿ ಮರು ನಿರ್ಮಿಸಲಾಗಿದೆ. ಇದರ ಲೋಕಾರ್ಪಣೆಯನ್ನು ಹೊಸಪೇಟೆಯ ಟಿಬಿ ಬೋರ್ಡ್ ವ್ಯಾಪ್ತಿಯ ಗೇಟ್ ನಂ. 18ರ ಬಳಿ ಸಿಎಂ ಡಿ.ಕೆ. ಶಿವಕುಮಾರ್ ಮಾಡಲಿದ್ದಾರೆ.
ಬಳಿಕ ಕೊಪ್ಪಳದ ಮುನಿರಾಬಾದ್‌ನ ಸರಕಾರಿ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್, ರಾಜಭೂಷಣ ಚೌಧರಿ, ವಿ. ಸೋಮಣ್ಣ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ, ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ, ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಕೆ. ಪವನ್‌ಕಲ್ಯಾಣ, ಸಚಿವರಾದ ಡಾ. ನಿಮ್ಮಲ ರಾಮನಾಯ್ಡು, ಪಯ್ಯವುಲ ಕೇಶವ್, ತೆಲಂಗಾಣದ ಮುಖ್ಯಮಂತ್ರಿ ಎ.ರೇವಂತರೆಡ್ಡಿ, ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ್, ಸಚಿವರಾದ ಎನ್. ಉತ್ತಮಕುಮಾರ್‌ರೆಡ್ಡಿ ಹಾಗೂ ಕೇಂದ್ರ ಜಲ ಆಯೋಗದ ಸದಸ್ಯರು, ಐಎಎಸ್ ಅಧಿಕಾರಿಗಳು ಹಾಗೂ ನಾಲ್ಕು ಜಿಲ್ಲೆಯ ಶಾಸಕರುಗಳು ಸಾಕ್ಷಿಯಾಗಲಿದ್ದಾರೆ.
ಕೃಷ್ಣೆ-ತಂಗಭದ್ರೆ ಜೋಡಣೆಗೆ ಮುನ್ನುಡಿ?: ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ಜೋಡಣೆಗೆ ಕೇಂದ್ರ ಸರಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲು ಮೂರು ರಾಜ್ಯದ ಸಿಎಂಗಳು ಉತ್ಸುಕರಾಗಿದ್ದು, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದನ್ನು ಘೋಷಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ಕ್ರಸ್ಟ್‌ಗೇಟ್ ಕೊಚ್ಚಿ ಹೋದಾಗ ಜಲಸಂಪನ್ಮೂಲ ಇಲಾಖೆ ಸಚಿವರಾಗಿದ್ದ ಡಿಕೆ ಶಿವಕುಮಾರ್ ಇದನ್ನು ಸವಾಲಾಗಿಯೇ ಸ್ವೀಕರಿಸಿದ್ದರು. ಈಗ ಹೊಸ ಗೇಟ್‌ಗಳ ಉದ್ಘಾಟನಾ ಸಂಭ್ರಮದ ಹೊತ್ತಲ್ಲೇ ಮತ್ತೊಂದು ಕೊಡುಗೆ ನೀಡುವ ನಿರ್ಣಯ ಸಿಎಂ ಡಿಕೆ ಶಿವಕುಮಾರ್ ಕೈಗೊಂಡಂತಿದೆ. ಇದಕ್ಕೆ ಪೂರಕವೆಂಬಂತೆ ಕೊಪ್ಪಳದ ಕಾರಟಗಿಯಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ ಮಾತನಾಡಿದ್ದಾರೆ. `ಕೃಷ್ಣಾ ತುಂಗಭದ್ರಾ ನದಿ ಜೋಡಣೆ ಬಗ್ಗೆ ಸರ್ಕಾರದ ಆಲೋಚನೆ ಇದೆ. ಕೇಂದ್ರ ಸಚಿವರ ಎದುರು ನದಿ ಜೋಡಣೆ ಬಗ್ಗೆ ಪ್ರಸ್ತಾಪ ಮಾಡಲು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಯಾರಿ ಮಾಡಿದ್ದಾರೆ. ಕ್ರಸ್ಟ್ ಗೇಟ್ ಉದ್ಘಾಟನೆ ಬಳಿಕ ಈ ಪ್ರಸ್ತಾವನೆಯನ್ನು ಖುದ್ದಾಗಿ ಕೇಂದ್ರ ಜಲಶಕ್ತಿ ಸಚಿವರಿಗೆ ಸಲ್ಲಿಸಲಿದ್ದಾರೆ ಎಂದು ತಂಗಡಗಿ ಹೇಳಿದ್ದಾರೆ.
ಮಾಜಿ ಸಚಿವರ ಹೇಳಿಕೆ ಹಾಗೂ ಮೂರು ರಾಜ್ಯದ ಉತ್ಸುಕತೆ ನದಿ ಜೋಡಣೆಯಂತಹ ಪ್ರಮುಖ ಯೋಜನೆಗೆ ಕ್ರಸ್ಟ್ಗೇಟ್‌ಗಳ ಲೋಕಾರ್ಪಣೆ ಕಾರ್ಯಕ್ರಮ ಸಾಕ್ಷಿಯಾಗುವ ಸಾಧ್ಯತೆಗಳಿವೆ.
ವರದಿ ಪುರಸ್ಕಾರ?: ಈ ಹಿಂದೆಯೇ ಪೂರ್ವಾಭಿಮುಖ ಮತ್ತು ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ಜೋಡಣೆ ಮೂಲಕ ರಾಜ್ಯದಲ್ಲಿ ಕುಡಿವ ನೀರಿನ ದಾಹ, ನೀರಾವರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುವ ಅಂಶ ಪ್ರಸ್ತಾಪಿಸಿ ಹಲವು ತಜ್ಞರು ಸಲ್ಲಿಸಿದ ವರದಿಗಳು ಕೇಂದ್ರ ಮತ್ತು ರಾಜ್ಯ ಸರಕಾರದ ಮುಂದೆ ಇದ್ದವು.
ಆದರೆ ನದಿ ಜೋಡಣೆಯಂತಹ ಕ್ರಮಕ್ಕೆ ಕೇಂದ್ರ ಸದ್ಯಕ್ಕೆ ಆಸಕ್ತಿ ತೋರುತ್ತಿಲ್ಲ. ಕೇಂದ್ರ ಜಲಶಕ್ತಿ ಸಚಿವ ಸಿಆರ್ ಪಾಟೀಲ್ ತುಂಗಭದ್ರಾ ಹೂಳು ತೆರವು, ಸಮಾನಾಂತರ ಜಲಾಶಯ ನಿರ್ಣಯದ ಬಗ್ಗೆಯೇ ವಿಶೇಷ ಸಭೆ ಐಆರ್‌ಬಿನಲ್ಲಿ ಕರೆದಿದ್ದಾರೆ. ಹೊಸ ತಂತ್ರಜ್ಞಾನ ಬಳಸಿ ಹೂಳು ತೆರವು ಬಗ್ಗೆ ಪರಿಷ್ಕರಣೆ ಆಲೋಚನೆ ಈ ಸಭೆಯ ಮುಂದೆ ಪ್ರಸ್ತಾಪವಾಗುವ ಸಾಧ್ಯತೆ ಇದೆ. ಅಲ್ಲದೇ ಸಮಾನಾಂತರ ಜಲಾಶಯದ ಬಗ್ಗೆಯೂ ಚರ್ಚೆಗಳು ನಡೆಯಲಿದ್ದು, ಜೂ. 25ರ ಸಭೆ ಅಂತಿಮ ನಿರ್ಣಯಕ್ಕೆ ಸಾಕ್ಷಿಯಾಗಲಿದೆ.






















